ಕನ್ನಡಿಗರ ಬದಲು ವಲಸಿಗರಿಗೆ ಬಿಬಿಎಂಪಿ ಮೇಯರ್ ಪಟ್ಟ : ವಾಟಾಳ್ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.1- ಬಿಬಿಎಂಪಿ ಪ್ರತಿಷ್ಠಿತ ಮೇಯರ್ ಪಟ್ಟವನ್ನು ಜೈನರಿಗೆ ನೀಡಲಾಗಿದೆ ಎಂದು ಆರೋಪಿಸಿ ಬಿಜೆಪಿ ವಿರುದ್ಧ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಬಿಬಿಎಂಪಿ ಎದುರು ಇಂದು ಪ್ರತಿಭಟನೆ ನಡೆಸಿದರು. ರಾಜಧಾನಿ ಬೆಂಗಳೂರಿನಲ್ಲಿ ವಲಸಿಗರ ಪ್ರಾಬಲ್ಯ ಹೆಚ್ಚಾಗಿದೆ. ಕನ್ನಡಿಗರು ಇಲ್ಲಿ ಅನಾಥರಾಗುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಹೊರಗಡೆಯಿಂದ ಬಂದವರಿಗೆ ಮೇಯರ್ ಪಟ್ಟ ನೀಡಿರುವುದು ಎಷ್ಟರ ಮಟ್ಟಿಗೆ ಸರಿ? ಬಿಜೆಪಿಯವರಿಗೆ ಸ್ಥಳೀಯರು ಯಾರೂ ಸಿಗಲಿಲ್ಲವೆ? ಈಗಾಗಲೇ ರಾಜಧಾನಿಯನ್ನು ಎಲ್ಲರೂ ಆವರಿಸಿಕೊಂಡಿದ್ದಾರೆ.  ಈಗ ಪ್ರಥಮ ಪ್ರಜೆಯಾಗಿ ಇವರು ಅಲಂಕರಿಸಿದರೆ ಕನ್ನಡಿಗರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಒಕ್ಕಲಿಗರನ್ನು ಮೇಯರ್ ಮಾಡಬೇಕೆಂದು ಸಾಕಷ್ಟು ಒತ್ತಡ ಹೇರಲಾಗಿತ್ತು. ಆದರೆ, ಬಿಜೆಪಿ ಪಕ್ಷ ಯಾವುದನ್ನೂ ಪರಿಗಣಿಸದೆ ಗೌತಮ್ ಅವರನ್ನು ಮೇಯರ್‍ರನ್ನಾಗಿ ಮಾಡಿದೆ. ಕನ್ನಡಿಗರನ್ನು ಕಡೆಗಣಿಸಿದೆ ಎಂದು ವಾಟಾಳ್ ಆರೋಪಿಸಿದರು.

ಗುಜರಾತಿಗಳು, ತೆಲುಗಿನವರು, ರಾಜಸ್ಥಾನಿಗಳು, ತಮಿಳರೇ ಹೆಚ್ಚಾಗಿ ರಾಜಧಾನಿಯಲ್ಲಿ ವಾಸಿಸುತ್ತಿದ್ದಾರೆ. ಕನ್ನಡಿಗರಿಗೆ ಇಲ್ಲಿ ನೆಲೆ ಇಲ್ಲದಂತಾಗಿದೆ. ರಾಜಧಾನಿ ಬೆಂಗಳೂರಿನ ಆಡಳಿತವು ಕೂಡ ಬೇರೆಯವರ ವಶವಾಗುತ್ತಿರುವುದು ದುರಂತವೇ ಸರಿ. ಇದರ ವಿರುದ್ಧ ಇಂದು ಸಾಂಕೇತಿಕವಾಗಿ ಹೋರಾಟ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ವಾಟಾಳ್ ಎಚ್ಚರಿಸಿದರು.

ಕನ್ನಡಿಗರು ರಾಜ್ಯದಲ್ಲಿ ಅಲ್ಪಸಂಖ್ಯಾತರಾಗುತ್ತಿರುವ ಅಪಾಯ ಎದುರಾಗುತ್ತಿದೆ. ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ. ಕಳೆದ ಐದು ದಶಕಗಳಿಂದಲೂ ಹೋರಾಟ ಮಾಡುತ್ತಿದ್ದರೂ ಜಾಗೃತರಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Facebook Comments