ಯಾವುದೇ ಸರ್ಕಾರ ನಾಡಧ್ವಜಕ್ಕೆ ಅಪಮಾನ ಮಾಡಿದರೆ ಹೋರಾಟ : ವಾಟಾಳ್ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.1- ನಾಡಧ್ವಜ ನಿರಂತರವಾಗಿ ಹಾರಾಡುತ್ತಿರಬೇಕು. ನಾಡಗೀತೆ ನಿರಂತರವಾಗಿ ಮೊಳಗುತ್ತಿರಬೇಕು. ಇದನ್ನು ನಿಲ್ಲಿಸುವ ಕೆಲಸವನ್ನು ಯಾವುದೇ ಸರ್ಕಾರ ಮಾಡಬಾರದು. ಇಂತಹ ಸಾಹಸಕ್ಕೆ ಕೈ ಹಾಕಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ಸಮಿತಿ ವತಿಯಿಂದ ಮೈಸೂರು ಬ್ಯಾಂಕ್ ಹತ್ತಿರ ನೃಪತುಂಗ ಮಂಟಪದಲ್ಲಿ ಆಯೋಜಿಸಿರುವ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡ ಧ್ವಜ ಹಾರಿಸುವುದನ್ನು ಯಾವುದೇ ಸರ್ಕಾರ ನಿಲ್ಲಿಸಬಾರದು. ನವೆಂಬರ್ 1ರಂದು ಕನ್ನಡ ಧ್ವಜ ಹಾರಾಡಲೇಬೇಕು. ಇದನ್ನು ನಿಲ್ಲಿಸಿ ಅಪಮಾನ ಮಾಡುವಂತಹ ಕೆಲಸಕ್ಕೆ ಕೆಲವರು ಕೈ ಹಾಕಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದರು.

ನಾಡಧ್ವಜವನ್ನು ಮೂಲೆಗುಂಪು ಮಾಡುವ ಪಿತೂರಿ ನಡೆಯುತ್ತಿದೆ. ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಾದ ಕಾಲ ಬಂದಿದೆ ಎಂದು ಅವರು ತಿಳಿಸಿದರು. ಕಳೆದ ಐದಾರು ದಶಕಗಳಿಂದಲೂ ಕನ್ನಡ ಧ್ವಜವನ್ನು ಕನ್ನಡ ರಾಜ್ಯೋತ್ಸವದಂದು ಹಾರಿಸಲಾಗುತ್ತಿದೆ. ಆದರೆ, ಸರ್ಕಾರ ಹೊಸ ಕಾನೂನು ಮಾಡಲು ಮುಂದಾಗಿರುವುದು ದುರದೃಷ್ಟಕರ. ಇದರ ವಿರುದ್ಧ ಸದ್ಯದಲ್ಲೇ ಕನ್ನಡ ಒಕ್ಕೂಟ ಸಭೆ ನಡೆಸಿ ನಾಡಧ್ವಜ ಉಳಿಸಿ ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು.

ಕನ್ನಡ ನಾಡಿಗೆ, ಕನ್ನಡ ಧ್ವಜಕ್ಕೆ, ನಾಡಗೀತೆಗೆ ತನ್ನದೇ ಆದ ಇತಿಹಾಸವಿದೆ. ಇದಕ್ಕೆ ಮುಕ್ಕಾಗುವುದಕ್ಕೆ ನಾವು ಬಿಡುವುದಿಲ್ಲ. ನಾನು ಆರು ದಶಕಗಳಿಂದಲೂ ನಾಡು, ನುಡಿ, ಗಡಿಗಾಗಿ ಹೋರಾಟ ಮಾಡುತ್ತ ಬಂದಿದ್ದೇನೆ. ಉಸಿರಿರುವವರೆಗೂ ಇದಕ್ಕಾಗಿ ಹೋರಾಟ ಮಾಡುತ್ತೇನೆ ಎಂದು ಅವರು ಹೇಳಿದರು.

Facebook Comments