ಚುನಾವಣಾ ಕಾಯ್ದೆ ಬದಲಾವಣೆಗೆ ಒತ್ತಾಯಿಸಿ ವಾಟಾಳ್ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.16-ಪದೇ ಪದೇ ಪಕ್ಷಾಂತರ ಮಾಡುವವರನ್ನು ಚುನಾವಣೆಗೆ ನಿಲ್ಲದಂತೆ ಚುನಾವಣಾ ಕಾಯ್ದೆಯನ್ನು ಸಮಗ್ರವಾಗಿ ಬದಲಾವಣೆ ಮಾಡಬೇಕೆಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಚುನಾವಣಾ ಆಯೋಗದ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದರು.

ಪಕ್ಷಾಂತರ ಮಾಡುವುದರಿಂದ ಉಪಚುನಾವಣೆಗಳು ಎದುರಾಗಿ ರಾಜ್ಯದ ಜನರ ಮೇಲೆ ಚುನಾವಣಾ ವೆಚ್ಚ ಬರುತ್ತದೆ. ಅಲ್ಲದೆ, ನೈತಿಕ ಅಧಃಪತನವಾಗುತ್ತದೆ. ಪಕ್ಷಾಂತರಿಗಳು ಜೀವನ ಪರ್ಯಂತ ಚುನಾವಣೆಗೆ ನಿಲ್ಲದಂತೆ ಕಾಯ್ದೆಯನ್ನು ಜಾರಿಗೊಳಿಸಬೇಕು ಮತ್ತು ಶಿಕ್ಷೆಯನ್ನು ವಿಧಿಸಬೇಕು. ಆ ರೀತಿ ಚುನಾವಣಾ ಕಾಯ್ದೆ ಬದಲಾಗಬೇಕು ಎಂದು ಅವರು ಹೇಳಿದರು.

ಪ್ರಸ್ತುತ ಅನರ್ಹಗೊಂಡಿರುವ 17 ಜನ ಪಕ್ಷಾಂತರ ಮಾಡಿರುವುದು ಖಾತ್ರಿಯಾಗಿದೆ. ಆಪರೇಷನ್ ಕಮಲ ನಡೆದಿರುವುದು ಸಾಬೀತಾಗಿದೆ. ರಾಜೀನಾಮೆ ನೀಡಿ ಅಜ್ಞಾತ ಸ್ಥಳದಲ್ಲಿದ್ದು ಸರ್ಕಾರವನ್ನು ಉರುಳಿಸಿ ಮತ್ತೆ ಉಪಚುನಾವಣೆಗೆ ನಿಂತಿರುವವರಿಗೆ ಜನ ತಕ್ಕ ಪಾಠ ಕಲಿಸಬೇಕು ಎಂದು ವಾಟಾಳ್ ಒತ್ತಾಯಿಸಿದರು.

ಅನರ್ಹರು ಚುನಾವಣೆಗೆ ನಿಲ್ಲದಂತೆ ಸುಪ್ರೀಂಕೋರ್ಟ್ ಆದೇಶಿಸಬೇಕಿತ್ತು. ಪ್ರಜಾಪ್ರಭುತ್ವದ ಮೇಲೆ ನಿರಂತರ ದಾಳಿ ಮಾಡುವ ವ್ಯಕ್ತಿಗಳು ಸ್ವಾರ್ಥಕ್ಕಾಗಿ ಸರ್ಕಾರಗಳನ್ನು ಬಲಿ ತೆಗೆದುಕೊಳ್ಳುತ್ತಾರೆ.ಇದಕ್ಕಾಗಿ ಚುನಾವಣಾ ಕಾಯ್ದೆಗೆ ಅಮೂಲಾಗ್ರ ಬದಲಾವಣೆ ಆಗಬೇಕಿದೆ. ಈ ನಿಟ್ಟಿನಲ್ಲಿ ಶಾಸನ ಜಾರಿಗೊಳಿಸಬೇಕು ಎಂದು ಹೇಳಿದರು.

Facebook Comments