ಎಲ್ಲಾ ಪರೀಕ್ಷೆ ರದ್ದುಮಾಡಿ ವಿದ್ಯಾರ್ಥಿಗಳನ್ನು ಪಾಸ್ ಮಾಡುವಂತೆ ವಾಟಾಳ್ ಪ್ರೊಟೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.7- ಎಸ್‍ಎಸ್‍ಎಲ್‍ಸಿ, ಫಾರ್ಮಸಿ, ಎಂಜಿನಿಯರಿಂಗ್, ಡಿಪ್ಲೊಮಾ ಸೇರಿದಂತೆ ಎಲ್ಲ ಪರೀಕ್ಷೆಗಳನ್ನು ರದ್ದುಗೊಳಿಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕೆಂದು ಒತ್ತಾಯಿಸಿ ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮೈಸೂರು ಬ್ಯಾಂಕ್ ವೃತ್ತದಲ್ಲಿಂದು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಈಗ ಪರೀಕ್ಷೆ ಬರೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ತರಗತಿಯಲ್ಲಿ ವಿದ್ಯಾರ್ಥಿಗಳ ಕಲಿಕಾ ಮಾನದಂಡ ಅನುಸರಿಸಿ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಾನ್ಪುರ್‍ನ ಐಐಟಿ ಸೇರಿದಂತೆ 12 ರಾಜ್ಯಗಳು ಈಗಾಗಲೇ ಕೊರೊನಾ ಕಾರಣದಿಂದ ಎಲ್ಲ ಪದವಿ (ಅಂತಿಮ ಪರೀಕ್ಷೆ ಹೊರತುಪಡಿಸಿ) ಪರೀಕ್ಷೆಯನ್ನು ರದ್ದುಗೊಳಿಸಿವೆ. ಎಂಜಿನಿಯರ್ಸ್, ಫಾರ್ಮಸಿ, ಡಿಪ್ಲಮೋ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ಉತ್ತೀರ್ಣಗೊಳಿಸಬೇಕೆಂದು ವಾಟಾಳ್ ಆಗ್ರಹಿಸಿದರು.

ದೇಶ ಹಾಗೂ ರಾಜ್ಯಾದ್ಯಂತ ಮಹಾಮಾರಿ ಕೊರೊನಾ ವ್ಯಾಪಿಸುತ್ತಿದೆ. ಈ ಸಂದರ್ಭದಲ್ಲಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಹಾಜರಾಗಿ ಅವರಲ್ಲಿ ಸೋಂಕು ಹರಡಿದರೆ ಮತ್ತಷ್ಟು ಆತಂಕ ಹೆಚ್ಚಾಗುತ್ತದೆ. ಹೀಗಾಗಿ ತರಗತಿಯಲ್ಲಿ ವಿದ್ಯಾರ್ಥಿಗಳ ಕಲಿಕಾ ಮಾನದಂಡ ಅನುಸರಿಸಿ ತೇರ್ಗಡೆ ಮಾಡುವುದೇ ಸೂಕ್ತ ಎಂದು ಅವರು ಹೇಳಿದ್ದಾರೆ.

ಇದಲ್ಲದೆ, ಖಾಸಗಿ ಶಿಕ್ಷಣ ಸಂಸ್ಥೆಗಳವರು ಆನ್‍ಲೈನ್ ಶಿಕ್ಷಣ ಆರಂಭಿಸಿದ್ದಾರೆ. ಹಳ್ಳಿಗಳಲ್ಲಿ ನೆಟ್‍ವರ್ಕ್ ಸಿಗುತ್ತಿಲ್ಲ, ಸರಿಯಾಗಿ ವಿದ್ಯುತ್ ಸರಬರಾಜಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಆನ್‍ಲೈನ್ ಶಿಕ್ಷಣದ ಆವಶ್ಯಕತೆ ಏನಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಸರ್ಕಾರ ಈ ಸಂಬಂಧ ಶಿಕ್ಷಣ ತಜ್ಞರು, ಆರೋಗ್ಯತಜ್ಞರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

Facebook Comments