ಆನ್‍ಲೈನ್ ಶಿಕ್ಷಣ ವಿರೋಧಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.9- ಎಲ್‍ಕೆಜಿಯಿಂದ ಆನ್‍ಲೈನ್ ಶಿಕ್ಷಣ ಮಾಡಬೇಕೆಂಬ ತಜ್ಞರ ಸಮಿತಿ ಶಿಫಾರಸನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಿನೂತನವಾಗಿ ಮೈಸೂರು ಬ್ಯಾಂಕ್ ವೃತ್ತದಲ್ಲಿಂದು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆನ್‍ಲೈನ್ ಶಿಕ್ಷಣ ಯಾವ ತರಗತಿಗೂ ಬೇಡ. ಮೂಲ ಶಿಕ್ಷಣವೇ ಮುಂದುವರಿಯಲಿ. ಆನ್‍ಲೈನ್ ಶಿಕ್ಷಣದಿಂದ ಮಕ್ಕಳಿಗೆ, ಶಿಕ್ಷಕರಿಗೆ ಇರುವ ಭಾವನಾತ್ಮಕ ಸಂಬಂಧ ಬೆಸೆಯುವುದಿಲ್ಲ. ಕೋವಿಡ್ ನಿಯಂತ್ರಣದ ನಂತರವೇ ಸರ್ಕಾರ ಶಾಲೆಗಳನ್ನು ಪ್ರಾರಂಭಿಸಲಿ. ಅಲ್ಲಿಯವರೆಗೆ ಆನ್‍ಲೈನ್ ಶಿಕ್ಷಣದಂತಹ ವ್ಯವಸ್ಥೆ ಪ್ರಾರಂಭಿಸುವುದು ಬೇಡ ಎಂದು ಹೇಳಿದರು.

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಮೊದಲು ಜನರ ಪ್ರಾಣ ಉಳಿಸಲಿ. ಜನರ ಪ್ರಾಣ ಉಳಿದ ಮೇಲೆ ಯಾವುದೇ ಯೋಜನೆ, ಯಾವುದೇ ಶಿಫಾರಸುಗಳ ಬಗ್ಗೆ ಚಿಂತನೆ ಮಾಡಲಿ. ನಮಗೆ ಈಗ ಬೇಕಿರುವುದು ಊಟ. ರೋಗಕ್ಕೆ ಔಷಧಿ. ಅದರ ಬಗ್ಗೆ ಸರ್ಕಾರ ಯೋಚಿಸಲಿ. ಅದನ್ನು ಬಿಟ್ಟು ಆನ್‍ಲೈನ್ ಶಿಕ್ಷಣದ ಬಗ್ಗೆ ಚಿಂತಿಸುವುದನ್ನು ಕೈ ಬಿಡಲಿ. ತಜ್ಞರ ಶಿಫಾರಸು ನಿರ್ಣಯವಲ್ಲ ಎಂದು ಶಿಕ್ಷಣ ಸಚಿವರಾದ ಸುರೇಶ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಅದಕ್ಕೆ ಅವರು ಬದ್ಧರಾಗಿರಲಿ. ಆನ್‍ಲೈನ್ ಶಿಕ್ಷಣ ನೀಡುವುದು ಸೂಕ್ತ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಸರ್ಕಾರ ನ್ಯಾಯಾಲಯದ ತೀರ್ಪಿನ ಸಂಬಂಧ ಮೇಲ್ಮನವಿ ಸಲ್ಲಿಸಲಿ ಎಂದು ವಾಟಾಳ್ ತಿಳಿಸಿದ್ದಾರೆ. ಆನ್‍ಲೈನ್ ಶಿಕ್ಷಣಕ್ಕಿಂತ ಪರ್ಯಾಯ ಮಾರ್ಗಗಳನ್ನು ಅನುಸರಿಸಿ ಮಕ್ಕಳಿಗೆ ಶಿಕ್ಷಣ ನೀಡುವತ್ತ ಚಿಂತನೆ ನಡೆಸಲಿ ಎಂದು ಅವರು ಹೇಳಿದ್ದಾರೆ.

Facebook Comments