ರೈತರ ಹೋರಾಟಕ್ಕೆ ಕನ್ನಡ ಒಕ್ಕೂಟ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.25- ಕೃಷಿ ಕಾಯ್ದೆ ವಿರೋಧಿಸಿ ನಾಳೆ ರಾಜಧಾನಿ ಬೆಂಗಳೂರಿನಲ್ಲಿ ರೈತರು ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ಪೆರೇಡ್‍ಗೆ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟ ಬೆಂಬಲ ನೀಡಿದೆ. ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್ ನೇತೃತ್ವದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸುವ ಮೂಲಕ ರೈತ ಚಳವಳಿಗೆ ಬೆಂಬಲ ಘೋಷಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ರೈತರ ಕರಾಳ ಮಸೂದೆ ವಿರೋಧಿಸಿ 2 ತಿಂಗಳಿನಿಂದ ದೆಹಲಿಯ ಚಳಿಯಲ್ಲಿ ಕೃಷಿಕರು ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಕಾಯ್ದೆಗಳನ್ನು ಹಿಂಪಡೆದಿಲ್ಲ. ಪ್ರಧಾನಿ ನರೇಂದ್ರಮೋದಿಯವರು ಚಳವಳಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ದೆಹಲಿ ಚಳವಳಿ ದೇಶಾದ್ಯಂತ ವ್ಯಾಪಿಸಿದೆ. ನಾಳೆ ರಾಜ್ಯದಲ್ಲೂ ತೀವ್ರ ಸ್ವರೂಪದ ಚಳವಳಿಯನ್ನು ರೈತರು ನಡೆಸುತ್ತಿರುವುದಕ್ಕೆ ಕನ್ನಡ ಒಕ್ಕೂಟ ಸಂಪೂರ್ಣ ಬೆಂಬಲ ನೀಡುತ್ತಿದೆ.

ಎಲ್ಲರೂ ಬೆಂಬಲ ನೀಡುವ ಮೂಲಕ ರೈತರಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ವಾಟಾಳ್ ಹೇಳಿದರು. ರೈತರ ಸಂಘಟನೆಗಳು, ಕಾರ್ಮಿಕ, ಮಹಿಳಾ ಸಂಘಟನೆಗಳು ನಾಳೆ ಚಳವಳಿಯಲ್ಲಿ ಪಾಲ್ಗೊಳ್ಳುತ್ತಿವೆ. ಕನ್ನಡ ಪರ ಸಂಘಟನೆಗಳು ಕೂಡ ಬೆಂಬಲ ನೀಡಬೇಕು. ಕೆಲವರು ನೈತಿಕ ಬೆಂಬಲ ಎಂದು ಹೇಳುತ್ತಿದ್ದಾರೆ. ಕೃಷಿ ಕಾಯ್ದೆಗಳು ರೈತರಿಗೆ ಮರಣಶಾಸನವಾಗಿವೆ. ಇಂತಹ ಸಂದರ್ಭದಲ್ಲಿ ನೈತಿಕ ಬೆಂಬಲ, ಆ ಬೆಂಬಲ, ಈ ಬೆಂಬಲ ಎಂದು ಹೇಳುತ್ತಾ ಕೂರಬಾರದು. ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಿ ಅದನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.

ರಾಜ್ಯದಲ್ಲೂ ಕೂಡ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿದೆ. ಈ ಕಾಯ್ದೆಗಳನ್ನು ಸರ್ಕಾರ ಹಿಂಪಡೆಯಬೇಕೆಂದು ಆಗ್ರಹಿಸಿದರು. ಸಾ.ರಾ.ಗೋವಿಂದ್ ಮಾತನಾಡಿ, ಜನವಿರೋಧಿ ಕಾಯ್ದೆಗಳ ವಿರುದ್ಧ ಕನ್ನಡ ಒಕ್ಕೂಟ ಹೋರಾಟದಲ್ಲಿ ಯಾವತ್ತೂ ಮುಂಚೂಣಿಯಲ್ಲಿರುತ್ತದೆ. ನಾಳೆ ರೈತರು ಕರೆ ಕೊಟ್ಟಿರುವ ಟ್ರ್ಯಾಕ್ಟರ್ ಪೆರೇಡ್‍ಗೆ ಕನ್ನಡ ಒಕ್ಕೂಟ ಸಂಪೂರ್ಣ ಬೆಂಬಲ ನೀಡಿದೆ. ರಾಜ್ಯದ ರೈತರ ಪರವಾಗಿ ನಾವು ನಿಲ್ಲುತ್ತೇವೆ ಎಂದು ಹೇಳಿದರು.

Facebook Comments