ರೈತ ವಿರೋಧಿ ಮಸೂದೆ ಖಂಡಿಸಿ ಎತ್ತಿನಬಂಡಿ ಚಳುವಳಿ ನಡಿಸಿದ ವಾಟಾಳ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.26- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ಮಸೂದೆ ಖಂಡಿಸಿ ಮೈಸೂರು ಬ್ಯಾಂಕ್ ವೃತ್ತದಲ್ಲಿಂದು, ಎತ್ತಿನಬಂಡಿ ಮೂಲಕ ಪ್ರತಿಭಟನೆ ನಡೆಸಲು ಮುಂದಾದ ಕನ್ನಡ ಒಕ್ಕೂಟದ ಮುಖಂಡರಾದ ವಾಟಾಳ್ ನಾಗರಾಜ್ ಹಾಗೂ ಸಾ.ರಾ.ಗೋವಿಂದು ಅವರನ್ನು ಪೊಲೀಸರು ತಡೆದರು.  ರೈತರಿಗೆ ಮರಣಶಾಸನವಾಗಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ, ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಡಾ.ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಮಂಜುನಾಥ್ ದೇವು, ಶಿವರಾಮೇಗೌಡ, ಬಾಲಾಜಿ ಕೃಷ್ಣಮೂರ್ತಿ ಮುಂತಾದವರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಎತ್ತಿನಬಂಡಿ ಚಳುವಳಿ ನಡೆಸಲು ಅನುಮತಿ ನೀಡದ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.  ವಾಟಾಳ್ ನಾಗರಾಜ್ ಮಾತನಾಡಿ, ಇದು ಪೊಲೀಸರ ಸರ್ಕಾರವಾಗಿದೆ. ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಸರ್ಕಾರದ ಕಾಯ್ದೆಗಳು ರೈತರಿಗೆ ಮರಣಶಾಸನವಾಗಿದೆ. ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು. ದೇಶಾದ್ಯಂತ ರೈತರು ಚಳುವಳಿ ನಡೆಸುತ್ತಿದ್ದಾರೆ.

ಇದಕ್ಕೆ ಬೆಂಬಲವಾಗಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದರೆ ಸರ್ಕಾರ ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ನಾವು ಯಾವುದೇ ಪೊಲೀಸರ ಕ್ರಮಕ್ಕೆ ಜಗ್ಗುವುದಿಲ್ಲ ಎಂದು ಹೇಳಿದರು.  ಸಾ.ರಾ.ಗೋವಿಂದು ಮಾತನಾಡಿ, ಪೊಲೀಸರು ಕನ್ನಡಪರ ಹೋರಾಟಗಾರರನ್ನು ನಿರಂತರವಾಗಿ ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ. ನಾಡುನುಡಿ, ನೆಲಜಲ ರಕ್ಷಣೆಯಲ್ಲಿ ಕನ್ನಡಪರ ಹೋರಾಟಗಾರರು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಾರೆ. ದೇಶಾದ್ಯಂತ ಕೃಷಿಕರು ಸಂಕಷ್ಟದಲ್ಲಿದ್ದಾರೆ.

ಮಾರಕ ಕಾಯ್ದೆಗಳನ್ನು ಜಾರಿಗೆ ತಂದು ಅವರ ಜೀವನದ ಮೇಲೆ ಸರ್ಕಾರಗಳು ಬರೆ ಎಳೆದಿವೆ. ಅದನ್ನು ವಿರೋಧಿಸಿ ಹೋರಾಟ ಮಾಡುವ ನಮ್ಮಂಥವರ ಹೋರಾಟವನ್ನು ತಡೆಯುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ನಮ್ಮನ್ನು ನಿಯಂತ್ರಿಸುವ ಕೆಲಸ ಮಾಡಿದರೆ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದ ಅವರು, ಮರಾಠ ಅಭಿವೃದ್ಧಿ ನಿಗಮವನ್ನು ಹಿಂತೆಗೆದುಕೊಳ್ಳಬೇಕು. ಕೃಷಿ ಮಸೂದೆಗಳನ್ನು ಕೂಡ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.  ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ನಮ್ಮಂಥ ಹೋರಾಟಗಾರರನ್ನು ಹತ್ತಿಕ್ಕಲು ಮುಂದಾಗುವ ಸರ್ಕಾರದ ಕ್ರಮ ದುರದೃಷ್ಟಕರ ಎಂದು ಹೇಳಿದರು.

Facebook Comments