ಕೊರೊನಾ ಉಲ್ಬಣಕ್ಕೆ ಸರ್ಕಾರವೇ ಕಾರಣ: ವಾಟಾಳ್ ಕಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.23- ಕೊರೊನಾ ಎರಡನೆ ಅಲೆ ಉಲ್ಬಣಕ್ಕೆ ಸರ್ಕಾರದ ವೈಫಲ್ಯವೇ ಕಾರಣ ಎಂದು ಹರಿಹಾಯ್ದಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಜನರ ಮರಣ ಮೃದಂಗ ತಪ್ಪಿಸಲು ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಾಚರಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ನಗರದ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಏಕಾಂಗಿ ಪ್ರತಿಭಟನೆ ನಡೆಸಿದ ಅವರು, ಕರ್ನಾಟಕ ಕೊರೊನಾ ಸೋಂಕಿನಿಂದ ಸಾವಿನ ಮನೆಯಾಗುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್‍ಗಳಿಲ್ಲ, ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ. ವೆಂಟಿಲೇಟರ್‍ಗಳಿಲ್ಲದೆ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಸರ್ಕಾರದ ಬೇಜವಾಬ್ದಾರಿತನಕ್ಕೆ ಜನಸಾಮಾನ್ಯರು ಬಲಿಯಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.

ಆಸ್ಪತ್ರೆಗಳು ನರಕ ಸದೃಶವಾಗಿವೆ. ಕರ್ನಾಟಕ ರಾಜ್ಯ ಯಮಲೋಕವಾಗುತ್ತಿದೆ ಎಂದು ಗುಡುಗಿದ ವಾಟಾಳ್, ಕಳೆದ ಬಾರಿ ಕೊರೊನಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೋವಿಡ್ ಕೇರ್ ಸೆಂಟರ್‍ಗಳನ್ನು ನಿರ್ಮಾಣ ಮಾಡಿ ಸಾವಿರಾರು ಮಂಚಗಳನ್ನು ಹಾಕಿತ್ತು. ಅಲ್ಲದೆ, ಸಾವಿರಾರು ವೆಂಟಿಲೇಟರ್‍ಗಳನ್ನೂ ಖರೀದಿ ಮಾಡಿತ್ತು. ಅವುಗಳೆಲ್ಲ ಏನಾದವು, ಇವರನ್ನು ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ.

ಈಗ ಪ್ರತಿದಿನ ಸೋಂಕಿತರ ಸಂಖ್ಯೆ 15 ಸಾವಿರಕ್ಕೆ ಏರಿಕೆಯಾಗುತ್ತಿದೆ. 150 ಜನ ಪ್ರತಿದಿನ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಯಾರು ಹೊಣೆ? ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಾದ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಕೇವಲ ಚುನಾವಣೆ, ಪ್ರಚಾರ ಭಾಷಣ, ಅಕಾರ ಹಿಡಿಯುವುದು ಅಷ್ಟಕ್ಕೇ ಸರ್ಕಾರ ಸೀಮಿತವಾಗಿದೆ. ಜನರ ಪ್ರಾಣ ರಕ್ಷಣೆ ಇವರಿಗೆ ಬೇಕಾಗಿಲ್ಲ. ಇಂತಹ ಸರ್ಕಾರ ನಮಗೂ ಬೇಕಾಗಿಲ್ಲ ಎಂದು ವಾಟಾಳ್ ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ 10 ಸಾವಿರ ಹಾಸಿಗೆಗಳುಳ್ಳ ಕೋವಿಡ್ ಸೆಂಟರ್ ನಿರ್ಮಾಣ ಮಾಡಿ ಸೋಂಕಿತರನ್ನು ಕಾಪಾಡಬೇಕು. ಪ್ರಾಣ ರಕ್ಷಣೆ ಮಾಡಬೇಕು. ಇಲ್ಲದಿದ್ದರೆ ಮತ್ತೆ ಹೋರಾಟ ಮಾಡುತ್ತೇನೆ ಎಂದು ಹೇಳಿದರು.

ಸತ್ತವರ ಸಂಸ್ಕಾರವನ್ನು ಗೌರವಯುತವಾಗಿ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಕೇಂದ್ರ ಸರ್ಕಾರ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕರ್ನಾಟಕ ಸಾವಿನ ರಾಜ್ಯವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

Facebook Comments