ಕನ್ನಡಿಗರ ಸಮಸ್ಯೆಗಳ ಪರಿಹಾರಕ್ಕೆ ವಾಟಾಳ್ ವಿನೂತನ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.28- ಲಕ್ಷ ಕಂಠಗಳ ಕನ್ನಡ ಗೀತಗಾಯನ ಕಾರ್ಯಕ್ರಮಕ್ಕಿಂತ ರಾಜ್ಯದ ಸಮಗ್ರ ಕನ್ನಡಿಗರ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ ಸರ್ಕಾರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕಿತ್ತು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.

ಸರೋಜಿನಿ ಮಹಿಷಿ ವರದಿ ಜಾರಿ, ಕನ್ನಡಿ ಗರಿಗೆ ಉದ್ಯೋಗ, ಹಿಂದಿ ಭಾಷೆ ಹೇರಿಕೆ ವಿರೋಧ, ಪರಭಾಷಿಗರ ದಬ್ಬಾಳಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾದ್ಯಗಳೊಂದಿಗೆ ವಿನೂತನವಾಗಿ ನಗರದಲ್ಲಿಂದು ಪ್ರತಿಭಟನೆ ನಡೆಸಿದ ಅವರು, ರಾಜ್ಯ ಸರ್ಕಾರ ರಾಜ್ಯೋತ್ಸವದ ಅಂಗವಾಗಿ ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ನಾಡಿನೆಲ್ಲೆಡೆ ಲಕ್ಷ ಕಂಠಗಳ ಗೀತಗಾಯನ ಕಾರ್ಯಕ್ರಮ ಹಮ್ಮಿಕೊಂಡಿದೆ.

ಇದು ಸ್ವಾಗತಾರ್ಹವಾದರೂ ಕೂಡ ಇದಕ್ಕಿಂತ ಹೆಚ್ಚಾಗಿ ಕನ್ನಡಿಗರ ಸಮಗ್ರ ಸಮಸ್ಯೆಗಳನ್ನು ಅಧ್ಯಯನ ನಡೆಸಿ ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಮುಂದಾಗಬೇಕಿತ್ತು. ಸರೋಜಿನಿ ಮಹಿಷಿ ವರದಿ ಈವರೆಗೆ ಜಾರಿಯಾಗಿಲ್ಲ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮುಚ್ಚಿ ಖಾಸಗೀಕರಣವಾಗುತ್ತಿವೆ. ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಪರಭಾಷಿಗರ ಹಾವಳಿ ಹೆಚ್ಚಾಗುತ್ತಿದೆ ಎಂದು ಹೇಳಿದರು.

ಅನಗತ್ಯವಾಗಿ ಹಿಂದಿ ಭಾಷೆಯನ್ನು ಹೇರಿಕೆ ಮಾಡಲಾಗುತ್ತಿದೆ. ಹೈಕೋರ್ಟ್, ಬ್ಯಾಂಕ್, ಅಂಚೆ ಕಚೇರಿ ಸೇರಿದಂತೆ ಎಲ್ಲೆಡೆ ಕನ್ನಡ ಬಳಕೆಯಾಗಬೇಕು. ಗಡಿನಾಡಿನಲ್ಲಿ ಕನ್ನಡ ಅಭಿವೃದ್ಧಿಯಾಗಬೇಕು. ಹೊರನಾಡು ಕನ್ನಡಿಗರಿಗೆ ವಿಶೇಷ ಅನುದಾನ ನೀಡಬೇಕು. ಕಾಸರಗೋಡು, ಸೊಲ್ಲಾಪುರ, ಹೊಸೂರು, ತಾಳವಾಡಿ, ಅಕ್ಕಲುಕೋಟೆ ಈ ಎಲ್ಲ ಪ್ರದೇಶಗಳು ಕನ್ನಡ ನಾಡಿನಲ್ಲೇ ಉಳಿಯಬೇಕು ಎಂದು ಅವರು ಆಗ್ರಹಿಸಿದರು.

ಈ ಸಮಸ್ಯೆಗಳು ಬಗೆಹರಿದರೆ ನಾಡ ರಾಜ್ಯೋತ್ಸವಕ್ಕೆ ಅರ್ಥ ಬರುತ್ತದೆ. ನಾಡಿನಾದ್ಯಂತ ಗೀತಗಾಯನ ಮೊಳಗಿಸುವ ಮೂಲಕ ಕನ್ನಡವನ್ನು ಜಾಗೃತಿಗೊಳಿಸುವುದು ಉತ್ತಮ ಬೆಳವಣಿಗೆಯಾಗಿದೆ. ಇದರ ಜತೆಗೆ ಕನ್ನಡಿಗರ ಸಮಸ್ಯೆಗಳನ್ನೂ ಬಗೆಹರಿಸಬೇಕೆಂದು ವಾಟಾಳ್ ಒತ್ತಾಯಿಸಿದರು.

Facebook Comments