ಹೊರರಾಜ್ಯದವರ ಪ್ರಭಾವ ತಡೆಯಲು ಆ.24ರಂದು ವಾಟಾಳ್ ನೇತೃತ್ವದಲ್ಲಿ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.23- ಹೊರರಾಜ್ಯದವರ ಪ್ರಭಾವದಿಂದಾಗಿ ರಾಜ್ಯದಲ್ಲಿ ಕನ್ನಡ ಮೂಲೆಗುಂಪಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಗಂಭೀರ ಚರ್ಚೆ ನಡೆಸಲು ಆ.24ರಂದು ಸಭೆ ಕರೆಯಲಾಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ರಾಜ್ಯಗಳಿಂದ ಬಂದಿರುವವರು ಕನ್ನಡ ಕಲಿಯುವುದಿಲ್ಲ, ಗೌರವ ಕೊಡುವುದಿಲ್ಲ ಹಾಗೂ ಅವರಲ್ಲಿ ಪ್ರಾಮಾಣಿಕತೆ ಇರುವುದಿಲ್ಲ. ಮಾರ್ವಾಡಿ, ತಮಿಳುನಾಡಿನವರು ಅವರದೇ ಆದ ಸಾಮ್ರಾಜ್ಯ ರೂಪಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಕನ್ನಡ ಕಲಿಯಲು ಹಾಗೂ ಗೌರವ ಕೊಡಲು ಅವರಿಗೆ ಅಭಿಮಾನವಿಲ್ಲವಾದರೆ ನಮ್ಮ ರಾಜ್ಯ ಬಿಟ್ಟು ಹೋಗಿ ಎಂದು ಹೇಳುವುದನ್ನು ಬಿಟ್ಟರೆ ನಮಗೆ ವಿಧಿಯಿಲ್ಲ. ಇದು ನಮಗೆ ಒಂದು ರೀತಿಯ ಸವಾಲಾಗಿದೆ ಎಂದರು.

ನಮ್ಮ ರಾಜ್ಯಕ್ಕೆ ಬಂದವರು ಕನ್ನಡದಲ್ಲೇ ಮಾತನಾಡಬೇಕು. ಅವರು ಕನ್ನಡದಲ್ಲೇ ವ್ಯವಹಾರ ಮಾಡಬೇಕು. ಬ್ಯಾಂಕ್‍ಗಳಲ್ಲಿ ಹಿಂದಿ ಇಂಗ್ಲಿಷ್ ಭಾಷೆಗಳದ್ದೇ ಹಾವಳಿಯಾಗಿದ್ದು, ಇದರಲ್ಲಿ ಉದ್ಯೋಗ ಸಹ ನಮ್ಮ ಕನ್ನಡದವರಿಗೆ ಸಿಗುತ್ತಿಲ್ಲ. ಆದ್ದರಿಂದ ಮೊದಲು ನಮ್ಮ ಕನ್ನಡಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದರು.

ಕೇಂದ್ರ ಸಚಿವ ಸದಾನಂದಗೌಡ ಹಾಗೂ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಅವರು ಕನ್ನಡ ಚಳವಳಿಗಾರರನ್ನು ಪುಂಡರೆಂದು ಕರೆದಿದ್ದಾರೆ. ಈ ಮಾತನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

Facebook Comments