ಮೈಸೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಾ.ರಾ.ಗೋವಿಂದು, ವಾಟಾಳ್ ವಶಕ್ಕೆ
ಮೈಸೂರು, ನ.29- ಮರಾಠಿ ಅಭಿವೃದ್ಧಿ ನಿಗಮ ರಚಿಸಿರುವ ಸರ್ಕಾರ ಕ್ರಮ ಖಂಡಿಸಿ ಕನ್ನಡ ಒಕ್ಕೂಟದ ವತಿಯಿಂದ ಮೈಸೂರಿನಲ್ಲಿಂದು ಪ್ರತಿಭಟನೆ ನಡೆಸಿದ ಕನ್ನಡ ಒಕ್ಕೂಟದ ಮುಖಂಡರಾದ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.
ಕೊಲಂಬಿಯಾ ಏಷಿಯಾ ಆಸ್ಪತ್ರೆಯ ರಾಷ್ಟ್ರೀಯ ಹೆದ್ದಾರಿ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಕನ್ನಡ ಒಕ್ಕೂಟದ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಪರಭಾಷಿಕರ ಹಾವಳಿ ಹೆಚ್ಚಾಗುತ್ತಿದೆ. ರಾಜಕಾರಣಿಗಳ ರಾಜಕೀಯ ಹಿತಾಸಕ್ತಿಗಾಗಿ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ.
ಗಡಿನಾಡು ಹೊರನಾಡಿನಲ್ಲಿ ಕನ್ನಡಿಗರು ಆತಂಕದಿಂದ ಬದುಕುವಂತಾಗಿದೆ. ಬೆಳಗಾವಿ, ಬೀದರ್, ಕಾರವಾರ ಮುಂತಾದೆಡೆ ಮರಾಠಿಗರ ಅಬ್ಬರ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಿ ಅವರಿಗೆ ಅನುಕೂಲ ಮಾಡಿಕೊಟ್ಟು, ಕನ್ನಡಿಗರಿಗೆ ದ್ರೋಹ ಮಾಡಿದೆ ಎಂದು ಹೇಳಿದರು.
ಇದನ್ನು ವಿರೋಸಿ ಡಿಸೆಂಬರ್ 5ರಂದು ಕರ್ನಾಟಕ ಬಂದ್ಗೆ ಕರೆ ಕೊಡಲಾಗಿದೆ. ನಾಡಿನಾದ್ಯಂತ ಜಾಗೃತಿ ಮೂಡಿಸಲು ವಿವಿಧೆಡೆ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಎಲ್ಲೆಡೆ ವ್ಯಾಪಕ ಬೆಂಬಲ ಸಿಕ್ಕಿದೆ. ಬಂದ್ ಯಶಸ್ವಿಯಾಗುತ್ತದೆ ಎಂದು ಹೇಳಿದರು.
ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ ಬೀದರ್ನಿಂದ ಚಾಮರಾಜನಗರವರೆಗೆ, ಬಳ್ಳಾರಿಯಿಂದ ಕೋಲಾರದವರೆಗೆ ಕನ್ನಡ ನಾಡು, ನುಡಿಗಾಗಿ ಕನ್ನಡಪರ ಹೋರಾಟಗಾರರು ನಿರಂತರ ಹೋರಾಟ ಮಾಡುತ್ತಲೆ ಬಂದಿದ್ದಾರೆ. ಮುಂದೆಯೂ ನಾವು ಹೋರಾಟ ಮಾಡುತ್ತೇವೆ ಎಂದರು.
ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡುವ ಮೂಲಕ ಸರ್ಕಾರ ಕನ್ನಡಿಗರ ಹಿತಾಸಕ್ತಿಗೆ ದಕ್ಕೆ ತಂದಿದೆ. ಇದರ ವಿರುದ್ಧ ಕನ್ನಡಿಗರು ರೊಚ್ಚಿಗೆದ್ದಿದ್ದಾರೆ. ಡಿಸೆಂಬರ್5ರಂದು ಬಂದ್ ಮಾಡುವ ಮೂಲಕ ನಮ್ಮ ತಾಕತ್ತನ್ನು ಪ್ರದರ್ಶಿಸುತ್ತೇವೆ.
ಈಗಾಗಲಾದರೂ ಸರ್ಕಾರ ಎಚ್ಚೆತ್ತು ಮರಾಠಿ ಅಭಿವೃದ್ಧಿ ನಿಗಮವನ್ನು ಹಿಂಪಡೆಯಲಿ ನಮ್ಮ ಹೋರಾಟವನ್ನು ಕೈಬಿಡುತ್ತೇವೆ. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ರಾಜ್ಯದಲ್ಲಿರುವ ಸಾವಿರಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು, ಸಾಹಿತಿಗಳು, ಪ್ರಗತಿಪರರು, ರೈತ ಸಂಘಟನೆಗಳು, ಮಹಿಳಾ ಸಂಘಟನೆಗಳು ನಮ್ಮ ನಾಡಪರ ಹೋರಾಟಕ್ಕೆ ಬೆಂಬಲ ನೀಡಿವೆ.
ಇನ್ನೂ ಸಾಕಷ್ಟು ಸಂಘಟನೆಗಳು ಬಂದ್ಗೆ ಬೆಂಬಲ ನೀಡಲಿದ್ದು, ಬಂದ್ ಸಂಪೂರ್ಣ ಯಶಸ್ವಿಯಾಗಲಿದೆ ಎಂದು ಹೇಳಿದರು. ಬಂದ್ ವಿಫಲಗೊಳಿಸಲು ಸರ್ಕಾರ ಮಾಡುತ್ತಿರುವ ಯತ್ನ ಯಾವುದೇ ಕಾರಣಕ್ಕೂ ಸಫಲವಾಗುವುದಿಲ್ಲ ಎಂದು ತಿಳಿಸಿದರು.