ಪರಭಾಷಿಗರ ಹಾವಳಿಯಿಂದ ಕನ್ನಡ ಚಿತ್ರರಂಗ ಉಳಿಸುವಂತೆ ವಾಟಾಳ್ ತಮಟೆ ಚಳವಳಿ

ಈ ಸುದ್ದಿಯನ್ನು ಶೇರ್ ಮಾಡಿ

Vatal-Nagaraj--01

ಬೆಂಗಳೂರು, ನ.9- ಪರಭಾಷಿಗರ ಹಾವಳಿಯಿಂದ ತತ್ತರಿಸಿರುವ ಕನ್ನಡ ಚಿತ್ರರಂಗವನ್ನು ಉಳಿಸಿ-ಬೆಳೆಸಬೇಕೆಂದು ಆಗ್ರಹಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ತಮಟೆ ಚಳವಳಿ ನಡೆಸಿದರು.  ಕರ್ನಾಟಕದಲ್ಲಿ ಕನ್ನಡ ಚಿತ್ರಗಳ ಪ್ರದರ್ಶನಕ್ಕಿಂತ ಪರ ಭಾಷೆಗಳ ಚಿತ್ರ ಪ್ರದರ್ಶನ ಹೆಚ್ಚಾಗಿದ್ದು, ಕನ್ನಡ ಚಿತ್ರರಂಗ ಅಧೋಗತಿಗೆ ಇಳಿಯುತ್ತಿದೆ. ಪರಭಾಷಾ ಚಿತ್ರಗಳು ರಾಜ್ಯದಲ್ಲಿ ಕೋಟಿ ಕೋಟಿ ಹಣವನ್ನು ಬಾಚುತ್ತಿವೆ. ಆದರೆ, ಥಿಯೇಟರ್‍ಗಳು ಸಿಗದೆ ಕನ್ನಡ ಚಿತ್ರಗಳಿಗೆ ಹಾಕಿದ ಹಣ ಬರದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕನ್ನಡ ಚಿತ್ರರಂಗ ಉಳಿಯಬೇಕಾದರೆ ಎಲ್ಲ ಥಿಯೇಟರ್‍ಗಳಲ್ಲಿ ಕನ್ನಡ ಚಿತ್ರಗಳಿಗೆ ಅವಕಾಶ ಸಿಗಬೇಕು. ಪರಭಾಷೆ ಚಿತ್ರಗಳಿಗೆ ಎರಡು ಮೂರು ಚಿತ್ರಮಂದಿರಗಳಲ್ಲಿ ಮಾತ್ರ ಪ್ರದರ್ಶನಕ್ಕೆ ಅವಕಾಶ ನೀಡಬೇಕು. ಉಳಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳು ಪ್ರದರ್ಶನವಾಗಬೇಕೆಂದು ವಾಟಾಳ್ ಆಗ್ರಹಿಸಿದರು.

ಅನೇಕ ಕನ್ನಡ ಚಿತ್ರಗಳು ನಷ್ಟದಲ್ಲಿವೆ. ಅಂತಹ ಚಿತ್ರಗಳಿಗೆ ಆದ್ಯತೆ ನೀಡಬೇಕು ಎಂದ ಅವರು, ಇತ್ತೀಚೆಗೆ ಕೌಟುಂಬಿಕ ಚಿತ್ರಗಳು ಬರುತ್ತಿಲ್ಲ. ಕೇವಲ ಹೊಡಿ, ಬಡಿ ಚಿತ್ರಗಳೇ ಬರುತ್ತಿವೆ. ಸಾಮಾಜಿಕ ಕಳಕಳಿ, ಸಮಾಜಕ್ಕೆ ಸಂದೇಶ ನೀಡುವಂತಹ ಚಿತ್ರಗಳು ಕಡಿಮೆಯಾಗಿವೆ. ಪರಭಾಷೆ ಚಿತ್ರಗಳ ಹಾವಳಿ ಹೆಚ್ಚಾಗಿದ್ದು, ಕನ್ನಡ ಚಲನಚಿತ್ರ ನಟ, ನಟಿಯರು, ಕಾರ್ಮಿಕರಿಗೆ ಅನ್ಯಾಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪರಭಾಷೆ ಚಿತ್ರಗಳ ಪ್ರದರ್ಶನವನ್ನು ರಾಜ್ಯದಲ್ಲಿ ನಿಯಂತ್ರಿಸಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂದು ಅವರು ಹೇಳಿದರು.

ಸದ್ಯದಲ್ಲೇ ತಮಿಳುನಟ ರಜನಿಕಾಂತ್ ಅವರ ಚಿತ್ರ 2.ಟ ತೆರೆ ಕಾಣಲಿದ್ದು, ಎಲ್ಲಾ ಚಿತ್ರಮಂದಿರಗಳು ಬುಕ್ ಆಗಲಿವೆ. ಇದರಿಂದ ಕನ್ನಡ ಚಿತ್ರಗಳಿಗೆ ನಷ್ಟವಾಗಲಿದೆ. ಇದನ್ನು ವಿರೋಧಿಸಿ ನಾವು ಕನ್ನಡ ಒಕ್ಕೂಟದಿಂದ ಚಿತ್ರಮಂದಿರದ ಬಳಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ತಿಳಿಸಿದರು. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ಉತ್ತುಂಗದಲ್ಲಿತ್ತು. ಎಲ್ಲಾ ಚಿತ್ರಮಂದಿರಗಳಲ್ಲೂ ಕನ್ನಡ ಚಿತ್ರಗಳು ಪ್ರದರ್ಶನವಾಗುತ್ತಿದ್ದವು. ಈಗ ದುರ್ಬಿನ್ ಹಾಕಿಕೊಂಡು ಹುಡುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪರಭಾಷೆ ಚಿತ್ರಗಳಿಗೆ ಅವಕಾಶ ಕೊಡುತ್ತಿರುವುದು ಹೆಚ್ಚಾಗಿರುವುದು ಇದಕ್ಕೆ ಕಾರಣವಾಗಿದೆ. ಇದು ನಿಲ್ಲದಿದ್ದರೆ ಮುಂದೊಂದು ದಿನ ಕನ್ನಡ ಚಿತ್ರರಂಗ ಇತಿಹಾಸ ಸೇರಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

Facebook Comments