ತಮಿಳುನಾಡು ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.26- ಕಾವೇರಿ ನದಿ ಜೋಡಣೆ ಸಂಬಂಧ ಏಕಾಏಕಿ 115ಕಿಮೀ ಉದ್ದದ ಕಾಲುವೆ ತೋಡಲು ಹೊರಟಿರುವ ತಮಿಳುನಾಡು ಸರ್ಕಾರದ ಕ್ರಮ ಖಂಡಿಸಿ ಕನ್ನಡ ಒಕ್ಕೂಟ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ತಮಿಳುನಾಡಿನಲ್ಲಿ ಬಿಜೆಪಿ ಚುನಾವಣೆ ಗೆಲ್ಲಲು ಕೇಂದ್ರ ಸರ್ಕಾರ ರಾಜ್ಯದ ಕಾವೇರಿ ನದಿಯನ್ನು ಬಲಿ ಕೊಡುತ್ತಿದೆ ಎಂದು ಆರೋಪಿಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಈ ಕ್ರಮದಿಂದ ಹಿಂದೆ ಸರಿಯದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕಾವೇರಿಗೆ ಮತ್ತೆ ಸಂಕಷ್ಟ ಬಂದಿದೆ. ರಾಜ್ಯ ಸರ್ಕಾರ ತೀವ್ರ ನಿರ್ಲಕ್ಷ್ಯ ವಹಿಸಿದೆ. ತಮಿಳುನಾಡು ಸರ್ಕಾರ ಕಾವೇರಿ ನದಿ ಜೋಡಣೆ ಸಂಬಂಧ 117ಕಿಮೀ ಉದ್ದದ ಕಾಲುವೆ ತೋಡಲು ಕಳೆದ 6 ತಿಂಗಳಿನಿಂದ ಪ್ರಕ್ರಿಯೆ ಆರಂಭಿಸಿ ನೀಲಿ ನಕಾಷೆ ತಯಾರು ಮಾಡಿದೆ.

ಕೇಂದ್ರ ಸರ್ಕಾರ ಇದಕ್ಕೆ ಅಗತ್ಯವಾದ 700 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಇದನ್ನು ಉದ್ಘಾಟನೆ ಮಾಡಲು ಪ್ರಧಾನಮಂತ್ರಿಗಳು ಕೂಡ ಬರುತ್ತಿದ್ದಾರೆ. ಹೀಗಿದ್ದಾಗ್ಯೂ ಕೂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗುಡುಗಿದರು.

ಕಾವೇರಿ ನದಿ ನೀರು ಹಂಚಿಕೆಯಲ್ಲೂ ನಮಗೆ ಅನ್ಯಾಯವಾಗಿದೆ. ಹೆಚ್ಚುವರಿ ನೀರು ಬಳಕೆ ಮಾಡಲು ನಮ್ಮಲ್ಲೇ ನಾವು ಡ್ಯಾಂ ಕಟ್ಟಿಕೊಳ್ಳಬೇಕು. ಆದರೆ, ತಮಿಳುನಾಡು ಸರ್ಕಾರ ಈಗ ನೂರಾರು ಕಿಲೋ ಮೀಟರ್ ಉದ್ದದ ಕಾಲುವೆ ಕಟ್ಟಿಕೊಂಡು ಈ ರೀತಿ ನೀರು ಬಳಕೆ ಮಾಡಿಕೊಂಡರೆ ಮುಂದೆ ನಮಗೆ ಕುಡಿಯಲು ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಮೇಕೆದಾಟು ಯೋಜನೆ ನಿರ್ಮಾಣ ಮಾಡಲು ತಮಿಳುನಾಡು ಸರ್ಕಾರ ಅಡ್ಡಿಪಡಿಸಿತ್ತು. ಈಗ ಕಾವೇರಿ ನದಿ ಜೋಡಣೆಯನ್ನು ಗೌಪ್ಯವಾಗಿ ಮಾಡುತ್ತಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಏನು ಮಾಡುತ್ತಿದೆ, ಈ ಯೋಜನೆ ತಡೆಯುವಲ್ಲಿ ಕರ್ನಾಟಕ ಸರ್ಕಾರ ವಿಫಲವಾಗಿದೆ.

ಕೇಂದ್ರ ಸರ್ಕಾರ ಕರ್ನಾಟಕವನ್ನು ಕಡೆಗಣಿಸಿ ತಮಿಳುನಾಡಿಗೆ ಯೋಜನೆಗೆ ಹಣ ನೀಡುತ್ತಿದೆ. ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಮೊದಲಿನಿಂದಲೂ ಅನ್ಯಾಯವಾಗುತ್ತಿದೆ. ಇದರ ವಿರುದ್ಧ ಕನ್ನಡಪರ ಹೋರಾಟಗಾರರು ನಿರಂತರವಾಗಿ ಪ್ರತಿಭಟನೆ ಮಾಡುತ್ತಲೇ ಬಂದಿದ್ದೇವೆ. ಮುಂದೆಯೂ ಕೂಡ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.

Facebook Comments

Sri Raghav

Admin