ತಮಿಳುನಾಡು ಸರ್ಕಾರದ ನಡೆ ವಿರುದ್ಧ ವಾಟಾಳ್ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.12- ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಅವರು ಕರೆದಿರುವ ಸರ್ವಪಕ್ಷಗಳ ಸಭೆ ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ತಮಿಳುನಾಡು ಮುಖ್ಯಮಂತ್ರಿ ಸ್ಟ್ಯಾಲಿನ್ ಅವರ ಭೂತ ದಹನ ಮಾಡಲು ಮುಂದಾದ ವಾಟಾಳ್ ಕ್ರಮವನ್ನು ತಡೆದ ಪೊಲೀಸ್ ಕ್ರಮಕ್ಕೆ ವಾಟಾಳ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಯನ್ನು ಕೂಡಲೇ ಆರಂಭಿಸಬೇಕು. ಮೇಕೆದಾಟು ಯೋಜನೆ ಸಂಬಂಧ ತಮಿಳುನಾಡು ಸರ್ಕಾರ ಸರ್ವಪಕ್ಷಗಳ ಸಭೆ ಕರೆದಿರುವುದು ತೀವ್ರ ಖಂಡನೀಯ. ನಮ್ಮ ನೆಲದಲ್ಲಿ ನಮ್ಮ ಜಲದ ಯೋಜನೆ ಸಂಬಂಧ ಕಾಮಗಾರಿ ಪ್ರಾರಂಭಿಸಲು ಯಾರ ಅನುಮತಿಯೂ ನಮಗೆ ಬೇಕಾಗಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮಿಳುನಾಡು ಸಿಎಂಗೆ ಪತ್ರ ಬರೆದಿರುವುದು ಕನ್ನಡ ವಿರೋಧಿ ಧೋರಣೆಯಾಗಿದೆ. ನಾಡಿನ ಹಿತಾಸಕ್ತಿಗೆ ಧಕ್ಕೆಯಾಗಿದೆ ಎಂದು ಹೇಳಿದರು.

ತಮಿಳುನಾಡಿಗೆ ಮೇಕೆದಾಟು ಯೋಜನೆಯನ್ನು ವಿರೋಧಿಸುವ ಯಾವುದೇ ಹಕ್ಕಿಲ್ಲ. ಅವರು ಸರ್ವಪಕ್ಷಗಳ ಸಭೆ ಕರೆದು ಚರ್ಚಿಸುವಂತೆಯೂ ಇಲ್ಲ ಎಂದು ವಾಟಾಳ್ ಗುಡುಗಿದರು. ನಮ್ಮ ರಾಜ್ಯದ ಆಡಳಿತಾರೂಢ ಪಕ್ಷ , ವಿರೋಧ ಪಕ್ಷವಾಗಲಿ ಈ ಬಗ್ಗೆ ಪ್ರಬಲ ದನಿ ಎತ್ತದೇ ಇರುವುದು ವಿಷಾದನೀಯ. ಕನ್ನಡ ಪರ ಹೋರಾಟಗಾರರಾದ ನಾವು ಯೋಜನೆಯ ಪರವಾಗಿ ದನಿ ಎತ್ತಿ ಹೋರಾಟ ಮಾಡಲು ಮುಂದಾದರೆ ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆಯನ್ನು ವಿಳಂಬ ಮಾಡದಂತೆ ಈ ಕೂಡಲೇ ಆರಂಭಿಸಬೇಕೆಂದು ಹೇಳಿದ ಅವರು, ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ಉಗ್ರಗೊಳಿಸುತ್ತೇವೆ ಎಂದರು.

Facebook Comments