ಬೆಲೆ ಏರಿಕೆ ಖಂಡಿಸಿ ಉಪ್ಪಿನ ಅಭಿಷೇಕ ಮಾಡಿ ವಾಟಾಳ್ ವಿಭಿನ್ನ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.17- ಪೆಟ್ರೋಲ್, ಡೀಸೆಲ್ ಹಾಗೂ ಸಿಲಿಂಡರ್ ದರ ಏರಿಕೆ ಖಂಡಿಸಿ ನಗರದ ಕೆಂಪೇಗೌಡ ನಿಲ್ದಾಣದಲ್ಲಿ ಬೆಲೆ ಏರಿಕೆ ಭೂತಕ್ಕೆ ಉಪ್ಪಿನ ಅಭಿಷೇಕ ಮಾಡುವ ಮೂಲಕ ಕನ್ನಡ ಚಳವಳಿ ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಇಂಧನ ಬೆಲೆ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಅಕ್ಕಿ, ರಾಗಿ, ಗೋ, ಹಣ್ಣು, ತರಕಾರಿಗಳ ಬೆಲೆ ಕೂಡ ಗಗನಮುಖಿಯಾಗಿದೆ. ಅಡುಗೆ ಎಣ್ಣೆ ಸೇರಿದಂತೆ ಎಲ್ಲ ಪದಾರ್ಥಗಳ ಬೆಲೆ ಏರಿಕೆಯಾಗುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆ ಅನುಸರಿಸಿ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುತ್ತಿವೆ ಎಂದು ಆರೋಪಿಸಿದರು.

ಜನರು ಬೆಲೆ ಏರಿಕೆ ವಿರುದ್ಧ ಹೋರಾಟಕ್ಕಿಳಿಯಬೇಕು. ಇಲ್ಲದಿದ್ದರೆ ಸರ್ಕಾರಗಳು ಎಚ್ಚೆತ್ತುಕೊಳ್ಳುವುದಿಲ್ಲ. ತೈಲಬೆಲೆ ನಿರಂತರ ಏರಿಕೆಯಾಗುತ್ತಿರುವುದರಿಂದ ಸರಕು-ಸಾಗಣೆ ವೆಚ್ಚ, ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಇದರ ವಿರುದ್ಧ ಮಾಡಬೇಕಾದ ಚಳವಳಿ, ಹೋರಾಟಗಳು ನಿಷ್ಕ್ರಿಯವಾಗುತ್ತಿರುವುದು ಕೂಡ ದುರ್ದೈವದ ಸಂಗತಿಯಾಗಿದೆ ಎಂದು ಅವರು ಹೇಳಿದರು.

ಅಂದು ಮಹಾತ್ಮ ಗಾಂೀಜಿ ಉಪ್ಪಿಗೋಸ್ಕರ ದಂಡಿ ಸತ್ಯಾಗ್ರಹ ನಡೆಸಿದರು. ಉಪ್ಪು ಕೂಡ ಇಂದು ತುಟ್ಟಿಯಾಗಿದೆ. ಅತ್ಯಂತ ಕಡಿಮೆ ಬೆಲೆಗೆ ಅಥವಾ ಉಚಿತವಾಗಿ ಸಿಗಬೇಕಾಗಿದ್ದ ಉಪ್ಪಿನ ಬೆಲೆಯೂ ಕೂಡ ಏರಿಕೆಯಾಗಿದೆ. ಈ ಮಟ್ಟಿನ ಬೆಲೆ ಏರಿಕೆಯನ್ನು ಯಾವ ಸಂದರ್ಭದಲ್ಲಿಯೂ ನೋಡಿರಲಿಲ್ಲ ಎಂದು ಅವರು ಹೇಳಿದರು.

ರಾಜಕೀಯ ಪಕ್ಷಗಳು ಶ್ರೀಮಂತರ ಕೈಯಲ್ಲಿವೆ. ಐಶಾರಾಮಿ ಹೊಟೇಲ್‍ಗಳಲ್ಲಿ ಸಭೆ-ಸಮಾರಂಭಗಳನ್ನು ನಡೆಸುವ ಇವರಿಗೆ ಜನಸಾಮಾನ್ಯರ ಕಷ್ಟಗಳು ಅರ್ಥವಾಗುವುದಿಲ್ಲ. ಹಾಗಾಗಿ ಬೆಲೆ ಏರಿಕೆ ಬಗ್ಗೆ ರಾಜಕೀಯ ಪಕ್ಷಗಳು ಸೊಲ್ಲೆತ್ತುತ್ತಿಲ್ಲ. ಕಾಟಾಚಾರಕ್ಕೆ ಹೋರಾಟ ಮಾಡುತ್ತಿವೆ ಎಂದು ವಾಟಾಳ್ ಗುಡುಗಿದರು.

Facebook Comments