ಚೆನ್ನಮ್ಮ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕ ಮಾಡಲು ಸರ್ಕಾರ ಬದ್ಧ : ಸಿಎಂ
ಬೆಂಗಳೂರು,ಅ.23-ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ವೀರರಾಣಿ ಕಿತ್ತೂರು ಚನ್ನಮ್ಮನವರ ಜನ್ಮಸ್ಥಳ, ಕೋಟೆ ಹಾಗೂ ಬೆಳಗಾವಿಯಲ್ಲಿರುವ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ನಗರದ ರವೀಂದ್ರ ಕಲಾಕ್ಷೇತ್ರ ದಲ್ಲಿ ನಡೆದ ಕಿತ್ತೂರು ಚನ್ನಮ್ಮ ಉತ್ಸವದಲ್ಲಿ ಪಾಲ್ಗೊಂಡು ಮಾತ ನಾಡಿದ ಅವರು, ಬ್ರಿಟಿಷರ ವಿರುದ್ದ ಸಮರ ಸಾರಿ ಅವರ ಸೈನ್ಯವನ್ನು ಹಿಮ್ಮೆಟ್ಟಿಸಿದ ಸವಿನೆನಪಿಗಾಗಿ ಕಿತ್ತೂರು ಉತ್ಸವ ಆಚರಣೆ ಮಾಡಲಾಗುತ್ತದೆ. ಚನ್ನಮ್ಮ ಇಂದಿನ ಎಲ್ಲ ಹೆಣ್ಣುಮಕ್ಕಳಿಗೂ ಪ್ರೇರಣಾಶಕ್ತಿಯಾಗಿದ್ದಾರೆ ಎಂದರು.
ಈ ಬಾರಿ ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಸಾಕಷ್ಟು ಅನಾಹುತವಾಗಿದೆ. ಅದನ್ನು ಸರಿಪಡಿಸುವುದು ನಮ್ಮ ಮೊದಲ ಆದ್ಯತೆ. ತದನಂತರದಲ್ಲಿ ಜಯಂತಿಯಲ್ಲಿನ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು. ತಮ್ಮ ಮುಂದೆ ಸ್ವಾಮೀಜಿ ಮನವಿ ಇಟ್ಟಿದ್ದಾರೆ. ಅದರಲ್ಲಿ ಯಾವುದನ್ನು ಸಾಕಾರ ಮಾಡಬಹುದು ಎಂಬುದನ್ನು ಪರಿಶೀಲಿಸುತ್ತೇನೆ. ನಂತರ ಬೇಡಿಕೆ ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.
ಕೂಡಲ ಸಂಗಮ ಮಹಾಪೀಠದ ಶ್ರೀ ಜಯ ಬಸವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ ವೀರಮರಣ್ಣವನ್ನಪ್ಪಿದ್ದರು ಈ ಬಾರಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯನ್ನು ವಿಜೃಂಭಣೆಯಿಂದ ಮಾಡದೆ ಅದರ 70 ಲಕ್ಷ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುತ್ತಿದ್ದೇವೆ ಎಂದರು.
ಇದೇ ವೇಳೆ ಬೆಳಗಾವಿಯಲ್ಲಿನ ಚನ್ನಮ್ಮ ಸಮಾಧಿ , ಜನ್ಮಸ್ಥಳ ಹಾಗೂ ಕೋಟೆಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಬೇಕು. ಬೆಳಗಾವಿ ವಿಮಾನ ನಿಲ್ದಾಣಕ್ಕೆ ಚನ್ನಮ್ಮ ಹೆಸರು ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬೆಳವಡಿ ಮಲ್ಲಮ್ಮ ಹೆಸರಿಡಬೇಕು, ಸಂಗೊಳ್ಳಿ ರಾಯಣ್ಣ ಖಡ್ಗವನ್ನು ಮರಳಿ ತರಬೇಕು, ಶಾಲಾ ಮಟ್ಟದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣೆಗೆ ನಿರ್ದೇಶನ ನೀಡಬೇಕು, ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಘೋಷಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಯಿತು. ಈ ಪಂಚ ಮನವಿಗಳನ್ನು ಮುಖ್ಯಮಂತ್ರಿ ಯವರಿಗೆ ಸಲ್ಲಿಸಲಾಯಿತು.