ಕಾಂಗ್ರೆಸ್ ಬಲವರ್ಧನೆಗೆ ಇದು ಸಕಾಲ : ವೀರಪ್ಪ ಮೋಯ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜೂ.10-ರಾಹುಲ್‍ಗಾಂಧಿ ಅವರ ಪರಮಾಪ್ತ ಎಂದೇ ಗುರುತಿಸಿಕೊಂಡಿದ್ದ ಜಿತಿನ್‍ಪ್ರಸಾದ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಳ್ಳುತ್ತಿದ್ದಂತೆ ಮತ್ತೆ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಪ್ರಶ್ನೆ ಎದುರಾಗಿದೆ.

ಕಾಂಗ್ರೆಸ್ ಪಕ್ಷದ ಸಧ್ಯದ ಪರಿಸ್ಥಿತಿ ಕುರಿತಂತೆ ಮಾತನಾಡಿರುವ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೋಯ್ಲಿ ಅವರು, ಪಕ್ಷದ ಹಿರಿಯ ನಾಯಕರಿಗೆ ಜವಬ್ದಾರಿ ನೀಡಲು ಆಧ್ಯತೆ ನೀಡಿ ಇಡೀ ಪಕ್ಷಕ್ಕೆ ಮೇಜರ್ ಸರ್ಜರಿ ಮಾಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಿತಿನ್ ಅವರ ಸೈದ್ದಾಂತಿಕ ನಿಲುವು ಯಾವಾಗಲೂ ಅನುಮಾನಕ್ಕೆ ಎಡೆ ಮಾಡಿಕೊಡುವಂತಿತ್ತು. ಅವರ ಉಸ್ತುವಾರಿಯಲ್ಲಿ ನಡೆದ ಬಂಗಾಳ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಗಳಿಸಲು ಸಾಧ್ಯವಾಗಲಿಲ್ಲ. ಅಂತಹ ವ್ಯಕ್ತಿ ಸ್ವ ಹಿತಾಸಕ್ತಿಯಿಂದ ಪಕ್ಷ ತ್ಯಜಿಸಿದ್ದಾರೆ. ಅದರಿಂದ ನಮ್ಮ ಪಕ್ಷಕ್ಕೆ ಯಾವುದೆ ಅಪಾಯವಿಲ್ಲ ಎಂದು ಅವರು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಒಬ್ಬ ಮುಖಂಡ ಜನನಾಯಕನಾಗಲು ಸಾಧ್ಯವಿಲ್ಲ ಎಂದಾದಾಗ ಉನ್ನತ ಮುಖಂಡರು ಪಕ್ಷದಲ್ಲಿರುವ ಇತರ ನಾಯಕರಿಗೆ ಜವಬ್ದಾರಿ ನೀಡುವತ್ತ ಗಮನ ಹರಿಸುವುದು ಸೂಕ್ತ ಎಂದು ಮೋಯ್ಲಿ ಸಲಹೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತೆ ಪುಟಿದು ಮೇಲೆ ಬರಬೇಕಾದರೆ, ಇಂತಹ ನಡೆಗಳ ಬಗ್ಗೆ ಮುಖಂಡರು ಚಿತ್ತ ಹರಿಸುವ ಅವಶ್ಯಕತೆ ಇದೆ ಎಂದಿದ್ದಾರೆ ಅವರು.

ಪಕ್ಷದಲ್ಲಿ ನಿಷ್ಠಾವಂತರಾಗಿ ದುಡಿಯುತ್ತಿರುವ ನಾಯಕರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ಅವಶ್ಯಕತೆ ಇದೆ. ಇಲದಿದ್ದರೆ ಪರಿಸ್ಥಿತಿ ಸುಧಾರಿಸುವುದಿಲ್ಲ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಸೈದ್ಧಾಂತಿಕ ಸಿದ್ದಾಂತವಿಲ್ಲದವರಿಗೆ ಉನ್ನತ ಸ್ಥಾನ ನೀಡಿದರೆ  ಏನಾಗುತ್ತದೆ ಎಂಬುದಕ್ಕೆ ಜಿತಿನ್ ಪ್ರಸಾದ್ ಅವರ ಪ್ರಕರಣವೇ ಉದಾಹರಣೆ ಎಂದಿದ್ದಾರೆ ಮೋಯ್ಲಿ.

2019ರ ಚುನಾವಣೆಯ ಸೋಲಿನ ನಂತರವೇ ಪಕ್ಷವನ್ನು ಪುನರ್ ರಚಿಸಬೇಕಿತ್ತು. ಅದರೆ ವರಿಷ್ಠರು ನಿಧಾನಗತಿಗೆ ಮೊರೆ ಹೋದರು. ಈಗಲೂ ಕಾಲ ಮಿಂಚಿಲ್ಲ. ಭವಿಷ್ಯದ ದೃಷ್ಟಿಯಿಂದ ತಕ್ಷಣ ಪಕ್ಷವನ್ನು ಪುನರ್ ಸಂಘಟಿಸಲು ವರಿಷ್ಠರು ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಮುಂದಿನ ವರ್ಷ ಏಳು ರಾಜ್ಯಗಳಿಗೆ ಚುನಾವಣೆ ನಡೆಯುತ್ತಿದೆ. ನಂತರದ ವರ್ಷದಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವುದರಿಂದ ಈಗಲೇ ಎಚ್ಚೆತ್ತುಕೊಂಡು ಭೂತಕಾಲದ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಿದರೆ ನಾವು ಉತ್ತಮ ಫಲಿತಾಂಶ ಪಡೆಯಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Facebook Comments

Sri Raghav

Admin