ವದಂತಿಗಳಿಗೆ ಯಾರೂ ಕಿವಿಗೊಡಬೇಡಿ : ವೀರೇಂದ್ರ ಹೆಗ್ಗಡೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ತಂಗಡಿ: ಧರ್ಮಸ್ಥಳದ ಮಂಜುನಾಥ ಸ್ವಾಮೀ ಸನ್ನಿದಾನದಲ್ಲಿ ನಂದಾ ದೀಪ ಆರಿ ಹೋಗಿದೆ ಎಂಬ ಸುಳ್ಳು ವದಂತಿಯಿಂದ ಜನ ರಾತ್ರಿಯೆಲ್ಲಾ ಜಾಗರಣೆ ಮಾಡಿ, ದೀಪ ಹಚ್ಚಿದ ಘಟನೆ ನಡೆದಿದೆ. ಕೆಲವು ಕಿಡಿಗೇಡಿಗಳು ಇಂತಹ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದು ದೇವಾಲಯದ ಅಪಾರ ಭಕ್ತರು ರಂಗೋಲಿ ಬಿಡಿಸಿ ರಾತ್ರಿ ಇಡೀ ದೀಪ ಬೆಳಗಿಸಿ ಮಂಜುನಾಥನ ಭಜನೆ ಮಾಡಿರುವ ಘಟನೆ ನಡೆದಿದೆ.

ದಾವಣಗೆರೆ ಮತ್ತು ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳ ಜನರಲ್ಲಿ ಆತಂಕ ಎದುರಾಗಿದೆ. ವದಂತಿ ನಂಬಿದ ಜನ ಕೆಲವು ಜಿಲ್ಲೆಗಳಲ್ಲಿ ಜಾಗರಣೆ ಮಾಡಿದ್ದಾರೆ. ಸುಳ್ಳು ವದಂತಿಯನ್ನು ನಂಬಿ ಮನೆಯಲ್ಲಿ ದೀಪ ಹಚ್ಚಿದ್ದಾರೆ ಎನ್ನಲಾಗಿದೆ. ಮೊದಲೇ ಮಹಾಮಾರಿ ಕೊರೋನಾ ವೈರಸ್ ಆತಂಕದಲ್ಲಿರುವ ಜನ ಗಾಳಿ ಸುದ್ದಿಯನ್ನು ನಂಬಿ ಜಾಗರಣೆ ಮಾಡಿ, ದೀಪ ಹಚ್ಚಿದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ, ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ರಾತ್ರಿ 8 ಗಂಟೆಗೆ ಬಾಗಿಲನ್ನು ಹಾಕಲಾಗುತ್ತದೆ(ಬೀಗಮುದ್ರೆ) ಮರುದಿನ ಮುಂಜಾನೆ 5ಗಂಟೆಗೆ ಬಾಗಿಲನ್ನು ತೆರೆಯುತ್ತಾರೆ. ಮಧ್ಯದಲ್ಲಿ ಯಾರೊಬ್ಬರಿಗೂ ಪ್ರವೇಶಿಸುವ ಅವಕಾಶ ಇರುವುದಿಲ್ಲ ನಂತರ ದೇವಸ್ಥಾನದ ಒಳಗೆ ಪ್ರವೇಶಿದವರು ಯಾರು? ಅಲ್ಲಿ ನಂದಾ ದೀಪ ನಂದಿ ಹೋಗಿದೆ ಎಂಬುವುದಾಗಿ ನೋಡಿದವರು ಯಾರು? ಇದು ಭಕ್ತಾಧಿಗಳ ಭಾವನೆ ಮತ್ತು ನಂಬಿಕಗಳೊಂದಿಗೆ ಕೆಲವು ಕಿಡಿಗೇಡಿಗಳು ಮಾಡಿರುವ ಸುಳ್ಳು ವದಂತಿಯಾಗಿದೆ.

ಭಕ್ತಾದಿಗಳು ಇದಕ್ಕೆ ಕಿವಿಗೊಡಬಾರದಾಗಿ ವಿನಂತಿ. ಎಲ್ಲರೂ ಲೋಕಕ್ಕೆ ಬಂದಿರುವ ಮಹಾಮಾರಿ ಕೊರೊನಾ ವೈರಸ್ ನಿಂದ ಮುಕ್ತವಾಗಲು ಎಲ್ಲರೂ ತಮ್ಮ ತಮ್ಮ ಮನೆಯ ಒಳಗಡೆಯಿಂದಲೇ ಶ್ರೀ ಮಂಜುನಾಥ ಸ್ವಾಮಿಯನ್ನು ಪ್ರಾರ್ಥಿಸೋಣ ಎಂದು ಭಕ್ತರ ಬಳಿ ಮನವಿ ಮಾಡಿಕೊಂಡಿದ್ದಾರೆ.

Facebook Comments

Sri Raghav

Admin