ಸ್ವಯಂ ಸ್ಫೂರ್ತಿಯಿಂದ ರಕ್ಷಣಾ ಕಾರ್ಯಕ್ಕೆ ಸದಾ ಬದ್ಧರಾಗಿರಬೇಕು : ವೀರೇಂದ್ರ ಹೆಗ್ಗಡೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ತಂಗಡಿ, ಜೂ.23-ಸ್ವಯಂ ಸೇವಕರು ಧೈರ್ಯ, ತ್ಯಾಗ, ಆತ್ಮವಿಶ್ವಾಸ ಮತ್ತು ಸೇವಾ ಮನೋಭಾವ ಹೊಂದಿದ್ದು, ಸ್ವಯಂ ಸ್ಪೂರ್ತಿಯಿಂದ ರಕ್ಷಣಾ ಕಾರ್ಯಕ್ಕೆ ಸದಾ ಬದ್ಧರಾಗಿರಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಸಹಭಾಗಿತ್ವದಲ್ಲಿ ಧರ್ಮಸ್ಥಳದಲ್ಲಿ ಆಯೋಜಿಸಿದ್ದ ವಿಪತ್ತು ನಿರ್ವಹಣೆ ಕಾರ್ಯಕ್ರಮದ ಲೋಕಾರ್ಪಣೆ ಮತ್ತು ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಪತ್ತಿನ ಸಂದರ್ಭದಲ್ಲಿ ಸ್ವಯಂ ಸೇವಕರು ತಕ್ಷಣ ಸ್ಪಂದಿಸಬೇಕು. ಮೊದಲು ತಮ್ಮನ್ನು ತಾವು ರಕ್ಷಣೆ ಮಾಡಿಕೊಂಡು ಬಳಿಕ ಇತರರ ರಕ್ಷಣೆಗೆ ನೆರವಾಗಬೇಕು. ಪ್ರಜ್ಞಾವಂತರಾಗಿ ತಾವೂ ಬದುಕಿ, ಇತರರೂ ಬದುಕಲು ನೆರವಾಗುವುದು ಮಾನವಧರ್ಮವಾಗಿದೆ. ಆಪತ್ತು ನಿರ್ವಹಣೆ ಮಾಡಲು ಸಾಮಾಜಿಕ ಹೊಣೆಗಾರಿಕೆಯಾಗಿದ್ದು, ವೈಜ್ಞಾನಿಕವಾಗಿ ಶಿಸ್ತು ಬದ್ಧವಾಗಿ ವಿಪತ್ತು ನಿರ್ವಹಣೆ ಸ್ವಯಂ ಸೇವಕರಿಗೆ ಮಾಹಿತಿ, ಮಾರ್ಗದರ್ಶನ ಹಾಗೂ ತರಬೇತಿಯ ಅಗತ್ಯವಾಗಿದೆ.

ರಕ್ಷಣಾ ಪರಿಕರಗಳ ಸಮರ್ಪಕ ಬಳಕೆ ಬಗ್ಗೆ ಅವರಿಗೆ ಮಾಹಿತಿ ನೀಡಲಾಗುವುದು. ಸ್ವಯಂ ಸೇವಕರು ತಮ್ಮ ಮನೆಯವರಿಗೂ, ನೆರೆಕರೆಯವರಿಗೂ ವಿಪತ್ತು ನಿರ್ವಹಣೆ ಬಗ್ಗೆ ಸೂಕ್ತ ಮಾಹಿತಿ, ಮಾರ್ಗದರ್ಶನ ನೀಡಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.

ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಮಾತನಾಡಿ, ಸೂಕ್ತ ತರಬೇತಿಯಿಂದ ಸ್ವಯಂ ಸೇವಕರು ಉತ್ತಮ ರೀತಿಯ ಸೇವೆ ನೀಡಲು ಅನುಕೂಲವಾಗುತ್ತದೆ ಎಂದು ಹೇಳಿ ಶುಭ ಹಾರೈಸಿದರು. ಸರ್ಕಾರದ ವಿವಿಧ ಕಾರ್ಯಕ್ರಮಗಳಿಗೆ ಧರ್ಮಸ್ಥಳದ ಕೊಡುಗೆ ಮತ್ತು ಸಹಕಾರವನ್ನು ಧನ್ಯತೆಯಿಂದ ಅವರು ಸ್ಮರಿಸಿದರು. ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಮಾತನಾಡಿ, ವಿಪತ್ತಿನ ಸಂದರ್ಭದಲ್ಲಿ ಸ್ವಯಂ ಸೇವಕರು ಜನರ ಪ್ರಾಣ ಹಾಗೂ ಸಂಪತ್ತಿನ ರಕ್ಷಣೆಗೆ ಕಟಿಬದ್ಧರಾಗಿರಬೇಕು ಎಂದು ಸಲಹೆ ನೀಡಿದರು.

ವಿಪತ್ತು ನಿರ್ವಹಣೆಗಾಗಿ ರಾಜ್ಯದಲ್ಲಿ 55 ಸೂಕ್ಷ್ಮ ಪ್ರದೇಶಗಳಲ್ಲಿ ಸ್ವಯಂ ಸೇವಕರ ತಂಡಗಳನ್ನು ರಚಿಸಿ ತರಬೇತಿ ನೀಡಲಾಗುವುದು. ಪ್ರಥಮವಾಗಿ ಬೆಳ್ತಂಗಡಿ ತಾಲೂಕಿನ 200 ಸ್ವಯಂ ಸೇವಕರ ತಂಡ ಉದ್ಘಾಟನೆಗೊಂಡಿತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಗೋಪಾಲ್ ಲಾಲ್ ಮೀನಾ ವಿಪತ್ತು ನಿರ್ವಹಣೆ ಹಾಗೂ ಪರಿಕರಗಳ ಬಳಕೆ ಬಗ್ಗೆ ತರಬೇತಿ ನೀಡಿದರು.

ಸ್ವಯಂ ಸೇವಕರಿಗೆ ರಕ್ಷಣಾ ಪರಿಕರಗಳನ್ನು ವಿತರಿಸಲಾಯಿತು. ಸುರೇಂದ್ರ ಕುಮಾರ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಗೋಪಾಲ್ಲಾಲ್ ಮೀನಾ, ಮಂಗಳೂರು ಘಟಕದ ಅಧಿಕಾರಿ ವಿಜಯಕುಮಾರ್ ಉಪಸ್ಥಿತರಿದ್ದರು. ನೇತ್ರಾವತಿ ಸ್ನಾನ ಘಟ್ಟದ ಬಳಿ ವಿಪತ್ತು ನಿರ್ವಹಣೆಯ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್.ಮಂಜುನಾಥ್ , ನಿರ್ದೇಶಕ ಬೂದಪ್ಪ ಗೌಡ ಪಾಲ್ಗೊಂಡಿದ್ದರು.

Facebook Comments