Wednesday, April 24, 2024
Homeರಾಜ್ಯಮಿತಿಮೀರಿದ ಬಿಸಿಲು, ಗಗನಕ್ಕೇರಿದ ತರಕಾರಿ ಬೆಲೆ, ಶತಕ ಬಾರಿಸಿದ ಬೀನ್ಸ್

ಮಿತಿಮೀರಿದ ಬಿಸಿಲು, ಗಗನಕ್ಕೇರಿದ ತರಕಾರಿ ಬೆಲೆ, ಶತಕ ಬಾರಿಸಿದ ಬೀನ್ಸ್

ಬೆಂಗಳೂರು, ಏ.2- ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಕೊಳವೆ ಬಾವಿಗಳು ನೀರಿಲ್ಲದೆ ಬತ್ತುತ್ತಿದ್ದು, ಕುಡಿಯುವ ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿ ತರಕಾರಿಗಳ ಬೆಲೆ ಗಗನಕ್ಕೇರುತ್ತಿದೆ.

ರಾಜ್ಯಾದ್ಯಂತ ಈ ಬಾರಿ ಬರಗಾಲ ಆವರಿಸಿದ್ದು, ಮಳೆ ಬಾರದೆ ಬಿಸಿಲ ಝಳಕ್ಕೆ ಜನ-ಜಾನುವಾರುಗಳು ಬಸವಳಿಯು ವಂತಾಗಿದೆ. ಬೆಂಗಳೂರು ನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೊಳವೆ ಬಾವಿಗಳು ಒಣಗಿದ್ದು, ಕುಡಿಯಲು ನೀರಿಲ್ಲದಂತಾಗಿದೆ. ಇನ್ನು ರೈತರು ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಕೆಲ ರೈತರು ಅಡಿಕೆ ಗಿಡಗಳನ್ನು ಉಳಿಸಿಕೊಳ್ಳಲು ದುಪ್ಪಟ್ಟು ಹಣ ನೀಡಿ ಟ್ಯಾಂಕರ್ಗಳ ಮೂಲಕ ನೀರು ಹಾಯಿಸುತ್ತಿದ್ದಾರೆ.

ಸಾಮಾನ್ಯವಾಗಿ ತರಕಾರಿ ಬೆಳಗೆ ಹೆಚ್ಚು ನೀರಿನ ಅವಶ್ಯಕತೆ ಇದೆ . ಜೊತೆಗೆ ಬಿಸಿಲಿನ ತಾಪ ಹೆಚ್ಚಾಗಿದ್ದು, ಇಳುವರಿ ಬರುತ್ತಿಲ್ಲ. ಹಾಗಾಗಿ ರೈತರು ತರಕಾರಿ ಬೆಳೆಯಲು ಹಿಂದೇಟು ಹಾಕಿದ್ದು, ಉತ್ಪಾದನೆಯಲ್ಲಿ ಭಾರೀ ಇಳಿಮುಖವಾಗಿದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ನುಗ್ಗೆಕಾಯಿ ಹೊರತುಪಡಿಸಿದರೆ ಎಲ್ಲಾ ತರಕಾರಿಗಳ ಬೆಲೆ ಹೆಚ್ಚಳವಾಗಿದೆ. ಅದರಲ್ಲೂ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಬಳಸುವ ಸೌತೆಕಾಯಿ, ನಿಂಬೆಹಣ್ಣು, ಕ್ಯಾರೆಟ್ , ಬೀನ್ಸ್ ಬೆಲೆ ಹೆಚ್ಚಾಗಿದೆ.

ಈಗ ನುಗ್ಗೆಕಾಯಿ ಸೀಸನ್ ಆಗಿರುವುದ ರಿಂದ 10 ರೂ.ಗೆ ಮೂರರಿಂದ ನಾಲ್ಕು ಮಾರಾಟವಾಗುತ್ತಿದೆ. ಮೂಲಂಗಿ, 35ರೂ., ಹಾಗಲಕಾಯಿ 50, ಬೆಂಡೆಕಾಯಿ 40, ಹಿರೇಕಾಯಿ 40, ಬೀಟ್ರೂಟ್ 30, ಟೊಮ್ಯಾಟೋ 25, ಎಲೆಕೋಸು, 30, ನವಿಲುಕೋಸು, 40, ನಾಟಿ ಬೀನ್ಸ್ 80, ಈರುಳ್ಳಿ 30 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಇನ್ನು ಸೊಪ್ಪುಗಳ ಬೆಲೆಯಲ್ಲೂ ಸಹ ಏರಿಕೆಯಾಗಿದೆ . ಕೊತ್ತಂಬರಿ ಕಟ್ ಒಂದಕ್ಕೆ 25 ರೂ., ಸಬ್ಬಸ್ಸಿಗೆ 30, ಪಾಲಕ್ 25, ಮೆಂತ್ಯೆ, 30 ರೂ. ಇದೆ.ಬೀನ್ಸ್ , ಸೌತೆಕಾಯಿ ಹಾಗೂ ನಿಂಬೆಹಣ್ಣಿನ ಬೆಲೆ ದಿನೇ ದಿನೇ ಏರುತ್ತಲೇ ಇದೆ. ಸೌತೆಕಾಯಿ ಕೆಜಿಗೆ 35 ರಿಂದ 40 ರೂ.ಗೆ ಮಾರಾಟ ಮಾಡಲಾಗುತ್ತಿದೆ. ನಿಂಬೆಹಣ್ಣು ದಪ್ಪ 10 ರೂ.ಗೆ ಒಂದು ಹಣ್ಣನ್ನು ಮಾರಲಾಗುತ್ತಿದೆ. ಕೆಲವು ತರಕಾರಿ ಅಂಗಡಿಗಳ ಮಾಲೀಕರು ಬೀನ್ಸ್ ಬೆಲೆ 100 ರೂ. ನಿಗದಿ ಮಾಡಿ ಮಾರಾಟ ಮಾಡುತ್ತಿದ್ದಾರೆ .

ಬಿಸಿಲಿನ ಪ್ರಮಾಣ ಹೆಚ್ಚಾಗಿರುವುದರಿಂದ ತರಕಾರಿಗಳು ಬೆಳಗ್ಗೆ ತಂದರೆ ಸಂಜೆ ವೇಳೆಗೆ ಬಾಡಿ ಹೋಗುತ್ತಿವೆ. ಸೊಪ್ಪಂತೂ ಮಧ್ಯಾಹ್ನಕ್ಕೇ ಬಾಡಿ ಹೊಗುತ್ತದೆ. ಜನರು ಫ್ರೆಶ್ ಆಗಿರುವ ತರಕಾರಿ ಕೇಳುತ್ತಾರೆ. ಈ ಬಿಸಿಲಿನಲ್ಲಿ ಫ್ರೆಶ್ ಎಲ್ಲಿಂದ ತಂದು ಮಾರೋದು. ಕೆಲ ಜಿಲ್ಲೆಗಳಲ್ಲಿ ದಿನಕ್ಕೆ ಎರಡು ಬಾರಿ ಮಾರುಕಟ್ಟೆ ನಡೆದರೆ, ಇನ್ನು ಕೆಲ ಜಿಲ್ಲೆಗಳಲ್ಲಿ ದಿನಕ್ಕೆ ಒಂದೇ ಬಾರಿ ಮಾರುಕಟ್ಟೆ ನಡೆಯುತ್ತದೆ.

ಒಂದೇ ಬಾರಿ ಮಾರುಕಟ್ಟೆ ಇರುವ ರೈತರು ದಿನ ಪೂರ್ತಿ ತರಕಾರಿ ಕಿತ್ತು ರಾತ್ರಿ ಚೀಲ ಮಾಡಿ ಬೆಳಗ್ಗೆ ಮಾರುಕಟ್ಟೆಗೆ ತಂದು ಮಾರಬೇಕು. ಇನ್ನು ಕೆಲ ಭಾಗಗಳಲ್ಲಿ ಮುಂಜಾನೆಯಿಂದ ಕೊಯ್ಲು ಮಾಡಿ ಸಂಜೆ ವೇಳೆಗೆ ಮಾರುಕಟ್ಟೆಗೆ ತಂದು ಮಾರಾಟ ಮಾಡಬೇಕು.

ಈ ನಡುವೆ ಚಿಲ್ಲರೆ ವ್ಯಾಪಾರಿಗಳು ಮಾರುಕಟ್ಟೆಯಿಂದ ತಂದು ಮಾರುವಷ್ಟರಲ್ಲಿ ಬಿಸಿಲಿಗೆ ಬಾಡಿ ಹೋಗುತ್ತಿವೆ. ಜಾಸ್ತಿ ತಂದರೆ ಮಾರಾಟವಾಗದೆ ಬಾಡಿ ಹೋಗಿ ಲಾಸ್ ಆಗುತ್ತದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಇದೇ ರೀತಿ ಬಿಸಿಲು ಹೆಚ್ಚಾದರೆ ಎಲ್ಲಾ ತರಕಾರಿಗಳ ಬೆಲೆ ಮತ್ತಷ್ಟು ಹೆಚ್ಚಾಗಲಿದೆ.

RELATED ARTICLES

Latest News