ಬೃಹತ್ ಆಟೋಮೊಬೈಲ್ ಪ್ರದರ್ಶನಕ್ಕೆ ಬೆಂಗಳೂರು ಸಜ್ಜು 

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.11- ಭಾರತದ ಆಟೋಮೊಬೈಲ್ ಉತ್ಪನ್ನಗಳಿಗೆ ನಾಲ್ಕನೇ ಅತಿದೊಡ್ಡ ಮಾರುಕಟ್ಟೆ ಎಂದೇ ಪರಿಗಣಿಸಲಾಗಿರುವ ಬೆಂಗಳೂರು ಬೃಹತ್ ಆಟೋಮೊಬೈಲ್ ಬಿಡಿಭಾಗಗಳು, ಪೂರಕ ವಸ್ತುಗಳು ಮತ್ತು ಘಟಕ ಸಾಮಗ್ರಿಗಳ ಪ್ರದರ್ಶನ-ಆಟೋಟೆಕ್ನಿಕ್ ಬೆಂಗಳೂರು(ಎಟಿಬಿ) ಎಕ್ಸ್‍ಫೋಗೆ ಸಜ್ಜಾಗಿದೆ.

ಬೆಂಗಳೂರು ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ)ದಲ್ಲಿ ಜೂನ್ 14 ರಿಂದ 16ರವರೆಗೆ ಈ ಎಕ್ಸ್‍ಫೋ ನಡೆಯಲಿದ್ದು, ಆಟೋಮೊಬೈಲ್ ಉದ್ಯಮದ ಪ್ರಮುಖ ಬ್ರಾಂಡ್‍ಗಳು ಪ್ರದರ್ಶನವಾಗಲಿವೆ. ಆಟೋಮೊಬೈಲ್ ವಲಯದ ತಯಾರಕರು, ರಫ್ತುದಾರರು, ಆಮದುದಾರರು ಮತ್ತು ಸೇವೆ ಪೂರೈಕೆದಾರರನ್ನು ಸಾಮಾನ್ಯ ವೇದಿಕೆಯಲ್ಲಿ ಒಗ್ಗೂಡಿಸುವ ಗುರಿಯೊಂದಿಗೆ, ದೇಶದಾದ್ಯಂತ ಉದ್ಯಮಕ್ಕೆ ಸಂಬಂಧಪಟ್ಟ ಎಲ್ಲರನ್ನೂ ಒಂದೆಡೆ ಸೇರಿಸಲು ಮತ್ತು ಗ್ರಾಹಕರನ್ನು ಒದಗಿಸಿಕೊಡಲು ಈ ಎಕ್ಸ್‍ಫೋ ಧಾರಾಳ ಅವಕಾಶ ನೀಡಲಿದೆ.

ಹಸಿರು ವಾಹನ ಪ್ರದರ್ಶನ(ಗ್ರೀನ್ ವೆಹಿಕಲ್ ಎಕ್ಸ್‍ಫೋ)ದ ಜೊತೆಗೆ ನಡೆಯಲಿರುವ ಆಟೋಟೆಕ್ನಿಕ್ ಬೆಂಗಳೂರು ಎಕ್ಸ್‍ಫೋವನ್ನು 100ಕ್ಕೂ ಹೆಚ್ಚು ಪ್ರದರ್ಶಕರು ಸಾಕ್ಷೀಕರಿಸಲಿದ್ದಾರೆ. ನಾಲ್ಕು ಸಾವಿರ ಚದರ ಮೀಟರ್‍ಗಳ ವಿಶಾಲ ಪ್ರದೇಶದಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಇದು ವೇದಿಕೆ ಕಲ್ಪಿಸಲಿದೆ. ಭಾರತವಲ್ಲದೇ, ಅಮೆರಿಕ, ಚೀನಾ, ತೈವಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳ ಪ್ರದರ್ಶಕರು ಇದರಲ್ಲಿ ಭಾಗವಹಿಸಲಿದ್ದಾರೆ.

ಭಾರತದಲ್ಲಿ ಪರಿಸರಸ್ನೇಹಿ ಹಸಿರು ವಾಹನಗಳ ಭವಿಷ್ಯದ ಅವಲೋಕನ ಹಾಗೂ ದೇಶದಲ್ಲಿ ಹಸಿರು ವಾಹನಗಳಿಗೆ ಉತ್ತೇಜನ ನೀಡಲು ವಿದ್ಯುತ್ ವಾಹನಗಳು ಮತ್ತು ಪೂರಕ ಸಂಸ್ಥೆಗಳಿಗೆ ಈ ವಲಯವನ್ನು ಪ್ರವೇಶಿಸಲು ಮತ್ತು ಮಾರುಕಟ್ಟೆಯನ್ನು ವಿಸ್ತರಿಸಲು ಇದು ವೇದಿಕೆ ಕಲ್ಪಿಸಿ ಉತ್ತೇಜನ ನೀಡಲಿದೆ. ವಿದ್ಯುತ್ ಚಾಲಿತ ವಾಹನಗಳು ಮತ್ತು ಹಸಿರು ವಾಹನ ವಲಯದ ವಾಹನ ಬಿಡಿಭಾಗಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದ್ದು, ಪ್ರಮುಖ ಸಂಸ್ಥೆಗಳ ಬ್ರಾಂಡ್ ಉತ್ಪನ್ನಗಳನ್ನು ಇಲ್ಲಿ ವೀಕ್ಷಕರು ಮತ್ತು ಸಂದರ್ಶಕರು ನೋಡಬಹುದಾಗಿದೆ.

ಮೀಡಿಯಾ ಡೇ ಮಾರ್ಕೆಟಿಂಗ್ ನಿರ್ದೇಶಕ ಮಹಮದ್ ಮುದಾಸೀರ್ ಅಹಮದ್ ಅವರು ಹೇಳುವಂತೆ, ಆಟೋಟೆಕ್ನಿಕ್ ಎಕ್ಸ್‍ಫೋಗೆ ಉದ್ಯಮದಿಂದ ಹಾಗೂ ವಿವಿಧ ದೇಶಗಳಿಂದ ನಿರೀಕ್ಷೆಗೂ ಮೀರಿದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾವು ಈ ಪ್ರದರ್ಶನದ ಅದ್ಭುತ ಯಶಸ್ಸಿನ ಬಗ್ಗೆ ಆಶಾಭಾವನೆ ಹೊಂದಿದ್ದೇವೆ.

ಈ ಪ್ರದರ್ಶನವು ದೇಶದಾದ್ಯಂತ ಆಟೋಮೊಬೈಲ್ ಉದ್ಯಮದ ಮಂದಿಯ ತೀವ್ರ ಆಸಕ್ತಿ ಕೆರಳಿಸಿದೆ. ಉದ್ಯಾನನಗರಿ ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ನಡೆಯುವ ಈ ಪ್ರದರ್ಶನದಲ್ಲಿ, ಸಂದರ್ಶಕರ ಪೂರ್ವ ನೋಂದಣಿ ಪ್ರಕಾರ ಸುಮಾರು 10,000 ವಾಣಿಜ್ಯ ಸಂದರ್ಶಕರು ಭಾಗವಹಿಸಲಿದ್ಧಾರೆ. ಉತ್ತರ ಮತ್ತು ಪಶ್ವಿಮ ಭಾರತದ ಆಸಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಲಿದ್ದಾರೆ.

ಭಾರತೀಯ ಆಟೋಮೊಬೈಲ್ ಕಂಪನಿಗಳ ಅನ್ವೇಷಣೆಗಾಗಿ ನಮ್ಮ ಎಕ್ಸ್‍ಫೋಗೆ ಕೊರಿಯಾ, ಚೀನಾ, ತೈವಾನ್, ಅಮೆರಿಕ, ಶ್ರೀಲಂಕಾ, ನೇಪಾಳದಂಥ ದೇಶಗಳ ವಾಣಿಜ್ಯ ನಿಯೋಗಗಳು ಭೈೀಟಿ ನೀಡುವ ಆಸಕ್ತಿ ವ್ಯಕ್ತಪಡಿಸಿವೆ ಎಂದು ಮೀಡಿಯಾ ಡೇ ಮಾರ್ಕೆಟಿಂಗ್ ನಿರ್ದೇಶಕ ಕಾಶಿಫ್ ರಾಝಾ ನಕ್ವಿ ವಿವರಿಸಿದ್ದಾರೆ.

ಈ ಪ್ರದರ್ಶನವು ಭಾರತದಲ್ಲಿನ ಆಟೋಮೊಬೈಲ್ ಬಿಡಿಭಾಗಗಳ ಉದ್ಯಮದ ಮುಂದುವರಿದ ಬೆಳವಣಿಗೆ ಮತ್ತು ಹೊಸ ಅನ್ವೇಷಣೆಗಳ ಮೇಲೆ ಬೆಳಕು ಚೆಲ್ಲಿ ಅವುಗಳನ್ನು ಪ್ರತಿಬಿಂಬಿಸುವ ಜೊತೆಗೆ, ಭಾರತ ಮತ್ತು ವಿಶ್ವದ ವಿವಿಧ ದೇಶಗಳ ಆಟೋಮೊಬೈಲ್ ಉದ್ಯಮಕ್ಕೆ ಸಂಬಂಧಪಟ್ಟ ಪ್ರಮುಖ ಮಂದಿ ನಡುವೆ ಸಂಪರ್ಕ ಸೇತುವೆಯೂ ಸಹ ಆಗಲಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ