ಲಸಿಕೆಗೆ ಪರ್ಯಾಯ ಯಾವುದೂ ಇಲ್ಲ : ಉಪರಾಷ್ಟ್ರಪತಿ ನಾಯ್ಡು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.24- ಅರ್ಹರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯುವ ಮೂಲಕ ದೇಶವನ್ನು ಕೊರೊನಾದಿಂದ ಮುಕ್ತಗೊಳಿಸಲು ಕೈ ಜೋಡಿಸಬೇಕೆಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಜನತೆಗೆ ಕರೆ ನೀಡಿದ್ದಾರೆ.  ರಾಜಭವನದಲ್ಲಿ ಗೀವ್ ಇಂಡಿಯಾ ಸಂಸ್ಥೆಯಿಂದ ಆಯೋಜಿಸಿದ್ದ ವ್ಯಾಕ್ಸಿನೇಟ್ ಇಂಡಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೋವಿಡ್‍ಗೆ ಲಸಿಕೆ ಪಡೆಯುವುದೇ ಸೂಕ್ತವಾದ ಪರಿಹಾರ. ಅವರಿವರ ಮಾತುಗಳನ್ನು ಕೇಳದೆ ಸ್ವಯಂಪ್ರೇರಿತರಾಗಿ ಅರ್ಹರು ಮುಂದೆ ಬಂದು ಕೋವಿಡ್ ಲಸಿಕೆ ಪಡೆಯಬೇಕು. ಲಸಿಕೆಗೆ ಪರ್ಯಾಯ ಯಾವುದೂ ಇಲ್ಲ ಎಂದು ಸಲಹೆ ಮಾಡಿದರು. ಲಸಿಕೆ ಪಡೆದಿದ್ದೇನೆ ಎಂದು ಮೈ ಮರೆಯಬೇಡಿ. ನನಗೆ ಇನ್ನು ಕೊರೊನಾ ಬರುವುದೇ ಇಲ್ಲ ಎಂಬ ಭ್ರಮೆ ಬೇಡ. ಲಸಿಕೆ ತೆಗೆದುಕೊಂಡವರೂ ಸಹ 6 ಅಡಿ ಅಂತರವನ್ನು ಕಾಪಾಡಿಕೊಳ್ಳಿ. ಸದಾ ಕೈ ತೊಳೆಯುತ್ತಿರಬೇಕು, ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಆರೋಗ್ಯವೇ ಮಹಾಭಾಗ್ಯ ಎಂಬುದನ್ನು ಯಾರೂ ಮರೆಯಬೇಡಿ. ಜಂಕ್‍ಫುಡ್ ಸೇವಿಸಿದಷ್ಟು ನಾವು ರೋಗರುಜಿನಗಳಿಗೆ ಆಹ್ವಾನ ಕೊಟ್ಟಂತಾಗುತ್ತದೆ. ನಮ್ಮ ಪೂರ್ವಜರು ಮನೆಯಲ್ಲಿ ತಯಾರಿಸಿದ ಆಹಾರವನ್ನೇ ಸೇವಿಸುತ್ತಿದ್ದರು. ಆದ್ದರಿಂದ ಅವರಿಗೆ ಯಾವುದೇ ರೀತಿಯ ರೋಗಗಳು ಬರುತ್ತಿರಲಿಲ್ಲ ಎಂದು ಹೇಳಿದರು. ಭಾರತೀಯ ಸಂಪ್ರದಾಯದಂತೆ ಮನೆಯಲ್ಲೇ ತಯಾರಿಸಿದ ಆಹಾರಗಳಿಗೆ ನಾವು ಒತ್ತು ಕೊಡಬೇಕು. ಮಕ್ಕಳಿಗೆ ಬೀದಿಬದಿ ಮತ್ತು ಹೋಟೆಲ್‍ಗಳ ತಿಂಡಿ ಹೆಚ್ಚು ಕೊಡಿಸಬೇಡಿ. ನೀವು ಇದನ್ನು ಎಷ್ಟು ನಿಯಂತ್ರಣ ಮಾಡುತ್ತೀರೋ ಅಷ್ಟು ಆರೋಗ್ಯವಾಗಿರುತ್ತೀರ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಅರ್ಹ ನಾಗರಿಕರು ಕೋವಿಡ್ ಲಸಿಕೆಯನ್ನು ಪಡೆದರೆ ನಾವು ಆದಷ್ಟು ಶೀಘ್ರದಲ್ಲೇ ಇದನ್ನು ನಿಯಂತ್ರಿಸಬಹುದು. ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯವೆಂದು ಮನವಿ ಮಾಡಿದರು. ಬಡವರು, ಕೆಳಹಂತದ ವರ್ಗದವರಿಗೆ ಲಸಿಕೆ ನೀಡಬೇಕು. ನಮ್ಮ ರಾಜ್ಯದಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ನಾವು ಲಸಿಕೆ ನೀಡುವುದರಲ್ಲೂ ಮತ್ತು ಕೋವಿಡ್ ನಿಯಂತ್ರಿಸುವುದರಲ್ಲೂ ಸಾಕಷ್ಟು ಮುಂದಿದ್ದೇವೆ ಎಂದು ಹೇಳಿದರು.

ಕೊರೊನಾ ವಿರುದ್ಧ ಹೋರಾಡಲು ಶಕ್ತಿ ಬೇಕೆಂದರೆ ಲಸಿಕೆ ಪಡೆಯಬೇಕು. ಎಲ್ಲ ವರ್ಗದವರು ಹಣ ನೀಡಿ ಲಸಿಕೆ ಪಡೆಯಲು ಸಾಧ್ಯವಿಲ್ಲ. ಖಾಸಗಿ ಸಂಸ್ಥೆಗಳು ಸಿಎಸ್‍ಆರ್ ನಿಧಿ ಬಳಕೆ ಮಾಡಬೇಕು ಎಂದು ಸಿಎಂ ಸಲಹೆ ಮಾಡಿದರು. ಕಾರ್ಯಕ್ರಮದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, ಸಚಿವರಾದ ಡಾ.ಕೆ.ಸುಧಾಕರ್, ಮುನಿರತ್ನ, ಸಂಸದ ಪಿ.ಸಿ.ಮೋಹನ್ ಭಾಗಿಯಾಗಿದ್ದರು.

Facebook Comments