ವೆಂಕಟಸುಬ್ಬಯ್ಯ ನಿಧನಕ್ಕೆ ಹೆಚ್‍ಡಿಡಿ-ಹೆಚ್‍ಡಿಕೆ ಕಂಬನಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.19-ಕನ್ನಡದ ನಿಘಂಟು ತಜ್ಞ,ಪದ್ಮಶ್ರೀ, ಶಬ್ದಬ್ರಹ್ಮ ಹಾಗೂ ಶತಾಯುಷಿ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ. ವೆಂಕಟಸುಬ್ಬಯ್ಯ ಅವರ ನಿಧನದ ಸುದ್ದಿ ತಿಳಿದು ತೀವ್ರ ಬೇಸರವಾಗಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ಜಿ.ವಿ.ಅವರ ಕೊಡುಗೆ ಅಪಾರವಾದದ್ದು, ನಮ್ಮ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ದೇವೇಗೌಡರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಭಗವಂತ ಜಿ.ವಿ.ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಹೇಳಿದ್ದಾರೆ. ನಾಡಿನ ಖ್ಯಾತ ಸಂಶೋಧಕ, ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತೀವ್ರ ಕಂಬನಿ ಮಿಡಿದಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟುವಿನ ಪ್ರಧಾನ ಸಂಪಾದಕರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಅಖಿಲ ಕರ್ನಾಟಕ ವ್ಯಾಪ್ತಿಯನ್ನು ತಂದುಕೊಟ್ಟ ಹಿರಿಮೆ ಶ್ರೀಯುತರದು. ನಾಡು-ನುಡಿಗೆ ಸಲ್ಲಿಸಿದ ಸೇವೆ ಅನನ್ಯವಾದದ್ದು, ನಾಡು-ನುಡಿಯ ಶ್ರೇಷ್ಠ ವಿದ್ವಾಂಸಕರನ್ನು ರಾಜ್ಯ ಕಳೆದುಕೊಂಡಂತಾಗಿದೆ ಎಂದು ಗುಣಗಾನ ಮಾಡಿದ್ದಾರೆ.

Facebook Comments