ನಿಘಂಟು ತಜ್ಞ, ಶತಾಯುಷಿ, ಪ್ರೊ.‌ ಜಿ ವೆಂಕಟಸುಬ್ಬಯ್ಯ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.19- ನಾಡಿನ ಖ್ಯಾತ ಸಂಶೋಧಕ, ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ(108) ಅವರು ಸೋಮವಾರ ರಾತ್ರಿ 1.15ರ ವೇಳೆಗೆ ನಿಧನರಾದರು. ವಯೋಸಹಜ ಕಾರಣಗಳಿಂದ ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿದ್ದು, ಮೃತ್ಯರ ಅಂತ್ಯಕ್ರಿಯೆಯನ್ನು ಇಂದು ನಗರದ ವಿಲ್ಸನ್‍ಗಾರ್ಡನ್ ರುದ್ರಭೂಮಿಯಲ್ಲಿ ಪೊಲೀಸ್ ಗೌರವಗಳೊಂದಿಗೆ ನೆರವೇರಿಸಲಾಗುವುದು.

ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ಖ್ಯಾತ ವಿದ್ವಾಂಸರು ಹಾಗೂ ಜನಪ್ರಿಯ ಪ್ರಾಧ್ಯಾಪಕರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸುವರ್ಣ ಪದಕದೊಡನೆ ಎಂ.ಎ ಪದವಿ, ನಂತರ ಬಿ.ಟಿ ಪದವಿ ಪಡೆದು, ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು. ನಂತರ ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟುವಿನ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಅಖಿಲ ಕರ್ನಾಟಕ ವ್ಯಾಪ್ತಿಯನ್ನು ತಂದುಕೊಟ್ಟ ಹಿರಿಮೆ ಸುಬ್ಬಯ್ಯ ಅವರದು. ನಡೆದಾಡುವ ನಿಘಂಟು, ಶಬ್ಧ ಬ್ರಹ್ಮ ಎಂದು ಜನಜನಿತರಾಗಿರುವ ಶ್ರೀಯುತರು ಸಾಹಿತ್ಯ ವಿಮರ್ಶೆ, ಸಂಶೋಧನೆ, ಅನುವಾದ, ನಿಘಂಟು ರಚನೆ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿ 50 ಪುಸ್ತಕಗಳನ್ನು, 14 ನಿಘಂಟುಗಳನ್ನು ಪ್ರಕಟಗೊಳಿಸಿರುವುದಲ್ಲದೆ ಇಗೋ ಕನ್ನಡ ಎಂಬ ಅಂಕಣದಿಂದ ನಾಡಿನಲ್ಲಿ ಮನೆಮಾತಾಗಿದ್ದಾರೆ.

ನಿಘಂಟು ಪರಿವಾರ, ಅಕ್ರೂರ ಚರಿತ್ರೆ (ಸಂಪಾದನೆ), ಇಗೋ ಕನ್ನಡ (ಸಾಮಾಜಿಕ ನಿಘಂಟು), ಗತಿ ಪ್ರಜ್ಜಾ, ಕನ್ನಡ ಉಳಿಸಿ ಬೆಳೆಸಿದವರು, ಅನುಕಲ್ಪನೆ, ಕರ್ಣ ಕರ್ಣಾಮೃತ ಮುಂತಾದವು ಪ್ರಮುಖ ಕೃತಿಗಳು. ಹಲವಾರು ಶಿಕ್ಷಕ ತರಬೇತಿ ಕಾಲೇಜುಗಳಲ್ಲಿ ಆಹ್ವಾನಿತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಶ್ರೀಯುತರ ಪಾಂಡಿತ್ಯಕ್ಕೆ ಸಂದ ಪ್ರಶಸ್ತಿ ಪುರಸ್ಕಾರಗಳು ಹತ್ತುಹಲವು.

ಪದ್ಮಶ್ರೀ, ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾನಿಲಯದ ನಾಡೋಜ ಪ್ರಶಸ್ತಿ, ವಿದ್ಯಾಲಂಕಾರ ಪ್ರಶಸ್ತಿ, ಶಂಬಾ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಕಾಯಕ ಪ್ರಶಸ್ತಿ, ಪತ್ರಿಕಾ ಅಕಾಡೆಮಿ ವಿಶೇಷ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಭಾಷಾ ಸಮ್ಮಾನ್ ಪ್ರಶಸ್ತಿ ಅಂತಾರಾಷ್ಟ್ರೀಯ ನಿಘಂಟು ಸಮ್ಮೇಳನಗಳಿಗೆ ಆಹ್ವಾನ ಮುಂತಾದವು ಮುಖ್ಯವಾದವು. ಜಿ.ವಿ. ಎಂದೇ ಖ್ಯಾತರಾದ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಅತ್ಯುತ್ತಮ ಭಾಷಣಕಾರರು ಹಾಗೂ ಸರಳ ಸಜ್ಜನಿಕೆಯ ವಿದ್ವಾಂಸರಾಗಿದ್ದರು.

ಸಂತಾಪ:
ವೆಂಕಟಸುಬ್ಬಯ್ಯ ಅವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗೂ ರಾಜ್ಯ ಸಚಿವರಾದ ಭೈರತಿ ಬಸವರಾಜ್, ಕೆ.ಎಸ್.ಈಶ್ವರಪ್ಪ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನುಬಳಿಗಾರ್ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ನಗರಾಭಿವೃದ್ಧಿ ಸಚಿವ ಜಿ.ಎ.ಬಸವರಾಜ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸೇರಿದಂತೆ ಅನೇಕ ರಾಜಕೀಯ ಗಣ್ಯರು, ಸಾಹಿತಿಗಳು, ಕಲಾವಿದರು ವೆಂಕಟಸುಬ್ಬಯ್ಯ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Facebook Comments