ಬಾಲಿವುಡ್‌ಗೆ ಮತ್ತೊಂದು ಆಘಾತ, ಹಿರಿಯ ನಟ ರಿಷಿ ಕಪೂರ್ ಇನ್ನಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಏ.30- ಬಾಲಿವುಡ್ ಹಿರಿಯ ನಟ, ನಿರ್ಮಾಪಕ ಮತ್ತು ನಿರ್ದೇಶಕ ರಿಷಿ ಕಪೂರ್ (67) ಇನ್ನಿಲ್ಲ. ಕ್ಯಾನ್ಸರ್‍ನಿಂದ ಬಳಸುತ್ತಿದ್ದ ಅವರು ಇಂದು ಬೆಳಗ್ಗೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರು ಪತ್ನಿ ಮತ್ತು ನಟಿ ನೀತು ಕಪೂರ್ ಹಾಗೂ ಮಗ ಸೂಪರ್‍ಸ್ಟಾರ್ ರಣಬೀರ್ ಕಪೂರ್ ಮತ್ತು ಪುತ್ರಿ ರಿದ್ದಿಮಾ ಕಪೂರ್ ಹಾಗೂ ಅಸಂಖ್ಯಾತ ಅಭಿಮಾನಿಗಳನ್ನು ಅಗಲಿದ್ದಾರೆ.

ನಿನ್ನೆ ಅದ್ಭುತ ನಟ ಇರ್ಫಾನ್ ಖಾನ್(53) ವಿಧಿವಶದಿಂದ ಹಿಂದಿ ಚಿತ್ರರಂಗ ಆಘಾತಕ್ಕೆ ಒಳಗಾಗಿರುವಾಗಲೇ ಎಲ್ಲರ ಅಚ್ಚುಮೆಚ್ಚಿನ ಅಭಿನೇತ ರಿಷಿ ನಿಧನ ಬಿ-ಟೌನ್‍ನನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ನನ್ನ ಅಣ್ಣ ರಿಷಿ ಇನ್ನಿಲ್ಲ, ಅವರು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ ಎಂದು ಅವರ ಸಹೋದರ ನಿರ್ಮಾಪಕ-ನಿರ್ದೇಶಕ ರಣಧೀರ್ ಕಪೂರ್ ತಿಳಿಸಿದ್ದಾರೆ.

ಕ್ಯಾನ್ಸರ್ ಚಿಕಿತ್ಸೆ ಪಡೆದಿದ್ದ ರಿಷಿ ಕಪೂರ್ ನಿನ್ನೆ ತೀವ್ರ ಅನಾರೋಗ್ಯಕ್ಕೆ ಒಳಗಾದರು. ತಕ್ಷಣ ಅವರನ್ನು ಮುಂಬೈನ ಎಚ್.ಎನ್. ರಿಲಾಯನ್ಸ್ ಹಾಸ್ಪಿಟಲ್‍ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಕೊನೆಯುಸಿರೆಳೆದರು. ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಅವರು ಬಹುತೇಕ ಒಂದು ವರ್ಷ ಕಾಲ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಕಳೆದ ಸೆಪ್ಟೆಂಬರ್‍ನಲ್ಲಿ ಭಾರತಕ್ಕೆ ಹಿಂದಿರುಗಿದ್ದರು. ಫೆಬ್ರವರಿಯಲ್ಲಿ ಮತ್ತೆ ಅಸ್ವಸ್ಥರಾಗಿದ್ದ ಅವರನ್ನು ಎರಡು ಬಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು.

ತಮ್ಮ ಪುತ್ರ ರಣಬೀರ್ ಕಪೂರ್ ಮತ್ತು ಖ್ಯಾತ ನಟಿ ಅಲಿಯಾ ಭಟ್ ಅವರ ವಿವಾಹ ನೆರವೇರಿಸಲು ಅವರು ಇಚ್ಚಿಸಿದ್ದರು. ಆದರೆ ಮಗನ ಮದುವೆ ನೋಡುವ ಭಾಗ್ಯ ಅವರಿಗೆ ಲಭಿಸಲಿಲ್ಲ. ಮೋಸ್ಟ್ ಹ್ಯಾಂಡ್‍ಸಮ್ ನಟ: ರಿಷಿ ಕಪೂರ್ ಹಿಂದಿ ಚಿತ್ರರಂಗ ಕಂಡ ಅತ್ಯಂತ ಸ್ಫುರದ್ರೂಪಿ ನಟರಲ್ಲಿ ಒಬ್ಬರು. ಚಿತ್ರರಂಗದಲ್ಲೇ ಗಿನ್ನಿಸ್ ವಿಶ್ವ ದಾಖಲೆ ಸೃಷ್ಟಿಸಿರುವ ಕಪೂರ್ ಕುಟುಂಬದ ಅದ್ಭುತ ಪ್ರತಿಭೆ ರಿಷಿ.

4ನೆ ಸೆಪ್ಟೆಂಬರ್ 1952ರಲ್ಲಿ ಜನಿಸಿದ ರಿಷಿಗೆ ಅಭಿನಯ ಮತ್ತು ಪ್ರತಿಭೆ ರಕ್ತಗತ ಬಳುವಳಿ, ಇವರು 1970ರಲ್ಲಿ ತಂದೆ ರಾಜ್‍ಕಪೂರ್ ನಿರ್ಮಿಸಿದ ಸೂಪರ್‍ಹಿಟ್ ಮೇರಾ ನಾಮ್ ಜೋಕರ್ ಚಿತ್ರದಲ್ಲಿ ಬಾಲ ನಟನಾಗಿ ಹಿಂದಿ ಚಿತ್ರರಂಗ ಪ್ರವೇಶಿಸಿದರು. ಮೊದಲ ಚಿತ್ರದಲ್ಲೇ ಉತ್ತಮ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇವರದು. ಅಲ್ಲಿಂದ ಅವರು 50 ವರ್ಷಗಳ ಕಾಲ ಅಂದರೆ 2020ರವರೆಗೂ ಸಿನಿಮಾ ರಂಗದಲ್ಲಿ ಸಕ್ರಿಯವಾಗಿದ್ದರು.

1973ರಲ್ಲಿ ರಿಷಿ ಮತ್ತು ಡಿಂಪಲ್ ಕಪಾಡಿಯಾ ಅಭಿನಯದ ಬಾಬಿ ಸಿನಿಮಾ ರಿಷಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಈ ಚಿತ್ರದ ಅಭಿನಯಕ್ಕಾಗಿ ಫಿಲಂ ಪೇರ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಹಿಂದಿ ಚಿತ್ರರಂಗದಲ್ಲಿ ರೊಮ್ಯಾಂಟಿಕ್ ಹೀರೋ ಎಂದೇ ಹೆಸರಾಗಿದ್ದ ಅವರು ಬಹುತೇಕ ಎಲ್ಲ ನಟ-ನಟಿಯರೊಂದಿಗೆ ಅಭಿನಯಿಸಿದ್ದಾರೆ. ಅಲ್ಲದೆ, ಅನೇಕ ಸಿನಿಮಾಗಳಿಗೆ ನಿರ್ಮಾಪಕ ನಿರ್ದೇಶಕರಾಗಿಯೂ ಕೆಲಸ ಮಾಡಿದ ಹೆಗ್ಗಳಿಕೆ ಇವರದ್ದು.

ಲೈಲಾ ಮಜ್ನು, ಕಭೀ ಕಭೀ, ಹಮ್ ಕಿಸಿಸೆ ಕಮ್ ನಹಿ, ಅಮರ್ ಅಕ್ಬರ್ ಅಂಟೋನಿ, ಸರ್ಗಂ, ದೋ ಪ್ರೇಮಿ, ಕರ್ಝ್, ನಸೀಬ್, ಪ್ರೇಮ್ ರೋಗ್, ಸಾಗರ್, ದೋಸ್ತಿ-ದುಷ್ಮನ್, ನಗೀನಾ, ಚಾಂದಿನಿ, ದೀವಾನಾ, ದಾಮಿನಿ, ಯಾರಾನಾ ಸೇರಿದಂತೆ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಬಿಗ್-ಬಿ ಅಮಿತಾಭ್ ಬಚ್ಚನ್ ಜೊತೆ ಅನೇಕ ಸೂಪರ್‍ಹಿಟ್ ಸಿನಿಮಾಗಳಲ್ಲಿ ರಿಷಿ ನಟಿಸಿದ್ದರು.

2018ರಲ್ಲಿ ಬಚ್ಚನ್ ಮತ್ತು ರಿಷಿ ನಟಿಸಿದ್ದ 102 ನಾಟ್‍ಔಟ್ (ತಂದೆ-ಮಗನ ಪಾತ್ರ) ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು, ಅದೇ ವರ್ಷ ತೆರೆಕಂಡ ಮುಲ್ಕ್ ಚಿತ್ರದಲ್ಲೂ ಮನೋಜ್ಞ ಅಭಿನಯ ನೀಡಿದ ಚಿತ್ರ ರಸಿಕರು ಮತ್ತು ವಿಮರ್ಶಕರಿಂದ ಪ್ರಶಂಸೆ ಪಡೆಸಿದ್ದರು. ಶರ್ಮಾಜಿ ನಮ್‍ಕಿನ್ ಇವರ ಅಭಿನಯದ ಕೊನೆ ಸಿನಿಮಾ.

ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದ ರಿಷಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಖ್ಯಾತ ನಟ ಅಮಿತಾಭ್ ಬಚ್ಚನ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು, ಚಿತ್ರ ತಾರೆಯರು, ನಿರ್ದೇಶಕರು, ನಿರ್ಮಾಪಕರು, ಮತ್ತು ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.

Facebook Comments

Sri Raghav

Admin