ಪಂಚಭೂತಗಳಲ್ಲಿ ಲೀನರಾದ ಶಿವರಾಮಣ್ಣ, ಶೋಕಸಾಗರದಲ್ಲಿ ಚಂದನವನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.5- ನಿನ್ನೆ ನಿಧನರಾದ ಹಿರಿಯ ಚಿತ್ರನಟ ಶಿವರಾಂ ಅವರ ಅಂತ್ಯಕ್ರಿಯೆ ಇಂದು ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ಪೊಲೀಸ್ ಗೌರವದೊಂದಿಗೆ ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು. ಅವರ ಪುತ್ರರಾದ ಲಕ್ಷ್ಮೀಶ್, ರವೀಶ್ ಅವರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಕಳೆದೆರಡು ದಿನಗಳ ಹಿಂದೆ ಮನೆಯಲ್ಲಿ ಬಿದ್ದು ಅನಾರೋಗ್ಯಕ್ಕೀಡಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ನಿಧನರಾದರು.

ಅವರ ಪಾರ್ಥಿವ ಶರೀರವನ್ನು ಇಂದು ಬೆಳಗ್ಗೆ 7.30ರಿಂದ 10 ಗಂಟೆಯವರೆಗೆ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ ತ್ಯಾಗರಾಜನಗರದಲ್ಲಿರುವ ಅವರ ನಿವಾಸಕ್ಕೆ ಪಾರ್ಥೀವ ಶರೀರವನ್ನು ಕೊಂಡೊಯ್ದು ಪೂಜೆ ಸಲ್ಲಿಸಿ ಅಲ್ಲಿಂದ ಬನಶಂಕರಿ ಚಿತಾಗಾರಕ್ಕೆ ತಂದು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ನಟ ಶಿವರಾಜ್‍ಕುಮಾರ್, ಎಸ್.ನಾರಾಯಣ್, ಅನಿರುದ್ಧ್, ದ್ವಾರಕೀಶ್, ಜಗೇಶ್, ಉಮಾಶ್ರೀ, ಯೋಗರಾಜ ಭಟ್, ಅನುಪ್ರಭಾಕರ್, ಗಿರಿಜಾ ಲೋಕೇಶ್, ದೊಡ್ಡರಂಗೇಗೌಡ, ಶ್ರೀನಾಥ್, ಅನಂತನಾಗ್, ನಿರ್ದೇಶಕ ದೊರೆಭಗವಾನ್, ರಾಘವೇಂದ್ರ ರಾಜಕುಮಾರ್, ರಮೇಶ್ ಅರವಿಂದ್, ಪ್ರೇಮ, ಸುಂದರರಾಜ್, ರಾಕ್‍ಲೈನ್ ವೆಂಕಟೇಶ್, ಕ್ರಿಕೆಟ್ ಪಟು ಅನಿಲ್ ಕುಂಬ್ಳೆ ಸೇರಿದಂತೆ ಹಲವರು ಆಗಮಿಸಿ ಅಂತಿಮ ದರ್ಶನ ಪಡೆದು ಅಗಲಿದ ಹಿರಿಯ ನಟನಿಗೆ ಅಂತಿಮ ನಮನ ಸಲ್ಲಿಸಿದರು.

ಚಲನಚಿತ್ರೋದ್ಯಮದ ಗಣ್ಯರಲ್ಲದೆ ರಾಜಕೀಯ ಮುಖಂಡರು, ಸಾಹಿತಿಗಳು, ಇತರ ಕ್ಷೇತ್ರದ ಗಣ್ಯರು ಆಗಮಿಸಿ ಶಿವರಾಂ ಅವರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು. ನಟ ಶಿವರಾಂ ಅವರ ನೆನಪನ್ನು ಚಿರಸ್ಥಾಯಿಯಾಗುವಂತಹ ಕೆಲಸವನ್ನು ಮಾಡಲಾಗುವುದು ಎಂದು ಸಚಿವ ಆರ್.ಅಶೋಕ್ ಹೇಳಿದರು.

ಅವರ ನಿಧನ ಕರ್ನಾಟಕ ಚಿತ್ರರಂಗಕ್ಕೆ ಅತೀವ ನಷ್ಟ ತಂದಿದೆ. ಅವರ ನೆನಪನ್ನು ಉಳಿಸುವ ಕೆಲಸವನ್ನು ಮಾಡುತ್ತೇವೆ. ಅವರು ತುಂಬ ಸಂಭಾವಿತ ಕಲಾವಿದರು. ಪುನೀತ್ ನಿಧನದ ಬೆನ್ನಲ್ಲೇ ಶಿವರಾಂ ನಿಧನ ಆಗಿರುವುದು ಮತ್ತೊಂದು ಆಘಾತ ತಂದಿದೆ ಎಂದರು.

ಕನ್ನಡ ಚಿತ್ರರಂಗದ ಮೂರು ತಲೆಮಾರುಗಳನ್ನು ಕಂಡಿದ್ದ ಶಿವರಾಂ ಅವರು ಡಾ.ರಾಜ್ ಕುಟುಂಬಕ್ಕೆ ಆಪ್ತರಾಗಿದ್ದರು. ಸಿನಿಮಾ ಕುಟುಂಬಕ್ಕೆ ಪೋಷಕರೆನಿಸಿಕೊಂಡಿದ್ದರು. ಎಲ್ಲರ ಪಾಲಿಗೆ ಪ್ರೀತಿಯ ಶಿವರಾಮಣ್ಣ ಆಗಿದ್ದರು. ಅವರ ಅಗಲಿಕೆ ಕನ್ನಡ ಚಿತ್ರರಂಗವನ್ನು ಅನಾಥವಾಗಿಸಿದೆ ಎಂದು ದ್ವಾರಕೀಶ್ ಶೋಕ ವ್ಯಕ್ತಪಡಿಸಿದರು.

ಎಸ್.ನಾರಾಯಣ್, ಭಾರತಿ, ಗಿರಿಜಾ ಲೋಕೇಶ್ ಸೇರಿದಂತೆ ಅನೇಕ ನಟ-ನಟಿಯರು ಶಿವರಾಂ ಅವರ ಗುಣಗಾನ ಮಾಡಿದರು. ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್, ಕನ್ನಡ ಅಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿದಂತೆ ಹಲವು ಮುಖಂಡರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.

Facebook Comments