ಮಾತೃ ಭಾಷೆ ಮರೆಯದಿರಿ, ಶಿಕ್ಷಣ ಕೇವಲ ಉದ್ಯೋಗಕ್ಕಲ್ಲ : ಉಪರಾಷ್ಟ್ರಪತಿ ವೆಂಕಯ್ಯನಾಯ್ಡು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.22- ಮಾತೃಭಾಷೆ ಹಾಗೂ ದೇಶವನ್ನು ಯಾವತ್ತೂ ಮರೆಯಬಾರದು ಎಂದು ಉಪರಾಷ್ಟ್ರಪತಿ ಎಮ್.ವೆಂಕಯ್ಯನಾಯ್ಡು ಕರೆ ನೀಡಿದರು.ನಗರದಲ್ಲಿ ಇಂದು ನಡೆದ ಬೆಂಗಳೂರು ವಿಶ್ವ ವಿದ್ಯಾಲಯದ 54ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,

ಬೇರೆ ಬೇರೆ ಭಾಷೆಗಳನ್ನು ಕಲಿಯಬೇಕು, ಆದರೆ ಮಾತೃ ಭಾಷೆಯನ್ನು ಮರೆಯಬಾರದು, ಮಾತೃಭಾಷೆಯಲ್ಲಿ ಸಂವಹನ ಉತ್ತಮವಾಗಿರುತ್ತದೆ. ಮಾತೃಭಾಷೆ ನೇತ್ರಗಳಿದ್ದಂತೆ ಎಂದು ಬಣ್ಣಿಸಿದರು.

ಕನ್ನಡ ಭಾಷೆ ಸೇರಿದಂತೆ ಯಾವುದೇ ಭಾಷೆ ಸುಂದರವಾಗಿರುತ್ತದೆ. ನಮ್ಮ ಭಾಷೆ, ದೇಶ, ಗುರುವನ್ನು ಯಾವತ್ತೂ ಮರೆಯಬಾರದು. ವಿವಿಧತೆಯಲ್ಲಿ ಏಕತೆ ಇರುವುದೇ ಭಾರತದ ವಿಷೇಶತೆ ಎಂದರು.

ಗೂಗಲ್ ಎಷ್ಟೆ ಮಾಹಿತಿ ನೀಡಿದರೂ ಗುರುವನ್ನು ಮೀರಿಸಲು ಸಾಧ್ಯವಿಲ್ಲ ಎಂದ ಅವರು ಇಂದಿನ ತಂತ್ರಜ್ಞಾನ ಸಾಕಷ್ಟು ಬೆಳೆದಿದೆ. ಆನ್‍ಲೈನ್ ಮುಖಾಂತರ ಸಾಕಷ್ಟು ವ್ಯವಹಾರ ನಡೆಯುತ್ತಿದೆ. ಶಿಕ್ಷಣ ಕೇವಲ ಉದ್ಯೋಗಕ್ಕಾಗಿ ಅಲ್ಲ, ದೇಶದ ಭವಿಷ್ಯದ ದೃಷ್ಟಿಯಿಂದ ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು.

ಶಿಕ್ಷಣ ಶಿಸ್ತನ್ನು ಕಲಿಸುತ್ತದೆ. ಕಷ್ಟಕಾಲದಲ್ಲಿ ಕಾಪಾಡುತ್ತದೆ, ಅಮೆರಿಕಾದ ವಾಷಿಂಗ್‍ಟನ್‍ಗಿಂತ ಬೆಂಗಳೂರಿನಲ್ಲಿ ಉತ್ತಮ ಜ್ಞಾನವಂತರಿದ್ದಾರೆ. ಸಮಾಜದಲ್ಲಿ ಹೆಚ್ಚಾಗುತ್ತಿರುವ ಸ್ಪರ್ಧೆಗಳಿಗೆ ಅನುಗುಣವಾಗಿ ಯುವಕರು ಶಿಕ್ಷಣ, ಕೌಶಲ್ಯವನ್ನು ರೂಢಿಸಿಕೊಂಡು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರಬೇಕು ಎಂದು ಹೇಳಿದರು.

ರೈತರ ಮಕ್ಕಳು ಚಿನ್ನದ ಪದಕ ಪಡೆಯುತ್ತಿದ್ದು, ಅವಕಾಶ ಸಿಕ್ಕರೆ ಸಾಧನೆ ಮಾಡಬಹುದೆಂಬುದನ್ನು ತೋರಿಸಿದ್ದಾರೆ. ಹೆಣ್ಣುಮಕ್ಕಳ ಶಿಕ್ಷಣ ಹೆಚ್ಚಾಗುತ್ತಿದ್ದು, ಅವಕಾಶ ದೊರೆತರೆ ಮತ್ತಷ್ಟು ಸಾಧನೆ ಮಾಡುತ್ತಾರೆ.

ಈಗಾಗಲೇ ಮಹಿಳೆಯರು ಒಳ್ಳೆಯ ಸ್ಥಾನದಲ್ಲಿದ್ದಾರೆ ಎಂದ ಅವರು ನಿರ್ಮಲಾ ಸೀತಾರಾಮನ್, ಕ್ರೀಡಾಪಟು ಸಾನಿಯಾಮಿರ್ಜಾ ಅವರ ಹೆಸರುನ್ನು ಉಲ್ಲೇಖಿಸಿದರು. ಹಣಕ್ಕೆ ಲಕ್ಷ್ಮಿ, ಶಿಕ್ಷಣಕ್ಕೆ ಸರಸ್ವತಿ, ರಕ್ಷಣೆಗೆ ಪಾರ್ವತಿ ಎಂದು ಹೇಳುವ ಮೂಲಕ ಮಹಿಳೆಯರ ಪಾತ್ರವನ್ನು ವಿವರಿಸಿದರು.

ಬೆಂಗಳೂರಿನ ಇಡ್ಲಿ, ದೋಸೆಯನ್ನು ನೆನಪಿಸಿಕೊಂಡ ಉಪರಾಷ್ಟ್ರಪತಿ. ಈಗ ಶಿಷ್ಟಾಚಾರ ಇರುವುದರಿಂದ ಮೊದಲಿನ ಹಾಗೆ ಈಗ ಇಡ್ಲಿ, ದೋಸೆ ತಿನ್ನಲು ಹೋಗಲು ಆಗುವುದಿಲ್ಲ. ಭಾರತದಲ್ಲೇ ಉತ್ತಮ ಆಹಾರ, ಊಟ ಸಿಗುತ್ತದೆ. ವಿದೇಶಿ ತಿಂಡಿಗಳ ಮೇಲೆ ಏಕೆ ಆಸೆ ಪಡುತ್ತೀರಿ ಜಂಕ್ ಫುಡ್ ತಿನ್ನೋದು ಆರೋಗ್ಯಕ್ಕೆ ಹಾನಿಕಾರಕ. ರಾಗಿ ಮುದ್ದೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಕನ್ನಡದಲ್ಲೇ ಭಾಷಣವನ್ನು ಆರಂಭಿಸಿದ ಉಪರಾಷ್ಟ್ರಪತಿಗಳು ವಿಶ್ವಭೂ ದಿನ ಶುಭಾಷಯ ಕೋರಿದರು. ಬೆಂಗಳೂರು ವಿವಿ ಪದವಿ, ಸ್ನಾತ್ತೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಶುಭಾಷಯ ಕೋರಿದರು.

ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್, ಸಮಾಜ ಸೇವಕ ಎಸ್.ವಿ.ಸುಬ್ರಹ್ಮಣ್ಯ ಗುಪ್ತಾ ಅವರಿಗೆ ಗೌರವ ಡಾಕ್ಟರೇಟ್ ಕೊಡ ಮಾಡಲಾಯಿತು.

ಘಟಿಕೋತ್ಸವದಲ್ಲಿ 65039 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 328 ಚಿನ್ನದ ಪದಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಪಬೆಂಗಳೂರು ವಿವಿಯ ಎಮ್‍ಎಸ್ಸಿ ಪದವೀಧರೆ ವಿನುತ 7ಚಿನ್ನ ಪದಕ ಪಡೆದು ಮೊದಲ ಸ್ಥಾನ ಗಳಿಸಿದರು.

ಬಿಎಂಎಸ್ ಮಹಿಳಾ ಕಾಲೇಜಿನ ವರಲಕ್ಷ್ಮಿ 4ಚಿನ್ನದ ಪದಕ, ಭಗವಾನ್ ಮಹಾವೀರ್ ಜೈನ್ ಕಾಲೇಜಿನ ಶಂಕರ್ ಭಾಷಂ 5ಚಿನ್ನದ ಪದಕ ಪಡೆದರೆ. ಅನುಗ್ರಹ ಬಿಎಡ್ ಕಾಲೇಜಿನ ಸೌಮ್ಯ 3ಚಿನ್ನದ ಪದಕ ಪಡೆದರು.

ಚಿನ್ನದ ಪದಕವು 20ಗ್ರಾಂ ಬೆಳ್ಳಿಯ ಮೇಲೆ 1.3ಗ್ರಾಂ ಚಿನ್ನದ ಲೇಪನ ಒಳಗೊಂಡಿದೆ. 166ವಿದ್ಯಾರ್ಥಿಗಳಿಗೆ ಪಿಎಚ್‍ಡಿ ಪದವಿ ಪ್ರಧಾನ ಮಾಡಲಾಯಿತು. ಬೆಂಗಳೂರು ವಿಶ್ವ ವಿದ್ಯಾಲಯದ ಕುಲಾಧಿಪತಿಯೂ ಆದ ವಜುಭಾಯಿ ವಾಲಾ, ಕುಲಪತಿ ಪೆÇ್ರ.ವೇಣುಗೋಪಾಲ ಸೇರಿದಂತೆ ಮತ್ತಿತರ ಗಣ್ಯರು ಇದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ