ಅಮೆರಿಕ ಅಧ್ಯಕ್ಷೀಯ ಚುನಾವಣೆ : ಸ್ಟೇಜ್ ಫೈಟ್‌ನಲ್ಲಿ ಫೆನ್ಸ್-ಕಮಲಾ ಜಟಾಪಟಿ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಅ.8-ಕೊರೊನಾ ಹೆಮ್ಮಾರಿಯ ಹಾವಳಿ ನಡುವೆಯೂ ಅಮೆರಿಕದಲ್ಲಿ ಮುಂದಿನ ತಿಂಗಳು 3ರಂದು ನಡೆಯಲಿರುವ ಹೈವೋಲ್ಟೇಜ್ ಅಧ್ಯಕ್ಷೀಯ ಚುನಾವಣೆಯ ಕಾವು ದಿನೇ ದಿನೇ ಏರತೊಡಗಿದೆ. ಅಮೆರಿಕದ ಉಥ್ನ ಸಾಲ್ಟ್ಲೇಕ್ ಸಿಟಿಯಲ್ಲಿ ಇಂದು ನಡೆದ ಉಪಾಧ್ಯಕ್ಷೀಯ ಅಭ್ಯರ್ಥಿಗಳಾದ ಹಾದಿ ಉಪಾಧ್ಯಕ್ಷ-ರಿಪಬ್ಲಿಕನ್ ಪಕ್ಷದ ಉಮೇದುವಾರ ಮೈಕ್ ಫೆನ್ಸ್ ಹಾಗೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ-ಕ್ಯಾಲಿಫೋರ್ನಿಯಾ ಸೆನೆಟರ್ ಭಾರತೀಯ ಸಂಜಾತೆ ಕಮಲಾ ಹ್ಯಾರಿಸ್ ನಡುವಣ ಮುಖಾಮುಖಿ ಚರ್ಚೆ ಭಾರೀ ವಾದ ಮತ್ತು ವಾಗ್ವಾದಕ್ಕೆ ಸಾಕ್ಷಿಯಾಯಿತು.

ಕೊರೊನಾ ಹಾವಳಿ, ಜನಾಂಗೀಯ ಘರ್ಷಣೆ, ವಿದೇಶಾಂಗ ನೀತಿ, ಸರ್ಕಾರದ ಧೋರಣೆಗಳು, ಪರಿಸರ ಸಂರಕ್ಷಣೆ ಸೇರಿದಂತೆ ಅನೇಕ ವಿಷಯಗಳು ಇವರಿಬ್ಬರ ಸ್ಟೇಜ್ ಪೈಟ್ ವೇಳೆ ಪ್ರಸ್ತಾಪವಾಗಿ ಮಾತಿನ ಚಕಮಕಿ ಮತ್ತು ವಾಕ್ಸಮರಕ್ಕೆ ಕಾರಣವಾಯಿತು. ಅಮೆರಿಕ ಅಧ್ಯಕ್ಷ ಟ್ರಂಪ್ ಆಡಳಿತ ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಅವರ ಮಿತ್ರ ರಾಷ್ಟ್ರಗಳಿಗೆ ನಂಬಿಕೆ ದ್ರೋಹಮಾಡಿ ಸರ್ವಾಕಾರಿಗಳಿಗೆ ಮಣೆ ಹಾಕಿದ್ದಾರೆ ಎಂದು ಕಮಲಾ ಆರೋಪಿಸಿದರು.

ಇದಕ್ಕೆ ಪ್ರತ್ಯುತ್ತರ ನೀಡಿದ ಮೈಕ್ ಫೆನ್ಸ್, ಟ್ರಂಪ್ ಆಡಳಿತದಲ್ಲಿ ಮಿತ್ರ ದೇಶಗಳೊಂದಿಗೆ ಸಂಬಂಧ ಮತ್ತಷ್ಟು ಬಲವರ್ಧನೆಯಾಗಿದೆ. ಇಲ್ಲಸಲ್ಲದ ಆರೋಪಗಳನ್ನು ಮಾಡಬೇಡಿ ಎಂದು ಕಮಲಾ ಅವರಿಗೆ ತಿರುಗೇಟು ನೀಡಿದಾಗ ಉಪಾಧ್ಯಕ್ಷೀಯ ಅಭ್ಯರ್ಥಿಗಳ ನಡುವೆ ಏರಿದ ಧ್ವನಿಯಲ್ಲಿ ವಾಗ್ವಾದ ನಡೆಯಿತು.

ಇದು ಇವರಿಬ್ಬರ ಪ್ರಥಮ ಮತ್ತು ಏಕೈಕ ಮುಖಾಮುಖಿ ಚರ್ಚೆಯಾಗಿದ್ದು, ಟ್ವೀಟರ್ನಲ್ಲಿ ಫೆನ್ಸ್-ಕಮಲಾ ನಡುವೆ ಪೈಟ್ ಮುಂದುವರಿದಿದೆ.  ಅ.15ಕ್ಕೆ ಟ್ರಂಪ್-ಬಿಡೆನ್ 2ನೆ ಫೈಟ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ಗೆ ಪ್ರಬಲ ಅಭ್ಯರ್ಥಿಯಾಗಿ ಕಣದಲ್ಲಿರುವ ಮಾಜಿ ಉಪಾಧ್ಯಕ್ಷ ಜೋ ಬಿಡೆನ್, ಅಕ್ಟೋಬರ್ 15ರಂದು ಮಿಯಾಮಿ ನಗರದಲ್ಲಿ ಎರಡನೇ ಫೇಸ್-ಟು-ಫೇಸ್ ಸ್ಟೇಜ್ ಫೈಟ್ನಲ್ಲಿ ವಾಗ್ದಾಳಿಗೆ ಸಜ್ಜಾಗಿದ್ದಾರೆ.

ಆದರೆ, ಮೊನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ ಬಿಡೆನ್, ಅಮೆರಿಕ ಅಧ್ಯಕ್ಷರಿಗೆ ಕೊರೊನಾ ವೈರಸ್ ಸೋಂಕು ಮುಂದುವರಿದಲ್ಲಿ ನಾನು ಅವರೊಂದಿಗೆ ಎರಡನೆ ಮುಖಾಮುಖಿ ಚರ್ಚೆಯಲ್ಲಿ ಭಾಗವಹಿಸಲಾರೆ ಎಂದು ತಿಳಿಸಿದ್ದರು.

74 ವರ್ಷದ ಟ್ರಂಪ್ ಮತ್ತು 77 ವರ್ಷದ ಬಿಡೆನ್ ನಡುವೆ ಒಟ್ಟು ಮೂರು ಮುಖಾಮುಖಿ ಸಂವಾದ ನಿಗದಿಯಾಗಿದ್ದು, ಸೆ.29ರಂದು ನಡೆದ ಫೇಸ್-ಟು-ಫೇಸ್ ಸ್ಟೇಜ್ ಫೈಟ್ನಲ್ಲಿ ಇವರಿಬ್ಬರು ಭಾಗವಹಿಸಿ ಪರಸ್ಪರ ಆರೋಪ-ಪ್ರತ್ಯಾರೋಪಗಳೊಂದಿಗೆ ವಾದ-ವಾಗ್ವಾದ ನಡೆಸಿದ್ದರು.

ಅ.15ರಂದು ಮಿಯಾಮಿಯಲ್ಲಿ ಎರಡನೆ ಮತ್ತು ಇದೇ ತಿಂಗಳ 22ರಂದು ನಾಶ್ವಿಲ್ಲೆಯಲ್ಲಿ ಮೂರನೆ ಮುಖಾಮುಖಿ ಚರ್ಚೆ ನಡೆಯಬೇಕಿದೆ.  ವಿಶ್ವದಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ನವೆಂಬರ್ 3ರಂದು ನಡೆಯಲಿದೆ. ವಿಶ್ವದ ಮಹಾ ಶಕ್ತಿಶಾಲಿ ದೇಶವನ್ನು ಈ ಸಂಕಷ್ಟದಲ್ಲಿ ಯಾರು ಮುನ್ನಡೆಸುತ್ತಾರೆ ಎಂಬ ಬಗ್ಗೆ ಜಗತ್ತಿನಾದ್ಯಂತ ತೀವ್ರ ಕುತೂಹಲ ಉಂಟಾಗಿದೆ.

Facebook Comments

Sri Raghav

Admin