ಪ್ರಧಾನಿಗೆ ಕೋವಿಡ್ ಅಪ್ಡೇಟ್ಸ್ ನೀಡಿದ ಡಿಸಿಎಂ ಅಶ್ವಥ್ ನಾರಾಯಣ, ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.11- ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಕೋವಿಡ್-19 ಸೋಂಕು ಪ್ರಕರಣಗಳ ಹೆಚ್ಚಳ,ಉಂಟಾಗಿರುವ ಸಾವು, ಪ್ರಸ್ತುತ ಪರಿಸ್ಥಿತಿ ಹಾಗೂ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತಂತೆ ಸಚಿವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ಒದಗಿಸಿದ್ದಾರೆ.

ಸಿಎಂ ಬಿಎಸ್‍ವೈ ಅನುಪಸ್ಥಿತಿಯಲ್ಲಿ ಉಪ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಡಿಯೋ ಸಂವಾದ ನಡೆಸಿ ಕೋವಿಡ್ ಬಿಕ್ಕಟ್ಟಿನ ಕುರಿತಂತೆ ಮಾಹಿತಿ ನೀಡಿದರು.

ರಾಜ್ಯದಲ್ಲಿ ನಿನ್ನೆಯವರೆಗೂ ಬಂದಿರುವ ಸೋಂಕಿನ ಪ್ರಕರಣಗಳು, ಕೋವಿಡ್‍ನಿಂದ ಸಂಭವಿಸಿರುವ ಸಾವು, ಸಕ್ರಿಯ ಪ್ರಕರಣಗಳು, ಕೋವಿಡ್ ನಿಯಂತ್ರಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳು, ತಂತ್ರಜ್ಞಾನ ಅಳವಡಿಕೆ, ಕೋವಿಡ್ ಕೇಂದ್ರಗಳು, ಕಂಟೋನ್ಮೆಂಟ್ ಜೋನ್ ಸೇರಿದಂತೆ ಇಂಚಿಂಚೂ ಮಾಹಿತಿಗಳನ್ನು ಪ್ರಧಾನಿಗೆ ಉಭಯ ಸಚಿವರು ವಿವರಿಸಿದರು.

ರಾಜ್ಯದಲ್ಲಿ ಕೋವಿಡ್ ನಿಯಂತ್ರಿಸಲು ಸರ್ಕಾರ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಮುಂದುವರೆದ ತಂತ್ರಜ್ಞಾನ ಅಳವಡಿಸಿಕೊಂಡು ಸೋಂಕು ಒಬ್ಬರಿಂದ ಒಬ್ಬರಿಗೆ ಹಬ್ಬದಂತೆ ತಡೆಗಟ್ಟಬಹುದು ಎಂಬುದನ್ನು ದೇಶದಲ್ಲೇ ಮೊದಲ ಬಾರಿಗೆ ರುಜುವಾತು ಮಾಡಿದ ಏಕೈಕ ರಾಜ್ಯವೆಂದರೆ ಕರ್ನಾಟಕ.

ಕರ್ನಾಟಕದ ಈ ಮಾದರಿಯನ್ನು ಬೇರೆ ರಾಜ್ಯಗಳು ಅಳವಡಿಸಿಕೊಳ್ಳುವಂತೆ ಖುದ್ದು ಕೇಂದ್ರ ಸಚಿವರೇ ಸಲಹೆ ಮಾಡಿದ್ದರು. ಲಾಕ್‍ಡೌನ್ ತೆರವುಗೊಳಿಸಿದ ನಂತರ ಬೇರೆ ಬೇರೆ ರಾಜ್ಯಗಳಿಂದ ವಲಸಿಗರು ಬಂದ ಪರಿಣಾಮ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಯಿತು ಎಂದು ಸುಧಾಕರ್ ತಿಳಿಸಿದರು.

ಕಳೆದ ಒಂದು ವಾರದಿಂದ ಪಾಸಿಟಿವ್ ಪ್ರಕರಣಗಳ ಸಂಖ್ಯೆಗಿಂತ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವ ಸಂಖ್ಯೆಗಳು ಗಣನೀಯವಾಗಿ ಹೆಚ್ಚಳವಾಗುತ್ತಿವೆ. ಈಗಲೂ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. ಸಂಘಸಂಸ್ಥೆಗಳು, ಸರ್ಕಾರತೇರ ಸಂಸ್ಥೆಗಳು ಸೇರಿದಂತೆ ಮತ್ತಿತರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದೇವೆ.

ಈಗಲೂ ಕಂಟೋನ್ಮೆಂಟ್ ಜೋನ್‍ಗಳಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದೇವೆ. ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ, ಕಡ್ಡಾಯವಾಗಿ ಮಾಸ್ಕ ಧರಿಸಬೇಕೆಂಬ ನಿಯಮವನ್ನು ಜಾರಿ ಮಾಡಿದ್ದೇವೆ ಎಂದು ಹೇಳಿದರು.

ರಾಜ್ಯದ ಸ್ಥಿತಿಗತಿಗಳ ಕುರಿತಾಗಿ ಪ್ರಧಾನಿಗೆ ಸಂಪೂರ್ಣ ಅಂಕಿ ಅಂಶಗಳ ಜೊತೆಗೆ, ಮುಂದಿನ ದಿನಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತಾಗಿಯೂ ಮಾಹಿತಿ ನೀಡಿದರು.

ರಾಜ್ಯದಲ್ಲಿ ಆ್ಯಂಬುಲೆನ್ಸ್‍ಗಳ ಕೊರತೆ ಇಲ್ಲ. ಅಗತ್ಯಕ್ಕೆ ಅನುಗುಣವಾಗಿ ಖರೀದಿ ಮಾಡಲಾಗಿದೆ. ಪ್ರತಿದಿನ ಕೊರೊನಾ ಪರೀಕ್ಷೆ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ಚೇತರಿಕೆ ಪ್ರಮಾಣವು ಏರಿಕೆಯಾಗಿದೆ. ಸರ್ಕಾರ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

Facebook Comments

Sri Raghav

Admin