ನಾಳೆಯ ಮೇಲ್ಮನೆ ಕಲಾಪದತ್ತ ಎಲ್ಲರ ಚಿತ್ತ, ಕೋಲಾಹಲ ನಿಶ್ಚಿತ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.14- ಗೋ ಹತ್ಯೆ ನಿಷೇಧ ವಿಧೇಯಕ, ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಕುರಿತು ಚರ್ಚೆಯ ಉದ್ದೇಶದಿಂದ ನಾಳೆ ಕರೆಯಲಾಗಿರುವ ಒಂದು ದಿನದ ವಿಧಾನಪರಿಷತ್‍ನ ಅಧಿವೇಶನ ರಣಾಂಗಣವಾಗುವ ಪರಿಸ್ಥಿತಿ ಎದುರಾಗಿದೆ. ಸಭಾಪತಿ ಚುನಾವಣೆ ವಿಷಯದಲ್ಲಿ ಬಿಜೆಪಿ, ಜೆಡಿಎಸ್‍ನದು ಒಂದು ನಿಲುವಾದರೆ, ಕಾಂಗ್ರೆಸ್ ಪಕ್ಷದ್ದು ಪ್ರತ್ಯೇಕ ನಿಲುವಾಗಿದೆ.

ಬಿಜೆಪಿ ರಾಜ್ಯಪಾಲರ ಮೊರೆ ಹೋಗಿ ಅಧಿವೇಶನಕ್ಕೆ ಸಮಯ ನಿಗದಿ ಮಾಡಿರುವುದು ಪ್ರಮುಖವಾಗಿ ಸಭಾಪತಿ ವಿರುದ್ಧದ ಅವಿಶ್ವಾಸ ಗೊತ್ತುವಳಿಯನ್ನು ಅಂಗೀಕಾರ ಮಾಡಲಿಕ್ಕಾಗಿ. ಆದರೆ, ಬಿಜೆಪಿಯ 11 ಮಂದಿ ಸದಸ್ಯರು ನ.25ರಂದು ನೀಡಿದ್ದ ಅವಿಶ್ವಾಸ ನಿಲುವಳಿ ಸೂಚನೆಯನ್ನು ಪ್ರತಾಪ್‍ಚಂದ್ರಶೆಟ್ಟಿ ಈಗಾಗಲೇ ತಿರಸ್ಕರಿಸಿ ಸದಸ್ಯರಿಗೆ ಕಾರ್ಯದರ್ಶಿ ಮೂಲಕ ಹಿಂಬರಹವನ್ನು ಕೊಡಿಸಿದ್ದಾರೆ.

ಆದರೆ, ಬಿಜೆಪಿ ಇದನ್ನು ಒಪ್ಪಲು ತಯಾರಿಲ್ಲ. ಸಭಾಪತಿಯವರ ವಿರುದ್ಧ ನಮ್ಮ ಅವಿಶ್ವಾಸ ನಿರ್ಣಯವಿದೆ. ಅದನ್ನು ಚರ್ಚಿಸಲು ಅವಕಾಶ ನೀಡಲೇಬೇಕು. ಸದನದ ಹೊರಗೆ ತಿರಸ್ಕರಿಸಿದ್ದೇನೆ ಎಂದು ಪ್ರಕಟಿಸುವುದು ಯೋಚಿತ ಅಲ್ಲ. ಕಲಾಪದಲ್ಲಿಯೇ ತಿರಸ್ಕಾರಕ್ಕೆ ಸಕಾರಣ ಕೊಟ್ಟು ರೂಲಿಂಗ್‍ಅನ್ನು ಹೇಳಬೇಕು. ಆ ವರೆಗೂ ನಾವು ನಮ್ಮ ಪಟ್ಟನ್ನು ಸಡಿಲಿಸುವುದಿಲ್ಲ. ನಾವು ನೀಡಿರುವ ಅವಿಶ್ವಾಸ ಗೊತ್ತುವಳಿ ಸೂಚನೆ ಊರ್ಜಿತವಾಗಿದೆ ಎಂದು ಬಿಜೆಪಿ ವಾದಿಸುತ್ತಿದೆ.

ಬಿಜೆಪಿ ಮಂಡಿಸಿರುವ ಅವಿಶ್ವಾಸ ಗೊತ್ತುವಳಿಗೆ ಬೆಂಬಲ ನೀಡಲು ಜೆಡಿಎಸ್ ನಿರ್ಧರಿಸಿದೆ. ಸಂಖ್ಯಾಬಲದ ಪ್ರಕಾರ ಜೆಡಿಎಸ್ ಬೆಂಬಲ ಸಿಕ್ಕಿದ್ದೇ ಆದರೆ ಕಾಂಗ್ರೆಸ್ ಪಕ್ಷದಿಂದ ಸಭಾಪತಿಯಾಗಿರುವ ಪ್ರತಾಪ್‍ಚಂದ್ರಶೆಟ್ಟಿ ಅವರು ಪದಚ್ಯುತಗೊಳ್ಳುವ ಸಾಧ್ಯತೆ ದಟ್ಟವಾಗಿವೆ. ವಿಧಾನಪರಿಷತ್‍ನಲ್ಲಿ ಬಿಜೆಪಿ 31 ಮಂದಿ ಸದಸ್ಯರನ್ನು ಹೊಂದಿದ್ದರೆ, ಜೆಡಿಎಸ್ 14 ಮಂದಿ ಸದಸ್ಯರನ್ನು ಹೊಂದಿದೆ. ಪಕ್ಷೇತರ ಒಬ್ಬ ಸದಸ್ಯರಿದ್ದಾರೆ. ಪಕ್ಷೇತರ, ಜೆಡಿಎಸ್ ಹಾಗೂ ಬಿಜೆಪಿ ಸೇರ್ಪಡೆಯಾದರೆ ಒಟ್ಟು 46 ಸದಸ್ಯರ ಸಂಖ್ಯಾ ಬಲವಾಗಲಿದೆ. ಕಾಂಗ್ರೆಸ್ ಸಭಾಪತಿ ಸೇರಿದಂತೆ ಒಟ್ಟು 29 ಮಂದಿ ಸದಸ್ಯರ ಸಂಖ್ಯಾಬಲ ಹೊಂದಿದೆ.

ಅವಿಶ್ವಾಸನಿರ್ಣಯ ವಿಚಾರದಲ್ಲಿ ಗೆಲ್ಲಲು ಕಾಂಗ್ರೆಸ್‍ಗೆ ಅಗತ್ಯವಾದ ಸಂಖ್ಯಾಬಲ ಇಲ್ಲ. ಹೀಗಾಗಿ ಸಭಾಪತಿಯವರು ಅವಿಶ್ವಾಸ ಗೊತ್ತುವಳಿಯನ್ನು ತಿರಸ್ಕರಿಸಿರುವುದಕ್ಕೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ. ಕಳೆದ ಡಿ.10ರಂದು ಅಧಿವೇಶನದ ಕೊನೆಯ ಸಂದರ್ಭದಲ್ಲಿ ಎಲ್ಲಾ ಮಸೂದೆಗಳು ಅಂಗೀಕಾರಗೊಂಡಿದ್ದವು. ಕಲಾಪ ಮುಂದುವರೆಸಲು ಯಾವುದೇ ವಿಷಯಗಳು ಇರಲಿಲ್ಲ.

ಗೋಹತ್ಯೆ ನಿಷೇಧ ಕಾಯ್ದೆಯನ್ನು ವಿಧಾನಸಭೆಯಲ್ಲಿ ಅಂಗೀಕಾರ ಮಾಡಿಕೊಂಡಿದ್ದ ಸರ್ಕಾರ, ವಿಧಾನಪರಿಷತ್‍ನಲ್ಲೂ ಮಂಡಿಸಿ ಚರ್ಚೆಗೆ ಅವಕಾಶ ನೀಡಲಿದೆ ಎಂಬ ನಿರೀಕ್ಷೆಗಳಿದ್ದವು. ಆದರೆ, ಅಂದು ಪರಿಷತ್‍ನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರ ಸಂಖ್ಯಾಬಲ 37 ಇತ್ತು. ಬಿಜೆಪಿಯ 31 ಮಂದಿ ಸದಸ್ಯರು ಇದ್ದರು.

ಸಂಜೆ ಮೇಲೆ ಬಹಳಷ್ಟು ಮಂದಿ ಸದಸ್ಯರು ಮನೆಗೆ ಹೋಗಿರುತ್ತಾರೆ. ಪ್ರತಿ ಪಕ್ಷದವರ ಸಂಖ್ಯೆ ಕಡಿಮೆ ಇದ್ದಾಗ ವಿಧೇಯಕವನ್ನು ಮತಕ್ಕೆ ಹಾಕಿ ಅಂಗೀಕಾರ ಪಡೆದುಕೊಳ್ಳಬೇಕೆಂಬ ಉದ್ದೇಶ ಬಿಜೆಪಿಯದಾಗಿತ್ತು. ಆದರೆ, ಜೆಡಿಎಸ್ ಮತ್ತು ಕಾಂಗ್ರೆಸ್‍ನ ಬಹಳಷ್ಟು ಸದಸ್ಯರು ಸದನದಲ್ಲಿ ಹಾಜರಿದ್ದರು. ಜೆಡಿಎಸ್ ಅವಿಶ್ವಾಸ ನಿರ್ಣಯದಲ್ಲಿ ಕಾಂಗ್ರೆಸ್‍ಗೆ ವಿರುದ್ಧವಾಗಿ ನಿಂತಿರಬಹುದು. ಆದರೆ, ಗೋ ಹತ್ಯೆ ನಿಷೇಧ ವಿಧೇಯಕದ ವಿಷಯದಲ್ಲಿ ಕಾಂಗ್ರೆಸ್ ಪರವಾಗಿ ನಿಲ್ಲುವ ಸೂಚನೆ ನೀಡಿದೆ. ಈ ವಿಷಯದಲ್ಲಿ ಸರ್ಕಾರ ಜೆಡಿಎಸ್ ಮನವೊಲಿಕೆಗೆ ನಡೆಸಿದ ಯತ್ನ ಫಲ ನೀಡಿಲ್ಲ ಎಂದು ಕಾಂಗ್ರೆಸಿಗರು ಹೇಳುತ್ತಿದ್ದಾರೆ.

ನಾಳೆ ನಡೆಯುವ ಅಧಿವೇಶನದಲ್ಲಿ ಪ್ರಮುಖವಾಗಿ ಗೋಹತ್ಯೆ ನಿಷೇಧ ಚರ್ಚೆಗೆ ಕಾಂಗ್ರೆಸ್ ಸಿದ್ದವಿದೆ. ಉಳಿದಂತೆ ಪ್ರಶ್ನೋತ್ತರ, ನಿಲುವಳಿ ಸೂಚನೆ, ಗಮನ ಸೆಳೆಯುವ ಚರ್ಚೆಗೆ ನಾವು ತಯಾರಿರುತ್ತೇವೆ. ಸಭಾಪತಿಯವರ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡನೆ ಮಾಡಲು ಅವಕಾಶ ಇಲ್ಲ. ಈಗಾಗಲೇ ಸಭಾಪತಿಯವರು ಬಿಜೆಪಿಯವರ ಸೂಚನೆಯನ್ನು ತಿರಸ್ಕರಿಸಿದ್ದಾರೆ. ಹಾಗಾಗಿ ಅದು ಅಜೆಂಡಾದಲ್ಲೂ ಸೇರ್ಪಡೆಯಾಗುವುದಿಲ್ಲ ಎಂದು ಕಾಂಗ್ರೆಸ್‍ನ ಸಚೇತಕರಾದ ನಾರಾಯಣಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ನಾಳೆ ನಡೆಯುವ ವಿಧಾನಪರಿಷತ್‍ನ ಅಧಿವೇಶನ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರದ ಅಖಾಡವಾಗುವ ಎಲ್ಲಾ ಲಕ್ಷಣಗಳು ಗೋಚರಿಸಿವೆ. ಜೆಡಿಎಸ್ ಪಕ್ಷ ಗೋಹತ್ಯೆ ನಿಷೇಧದಲ್ಲಿ ಸರ್ಕಾರದ ವಿರುದ್ಧವಿದ್ದರೆ, ಸಭಾತಿಯವರ ಅವಿಶ್ವಾಸ ನಿರ್ಣಯದ ವಿಷಯವಾಗಿ ಸರ್ಕಾರದ ಪರವಾಗಿದೆ. ಕಾಂಗ್ರೆಸ್ ನಾಳಿನ ಅಧಿವೇಶನದಲ್ಲಿ ಗೋಹತ್ಯೆ ಸೇರಿದಂತೆ ಇತರೆ ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಿದ್ದವಿದೆ. ಒಂದು ವೇಳೆ ಗಲಾಟೆ ಹೆಚ್ಚಾದರೆ ಕಲಾಪ ಮತ್ತೆ ಅನಿರ್ದಿಷ್ಠಾವಧಿಗೆ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ.

Facebook Comments