ಬಿಜೆಪಿಯ ವಿಧಾನಪರಿಷತ್ ಆಕಾಂಕ್ಷಿಗಳಿಗೆ ಶುರುವಾಯಿತು ತಳಮಳ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.9- ರಾಜ್ಯಸಭೆ ಚುನಾವಣೆಯಲ್ಲಿ ಅಚ್ಚರಿ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಿದ ಹಿನ್ನೆಲೆ, ಪರಿಷತ್ ಮೇಲೆ ಕಣ್ಣಿಟ್ಟಿದ್ದ ಆಕಾಂಕ್ಷಿಗಳಿಗೆ ತಳಮಳ ಉಂಟಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ತಮ್ಮ ತಮ್ಮ ಗಾಡ್‍ಫಾದರ್‍ಗಳ ಮೂಲಕ ಒತ್ತಡ ಹಾಕಿ ವಿಧಾನಪರಿಷತ್ ಪ್ರವೇಶಿಸಲು ಅಣಿಯಾಗಿದ್ದವರಿಗೆ ತಳಮಳ ಸೃಷ್ಟಿಸಿದೆ.

ಜಾತಿ, ಲಾಬಿ ಪ್ರಭಾವ, ಬ್ಲಾಕ್‍ಮೇಲ್ ಇದಾವುದಕ್ಕೂ ನಾವು ಜಗ್ಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ದೆಹಲಿ ವರಿಷ್ಠರು ಎಲ್ಲಾ ರಾಜ್ಯಗಳಿಗೂ ಅನ್ವಯವಾಗುವಂತಹ ಸಂದೇಶವನ್ನು ರವಾನಿಸಿದ್ದಾರೆ. ಇದು ಸಹಜವಾಗಿ ಪರಿಷತ್ ಮೂಲಕವಾದರೂ ರಾಜಕೀಯ ಪುನರ್ ಜನ್ಮ ಪಡೆಯಲು ಮುಂದಾಗಿದ್ದವರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ದೆಹಲಿಯ ವರಿಷ್ಠರು ಯಾವುದೇ ಒತ್ತಡ, ಬ್ಲಾಕ್‍ಮೇಲ್‍ಗೆ ಬಗ್ಗುವ ಸ್ಥಿತಿಯಲ್ಲಿಲ್ಲ. ಇದು ನಿನ್ನೆ ಸಾಬೀತಾಗಿರುವುದರಿಂದ ಆಕಾಂಕ್ಷಿಗಳಿಗೆ ಮುಂದೇನು ಎಂಬ ಪ್ರಶ್ನೆ ಎದುರಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಸಚಿವರಾದ ಎಂಟಿಬಿ ನಾಗರಾಜ್, ಎಚ್.ವಿಶ್ವನಾಥ್, ಆರ್.ಶಂಕರ್ ಪ್ರಬಲ ಆಕಾಂಕ್ಷಿಯಾಗಿದ್ದರು.

ಒಂದು ಹಂತದಲ್ಲಿ ಈ ಮೂವರನ್ನು ವಿಧಾನಸಭೆಯಿಂದ ಪರಿಷತ್‍ಗೆ ಆಯ್ಕೆ ಮಾಡಲು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಆಸಕ್ತಿ ತೋರಿದ್ದರು. ಯಾವಾಗ ಪಕ್ಷದ ಪ್ರಮುಖ ನೀತಿ, ನಿರೂಪಣೆಗಳನ್ನು ತೀರ್ಮಾನಿಸುವ ಕೋರ್ ಕಮಿಟಿ ಸಭೆ ಶಿಫಾರಸ್ಸು ಮಾಡಿದ್ದ ಪಟ್ಟಿಯನ್ನೇ ದೆಹಲಿ ವರಿಷ್ಠರು ತಿರಸ್ಕರಿಸಿ ಬೇರೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದರೋ ರಾಜ್ಯ ನಾಯಕರ ಜಂಘಾ ಬಲವೇ ಹುದುಗಿ ಹೋಗಿದೆ.

ಮೊದಲ ಹಂತದ ನಾಯಕರ ಪರಿಸ್ಥಿತಿಯೇ ಹೀಗಿರುವಾಗ ನಮ್ಮ ಮಾತನ್ನು ಯಾರೂ ಕೇಳುತ್ತಾರೆ ಎಂದು ಆಕಾಂಕ್ಷಿಗಳು ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ಈಗಿನ ಲೆಕ್ಕಾಚಾರದಲ್ಲಿ ವರಿಷ್ಠರು ಯಾವುದೇ ಲಾಬಿ, ಒತ್ತಡ, ಬ್ಲಾಕ್‍ಮೇಲ್ ಬಗ್ಗುವ ಸ್ಥಿತಿಯಲ್ಲಿಲ್ಲ.

ಪಕ್ಷದ ಕಾರ್ಯಕರ್ತರಿಗೆ ಮೊದಲ ಆದ್ಯತೆ ಎಂಬ ಸಂದೇಶವನ್ನು ರವಾನಿಸಿರುವ ಕಾರಣ ಪರಿಷತ್‍ಗೆ ಯಾರನ್ನೂ ಆಯ್ಕೆ ಮಾಡಲಿದ್ದಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.  ಇದೇ ರೀತಿ ಐದು ಮಂದಿ ಪರಿಷತ್‍ಗೆ ನಾಮನಿರ್ದೇಶನ ಮಾಡುವುದರಲ್ಲೂ ಯಡಿಯೂರಪ್ಪನವರ ತೀರ್ಮಾನವೇ ಅಂತಿಮವಾಗುತ್ತದೆ ಎಂಬುದಕ್ಕೆ ಸಾಧ್ಯವಿಲ್ಲ.

ಕಲೆ, ಸಾಹಿತ್ಯ, ಪತ್ರಿಕೋದ್ಯಮ, ವಿಜ್ಞಾನ, ಕೃಷಿ, ಸಮಾಜ ಸೇವೆ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಪರಿಷತ್‍ಗೆ ನಾಮಕರಣ ಮಾಡುವ ಅಧಿಕಾರ ಮುಖ್ಯಮಂತ್ರಿಗಿರುತ್ತದೆ.  ನಿನ್ನೆಯ ಬೆಳವಣಿಗೆಗಳನ್ನು ಅವಲೋಕಿಸಿದರೆ ಬಿಜೆಪಿ ವರಿಷ್ಠರು ಸೂಚಿಸುವ ಪಟ್ಟಿಯನ್ನು ಮುಖ್ಯಮಂತ್ರಿಯವರು ರಾಜಭವನದ ಒಪ್ಪಿಗೆಗೆ ಕಳುಹಿಸಿಕೊಡದೆ ಬೇರೆ ದಾರಿಯೇ ಇಲ್ಲದಂತಾಗಿದೆ.

Facebook Comments