ವಿಧಾನಪರಿಷತ್‍ ಚುನಾವಣೆ : 7 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.18- ವಿಧಾನಸಭೆಯಿಂದ ವಿಧಾನ ಪರಿಷತ್‍ನ ಏಳು ಸದಸ್ಯ ಸ್ಥಾನಗಳಿಗೆ ಇದೇ 29ರಂದು ನಡೆಯಲಿರುವ ದ್ವೈವಾರ್ಷಿಕ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದ್ದು, ಬಹುತೇಕ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.

ಪರಿಷತ್‍ನ ಏಳು ಸ್ಥಾನಗಳಿಗೆ ಬಿಜೆಪಿಯಿಂದ ನಾಲ್ವರು, ಕಾಂಗ್ರೆಸ್‍ನಿಂದ ಇಬ್ಬರು ಹಾಗೂ ಜೆಡಿಎಸ್‍ನಿಂದ ಒಬ್ಬರು ಸ್ಪರ್ಧಿಸಿರುವುದರಿಂದ ಅವಿರೋಧ ಆಯ್ಕೆಯಾಗುವ ಸಾಧ್ಯತೆಗಳೇ ಹೆಚ್ಚಾಗಿವೆ.

ಆಡಳಿತಾರೂಢ ಬಿಜೆಪಿಯಿಂದ ಮಾಜಿ ಸಚಿವರಾದ ಎಂಟಿಬಿ ನಾಗರಾಜ್, ಆರ್.ಶಂಕರ್, ಸುನಿಲ್ ವಲ್ಯಾಪುರೆ, ಪ್ರತಾಪ್ ಸಿಂಹ ನಾಯಕ್, ವಿರೋಧ ಪಕ್ಷಗಳಾದ ಕಾಂಗ್ರೆಸ್‍ನಿಂದ ಬಿ.ಕೆ.ಹರಿಪ್ರಸಾದ್, ನಜೀರ್ ಆಹಮ್ಮದ್ ಹಾಗೂ ಜೆಡಿಎಸ್‍ನಿಂದ ಇಂಚರ ಗೋವಿಂದರಾಜು ಅವರುಗಳು ತಮ್ಮ ಉಮೇದುವಾರಿಕೆಯನ್ನು ಇಂದು ಸಲ್ಲಿಸಿದರು.

ಮೂರು ಪಕ್ಷಗಳ ಅಭ್ಯರ್ಥಿಗಳು ಪ್ರತ್ಯೇಕವಾಗಿ ತಮ್ಮ ತಮ್ಮ ನಾಯಕರ ಜತೆ ವಿಧಾನಸೌಧಕ್ಕೆ ಆಗಮಿಸಿ ರಾಜ್ಯಸಭೆ ಚುನಾವಣಾ ಅಧಿಕಾರಿಯೂ ಆಗಿರುವ ವಿಧಾನಸಭಾ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವರು ಹಾಗೂ ಪಕ್ಷದ ಮುಖಂಡರು ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಹಾಜರಿದ್ದರು. ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ,  ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್ ಸೇರಿದಂತೆ ಕಾಂಗ್ರೆಸ್‍ನ ಹಲವು ನಾಯಕರು ಉಪಸ್ಥಿತರಿದ್ದರು.

ಜೆಡಿಎಸ್ ಅಭ್ಯರ್ಥಿ ಇಂಚರ ಗೋವಿಂದರಾಜು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಮಾಜಿ ಸಚಿವರಾದ ಬಸವರಾಜ ಹೊರಟ್ಟಿ, ಬಂಡೆಪ್ಪ ಕಾಶಂಪೂರ್, ವೆಂಕಟರಾವ್ ನಾಡಗೌಡ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದರು. ಅಲ್ಲದೆ, ಪಕ್ಷೇತರ ಅಭ್ಯರ್ಥಿಯಾಗಿ ಎಡವನಹಳ್ಳಿ ಪಿಸಿ ಕೃಷ್ಣೇಗೌಡ ಕೂಡ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ರಾಜ್ಯಸಭಾ ಚುನಾವಣೆಯಂತೆ ಪರಿಷತ್ ಚುನಾವಣೆಯಲ್ಲೂ ಎಲ್ಲ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ನಾಮಪತ್ರ ಸಲ್ಲಿಕೆಗೂ ಮುನ್ನ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ತಮ್ಮ ಪಕ್ಷದ ಕಚೇರಿಗೆ ತೆರಳಿ ಬಿ ಫಾರಂ ಪಡೆದರು. ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಬೆಳಗ್ಗೆ ನಾಲ್ವರು ಅಭ್ಯರ್ಥಿಗಳು ಆಗಮಿಸಿ ಬಿ ಪಾರಂ ಪಡೆದುಕೊಂಡರು.

ಎಂಟಿಬಿ ನಾಗರಾಜ್, ಆರ್.ಶಂಕರ್, ಸುನಿಲ್ ವಲ್ಯಾಪುರೆ, ಪ್ರತಾಪ್ ಸಿಂಹ ನಾಯಕ್, ಅವರುಗಳಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಅಭ್ಯರ್ಥಿಗಳಿಗೆ ಬಿ ಪಾರಂ ವಿತರಿಸಿ ಶುಭ ಹಾರೈಸಿದರು.

ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಬಿ.ಕೆ.ಹರಿಪ್ರಸಾದ್ ಹಾಗೂ ನಜೀರ್ ಆಹಮ್ಮದ್‍ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬಿ ಪಾರಂ ವಿತರಣೆ ಮಾಡಿದರು.

ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅವರಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪಕ್ಷದ ಬಿ ಫಾರಂ ನೀಡಿ ಶುಭ ಹಾರೈಸಿದರು.

ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂ.22ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಚುನಾವಣಾ ಕಣದಲ್ಲಿ ಏಳು ಮಂದಿಗಿಂತ ಹೆಚ್ಚು ಅಭ್ಯರ್ಥಿಗಳು ಉಳಿದರೆ ಜೂ.29ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು, ಅಂದೇ ಸಂಜೆ 5 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ.

# ಯಾರು ಯಾರು ನಿವೃತ್ತಿ?
ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹಮದ್, ಜಯಮ್ಮ, ಎಂ.ಸಿ. ವೇಣುಗೋಪಾಲ್, ಎನ್.ಎಸ್. ಬೋಸರಾಜು, ಎಚ್.ಎಂ.ರೇವಣ್ಣ, ಟಿ.ಎ.ಶರವಣ, ಡಿ.ಯು. ಮಲ್ಲಿಕಾರ್ಜುನ ಅವರು ಜೂನ್ 30ರಂದು ನಿವೃತ್ತರಾಗಲಿದ್ದಾರೆ. ಶಾಸಕರ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿ 4, ಕಾಂಗ್ರೆಸ್ 2 ಮತ್ತು ಜೆಡಿಎಸ್ 1 ಸ್ಥಾನವನ್ನು ಸುಲಭವಾಗಿ ಗೆದ್ದುಕೊಳ್ಳಲಿವೆ.

Facebook Comments