ಮೇಲ್ಮನೆ ಚುನಾವಣೆಗೆ ಕ್ಷಣಗಣನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.27- ಆಡಳಿತ ಮತ್ತು ಪ್ರತಿಪಕ್ಷಗ ಳಿಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿರುವ ವಿಧಾನಪರಿಷತ್‍ನ ನಾಲ್ಕು ಸ್ಥಾನಗಳಿಗೆ ನಾಳೆ ಮತದಾನ ನಡೆಯಲಿದ್ದು, ಮತದಾರ ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾನೆ. ಮೇಲ್ನೋಟಕ್ಕೆ ಈ ಫಲಿತಾಂಶದಿಂದ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಯಾವುದೇ ನೇರ ಪರಿಣಾಮ ಬೀರುವುದಿಲ್ಲವಾದರೂ, ಮೇಲ್ಮನೆಯಲ್ಲಿ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲು ಅನುಕೂಲ ವಾಗಲಿದೆ.

ಒಂದು ವೇಳೆ ಬಿಜೆಪಿ ನಾಲ್ಕು ಸ್ಥಾನಗಳನ್ನೂ ಗೆದ್ದರೆ, ಪರಿಷತ್‍ನಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ಲಲು ಭಾರೀ ಕಾರ್ಯತಂತ್ರವನ್ನೇ ಹೆಣೆದಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ಗೆದ್ದ ಸ್ಥಾನಗಳೆಲ್ಲವೂ ಬೋನಸ್ ಎಂಬಂತಿದೆ.

ಆಗ್ನೇಯ ಪದವೀಧರ, ಪಶ್ಚಿಮ ಪದವೀಧರ, ಈಶಾನ್ಯ ಶಿಕ್ಷಕರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಗಳಿಂದ ವಿಧಾನಪರಿಷತ್‍ಗೆ ನಿನ್ನೆ ಸಂಜೆಯೇ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಇಂದು ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದ ದೃಶ್ಯ ಕಂಡು ಬಂದಿದೆ.

ನಾಳೆ ಬೆಳಗ್ಗೆ ಬೆಳಗ್ಗೆ 8 ಗಂಟೆಯಿಂದ ಸಂಜೆ 5ರವೆರೆಗೆ ಮತದಾನ ನಡೆಯಲಿದ್ದು, ನವೆಂಬರ್ 2ರಂದು ಫಲಿತಾಂಶ ಪ್ರಕಟವಾಗಲಿದೆ. ಒಟ್ಟು ಕಣದಲ್ಲಿ 15 ಅಭ್ಯರ್ಥಿಗಳಿದ್ದು ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಆರ್.ಚೌಡರೆಡ್ಡಿ, ಕಾಂಗ್ರೆಸ್‍ನಿಂದ ರಮೇಶ್‍ಬಾಬು ಕಣಕ್ಕಿಳಿಯಲಿದ್ದಾರೆ. ಬಿಜೆಪಿಯಿಂದ ಚಿದಾನಂದ ಗೌಡ ಅಭ್ಯರ್ಥಿಯಾಗಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಬಿಜೆಪಿಯಿಂದ ಎಸ್.ವಿ.ಸಂಕನೂರ, ಕಾಂಗ್ರೆಸ್‍ನಿಂದ ಕುಬೇರಪ್ಪ, ಅಭ್ಯರ್ಥಿಯಾಗಿದ್ದಾರೆ.

ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 74,268 (ಪುರುಷರು-47,584, ಮಹಿಳೆಯರು-26673, ಇತರ-11), ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 1,09,127 (ಪುರುಷರು-68,411, ಮಹಿಳೆಯರು-40,712, ಇತರ-4), ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 29,234 (ಪುರುಷರು-18,948, ಮಹಿಳೆಯರು-10,284, ಇತರ-2), ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 22,089 (ಪುರುಷರು-7,946, ಮಹಿಳೆಯರು-14,140, ಇತರ-3) ಮತದಾರರಿದ್ದಾರೆ.

ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಆರ್.ಚೌಡಾರೆಡ್ಡಿ ತೂಪಲ್ಲಿ (ಜೆಡಿಎಸ್), ರಮೇಶ್ ಬಾಬು (ಕಾಂಗ್ರೆಸ್), ಚಿದಾನಂದ ಗೌಡ (ಬಿಜೆಪಿ) ಕಣದಲ್ಲಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಎಸ್.ವಿ.ಸಂಕನೂರ (ಬಿಜೆಪಿ) ಕುಬೇರಪ್ಪ (ಕಾಂಗ್ರೆಸ್), ಬಸವರಾಜ ಗುರಿಕಾರ (ಪಕ್ಷೇತರ) ನಡುವೆ ಸ್ಪರ್ಧೆ ಇದೆ.

ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶರಣಪ್ಪ ಮಟ್ಟೂರ (ಕಾಂಗ್ರೆಸ್), ಶಶಿಲ್ ನಮೋಶಿ (ಬಿಜೆಪಿ), ತಿಮ್ಮಯ್ಯ ಪುರ್ಲೆ (ಜೆಡಿಎಸ್) ಕಣದಲ್ಲಿದ್ದರೆ, ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯಿಂದ ಪುಟ್ಟಣ್ಣ, ಜೆಡಿಎಸ್‍ನಿಂದ ಎ.ಪಿ.ರಂಗನಾಥ್, ಕಾಂಗ್ರೆಸ್‍ನಿಂದ ಪ್ರವೀಣ್ ಪೀಟರ್ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ ಸದಸ್ಯರ ಅವಧಿ ಜೂನ್ 30ಕ್ಕೆ ಅಂತ್ಯಗೊಂಡಿದ್ದು, ಕೋವಿಡ್ ಕಾರಣದಿಂದ ಚುನಾವಣೆ ಮುಂದೂಡಲಾಗಿತ್ತು. ಮತ ಎಣಿಕೆ ನ.2ರಂದು ನಡೆಯಲಿದೆ.

Facebook Comments