ಪರಿಷತ್‍ ಚುನಾವಣೆ : ಅಭ್ಯರ್ಥಿಗಳಿಂದ ಕೊನೆ ಕ್ಷಣದ ಕಸರತ್ತು, ಮನೆ ಮನೆ ಪ್ರಚಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.8- ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ನ 20 ಕ್ಷೇತ್ರಗಳ 25 ಸ್ಥಾನಗಳಿಗೆ ನಡೆಯುವ ಚುನಾವಣೆ ಬಹಿರಂಗ ಪ್ರಚಾರಕ್ಕೆ ಈಗಾಗಲೇ ತೆರೆಬಿದ್ದಿದ್ದು, ಮನೆ ಮನೆ ಪ್ರಚಾರ ನಡೆಯುತ್ತಿದೆ. ನಿನ್ನೆ ಸಂಜೆ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಇಂದು ಮತ್ತು ನಾಳೆ ಮನೆ ಮನೆ ಪ್ರಚಾರಕ್ಕೆ ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಅಭ್ಯರ್ಥಿಗಳು ಅವರ ಬೆಂಬಲಿಗರು ಮತದಾರ ರನ್ನು ಸಂಪರ್ಕಿಸಿ ಮತ ಯಾಚಿಸುತ್ತಿದ್ದಾರೆ.

ಕೆಲವು ಅಭ್ಯರ್ಥಿಗಳ ಬೆಂಬಲಿಗರು ಮತದಾರರನ್ನು ಸೆಳೆಯಲು ಆಸೆ, ಆಮಿಷಗಳನ್ನು ಒಡ್ಡುತ್ತಿರುವುದಲ್ಲದೆ ಸೀರೆ, ಹಣ, ಉಡುಗೊರೆಗಳನ್ನು ದಾರಾಳವಾಗಿ ನೀಡುತ್ತಿದ್ದಾರೆ ಎಂದು ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ. ಡಿ.10ರಂದು ಮತದಾನ ನಡೆಯಲಿದ್ದು, 6073 ಮತಗಟ್ಟೆ ಗಳನ್ನು ತೆರೆಯ ಲಾಗುತ್ತದೆ. 48,368 ಪುರುಷರು, 51,474 ಮಹಿಳೆಯರು, ಇತರೆ ಮೂವರು ಸೇರಿದಂತೆ 98,846 ಮತದಾರರು ವಿಧಾನಪರಿಷತ್ ಚುನಾವಣೆ ಯಲ್ಲಿ ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.

ಶುಕ್ರವಾರ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಮತ ಎಣಿಕೆಯು ಡಿ.14ರಂದು ನಡೆದು ಅಂದೇ ಫಲಿತಾಂಶ ಹೊರ ಬೀಳುವ ಸಾಧ್ಯತೆಯಿದೆ. ಡಿ.16ರ ವೇಳೆಗೆ ಚುನಾವಣೆ ಪ್ರಕ್ರಿಯೆ ಪೂರ್ಣ ಗೊಳ್ಳಲಿದೆ. ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ತಲಾ 20 ಕ್ಷೇತ್ರಗಳಲ್ಲಿ ಸ್ರ್ಪಧಿಸಿದ್ದರೆ ಜೆಡಿಎಸ್ 6 ಕ್ಷೇತ್ರಗಳಲ್ಲಿ ಮಾತ್ರ ಸ್ರ್ಪಧಿಸಿವೆ.

ಮೂರು ಪಕ್ಷಗಳು ಈ ಚುನಾವಣೆಯನ್ನು ಪ್ರತಿಷ್ಠೆ ಯಾಗಿ ಪರಿಗಣಿಸಿ ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಶತಾಯ ಗತಾಯ ಹೋರಾಟ ನಡೆಸುತ್ತಿವೆ. ನಾನಾ ರೀತಿಯ ತಂತ್ರ, ಪ್ರತಿತಂತ್ರಗಳ ಮೂಲಕ ಅಭ್ಯರ್ಥಿಗಳ ಗೆಲುವಿಗೆ ಹರ ಸಾಹಸ ಪಡುತ್ತಿವೆ. ಮುಂಬರುವ ವಿಧಾನಸಭೆ ಚುನಾವಣೆಗೆ ಈ ಮೇಲ್ಮನೆ ಚುನಾವಣೆ ದಿಕ್ಸೂಚಿಯಾಗಲಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಹೀಗಾಗಿ ಮೂರು ರಾಜಕೀಯ ಪಕ್ಷಗಳು ಪ್ರತಿಷ್ಠೆಯಾಗಿ ಪರಿಗಣಿಸಿ ಎಲ್ಲ ರೀತಿ ಮುತುರ್ವಜಿ ವಹಿಸಿ ಮತದಾರರನ್ನು ಆಕರ್ಷಿಸುವ ಪ್ರಯತ್ನದಲ್ಲಿ ನಿರತವಾಗಿವೆ.

Facebook Comments