ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಸಿದ್ಧತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.11- ವಿಧಾನಪರಿಷತ್ ಚುನಾವಣೆಗೆ ಕರ್ನಾಟಕ ಬಿಜೆಪಿ ಸಿದ್ಧತೆ ಆರಂಭಿಸಿದೆ. ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳು ಸೇರಿ ಒಟ್ಟು 25 ಸ್ಥಾನಗಳಿಗೆ 2022ರಲ್ಲಿ ಚುನಾವಣೆ ನಡೆಯಲಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಪರಿಷತ್‍ಗೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.

ಕರ್ನಾಟಕ ಬಿಜೆಪಿ ವಿಧಾನ ಪರಿಷತ್ ಚುನಾವಣೆಗೆ ಅಭಿಪ್ರಾಯ ಸಂಗ್ರಹ ಪ್ರಮುಖರ ಸಮಿತಿಯನ್ನು ರಚನೆ ಮಾಡಿ ಆದೇಶ ಹೊರಡಿಸಿದೆ. ಪಕ್ಷ ರಚಿಸಿದ ಸಮಿತಿಯ ಮುಖಂಡರು ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

ಮೇಲ್ಮನೆಯ ಸದಸ್ಯ ಬಲ 75. ಪ್ರಸ್ತುತ ಬಿಜೆಪಿಯ 32, ಕಾಂಗ್ರೆಸ್‍ನ 29 ಮತ್ತು ಜೆಡಿಎಸ್‍ನ 12 ಶಾಸಕರು ಇದ್ದಾರೆ. ಆಡಳಿತಾರೂಢ ಬಿಜೆಪಿ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಿಸಿದರೆ ವಿಧಾನಪರಿಷತ್‍ನಲ್ಲಿ ಮಸೂದೆಗಳನ್ನು ಪಾಸು ಮಾಡಿಕೊಳ್ಳಲು ನೆರವಾಗಲಿದೆ ಎಂಬ ಲೆಕ್ಕಾಚಾರದಲ್ಲಿದೆ.

ಈಗ ವಿಧಾನ ಪರಿಷತ್‍ನಲ್ಲಿ ಬಿಜೆಪಿಗೆ ಪೂರ್ಣ ಬಹುಮತವಿಲ್ಲ. ಆದ್ದರಿಂದ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಪರಿಷತ್ ಸಭಾಪತಿ ಸ್ಥಾನವನ್ನು ಜೆಡಿಎಸ್‍ನ ಬಸವರಾಜ ಹೊರಟ್ಟಿಗೆ ಬಿಟ್ಟುಕೊಟ್ಟಿದೆ. ಪ್ರತಿಪಕ್ಷ ಕಾಂಗ್ರೆಸ್ ಸಹ ಇರುವ ಸ್ಥಾನಗಳನ್ನು ಉಳಿಸಿಕೊಳ್ಳಲು ತಂತ್ರ ರೂಪಿಸುತ್ತಿದೆ. ಬಿಜೆಪಿ ಚುನಾವಣೆಯಲ್ಲಿ ಬಹುಮತ ಪಡೆದರೆ ಸಭಾಪತಿ ಸ್ಥಾನವನ್ನು ತಮ್ಮ ನಾಯಕರಿಗೆ ಕೊಡಬಹುದು ಎಂಬ ಲೆಕ್ಕಾಚಾರವೂ ಇದೆ.

ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಬಿಜೆಪಿಯ ಆರು ಸದಸ್ಯರು ನಿವೃತ್ತರಾಗಲಿದ್ದಾರೆ. 2022ರಲ್ಲಿ ಒಟ್ಟು 25 ಸ್ಥಾನಗಳನ್ನು ಭರ್ತಿ ಮಾಡಲು ವಿಧಾನ ಪರಿಷತ್ ಚುನಾವಣೆ ನಡೆಯಲಿದೆ. ಇದರಲ್ಲಿ ಜೆಡಿಎಸ್ ನಾಲ್ಕು ಸ್ಥಾನಗಳಲ್ಲಿ ಗೆಲ್ಲುವ ಲೆಕ್ಕಾಚಾರ ಹೊಂದಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಈಗಾಗಲೇ ಪರಿಷತ್ ಚುನಾವಣೆ ತಯಾರಿಯಲ್ಲಿ ತೊಡಗಿವೆ. ಯಾರನ್ನು ಪುನಃ ಆಯ್ಕೆ ಮಾಡಬೇಕು ಎಂದು ತಂತ್ರವನ್ನು ರೂಪಿಸುತ್ತಿವೆ.

ವಾಯುವ್ಯ ಶಿಕ್ಷಕರ ಕ್ಷೇತ್ರ, ವಾಯುವ್ಯ ಪದವೀಧರ ಕ್ಷೇತ್ರದ ವ್ಯಾಪ್ತಿಗೆ ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳು ಸೇರುತ್ತವೆ. ಈ ಜಿಲ್ಲೆಗಳಿಗೆ ಉಮೇಶ್ ಕತ್ತಿ, ಶಶಿಲ್ ನಮೋಶಿ, ಅ. ದೇವೇಗೌಡ, ಪುಟ್ಟಣ್ಣ, ಪಿ. ಎಂ. ಮುನಿರಾಜು ಗೌಡ ಅಭಿಪ್ರಾಯ ಸಂಗ್ರಹ ಪ್ರಮುಖರಾಗಿದ್ದಾರೆ.
ಪಶ್ಚಿಮ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಹುಬ್ಬಳ್ಳಿ-ಧಾರವಾಡ, ಧಾರವಾಡ ಗ್ರಾಮಾಂತರ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳು ಸೇರುತ್ತವೆ. ಶಂಕರ್ ಪಾಟೀಲ್ ಮುನೇನಕೊಪ್ಪ, ಅರುಣ್ ಶಹಾಪುರ, ಡಾ. ಎ. ಹೆಚ್. ಶಿವಯೋಗಿ ಸ್ವಾಮಿ, ಮೈ. ವಿ. ರವಿಶಂಕರ್ ಅವರುಗಳು ಈ ಕ್ಷೇತ್ರಗಳ ಅಭಿಪ್ರಾಯ ಸಂಗ್ರಹಿಸುವಲ್ಲಿ ಪ್ರಮುಖರಾಗಿದ್ದಾರೆ.

ದಕ್ಷಿಣ ಪದವೀಧರ ಕ್ಷೇತ್ರದ ವ್ಯಾಪ್ತಿಗೆ ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಜಿಲ್ಲೆಗಳು ಒಳಪಡುತ್ತವೆ. ಈ ಕ್ಷೇತ್ರಗಳ ಅಭಿಪ್ರಾಯ ಸಂಗ್ರಹಕಾರರಾಗಿ ಎಸ್. ಟಿ. ಸೋಮಶೇಖರ್, ಕೆ. ನಾರಾಯಣ ಗೌಡ, ಅಶ್ವಥ್ ನಾರಾಯಣ, ಎಸ್. ವಿ. ಸಂಕನೂರು, ವೈ. ಎ. ನಾರಾಯಣಸ್ವಾಮಿ, ಹನುಮಂತ ನಿರಾಣಿ ನೇಮಕಗೊಂಡಿದ್ದಾರೆ.

ಪ್ರತಿಪಕ್ಷ ಕಾಂಗ್ರೆಸ್ ಸಹ ವಿಧಾನ ಪರಿಷತ್ತಿನ 25 ಸ್ಥಾನಗಳ ಚುನಾವಣೆಗೆ ತಯಾರಿ ಆರಂಭಿಸಿದೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೆಲವು ಸಭೆಗಳನ್ನು ನಡೆಸಿದ್ದಾರೆ.

Facebook Comments