ವಿಧಾನ ಪರಿಷತ್‍ ಚುನಾವಣೆ, ಮೂರೂ ಪಕ್ಷಗಳಿಂದ ಬಿರುಸಿನ ಪ್ರಚಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.2- ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ನ 25 ಸ್ಥಾನಗಳಿಗೆ ನಡೆಯುತ್ತಿರುವ ದ್ವೈವಾರ್ಷಿಕ ಚುನಾವಣೆ ದಿನೇದಿನೇ ರಂಗೇರತೊಡಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. ನಾಯಕರ ಮಟ್ಟದಲ್ಲಿ ಬೆಂಬಲ, ಮೈತ್ರಿ ದೋಸ್ತಿ ಏನೇ ಮಾತುಕತೆಗಳು ನಡೆದರೂ ಸ್ಥಳೀಯ ಮಟ್ಟದಲ್ಲಿ ನಿರ್ಧಾರವಾಗುವುದರ ಹಿನ್ನಲೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಹೆಚ್ಚಿನ ಖದರ್ ಬಂದಿದೆ.

ಮೇಲ್ಮನೆ ಚುನಾವಣೆ ಎನ್ನುವುದಕ್ಕಿಂತ ಮೇಲ್ಮನಿ ಚುನಾವಣೆ ಎಂಬುದೇ ಲೇಸು ಎಂಬ ಮಾತುಗಳು ಕೇಳಿಬರುತ್ತಿವೆ. ಚುನಾವಣಾ ಕಣದಲ್ಲಿ ಇರುವ ಬಹುತೇಕ ಅಭ್ಯರ್ಥಿಗಳೆಲ್ಲ ಕೋಟಿ ಕುಳಗಳು. ಗ್ರಾಮ ಪಂಚಾಯ್ತಿ ಸದಸ್ಯರು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸದಸ್ಯರು ಮತದಾರರು. ಹೀಗಾಗಿ ಗ್ರಾಮ ಪಂಚಾಯ್ತಿ ಸದಸ್ಯರ ಮನವೊಲಿಕೆ ಯತ್ನಗಳು ಬಿರುಸುಗೊಂಡಿವೆ.

ಗ್ರಾಪಂ ಸದಸ್ಯರು ಆಯ್ಕೆ ಸಂಬರ್ಭದಲ್ಲಿ ನಾವು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೆಂದು ಹೇಳಿಕೊಂಡಿದ್ದರು. ಆದರೆ ಈಗ ಬಹುತೇಕ ಸದಸ್ಯರುಗಳು ನಾವು ಯಾವುದೇ ಪಕ್ಷದವರಲ್ಲ. ನಾವು ಯಾವುದೇ ಪಕ್ಷದ ಚಿಹ್ನೆಯಡಿ ಆಯ್ಕೆಯಾದವರಲ್ಲ ಸ್ವತಂತ್ರರು ಎಂದು ಬೀಗುತ್ತಿದ್ದಾರೆ.

ಅಲ್ಲದೆ, ಪಕ್ಷದ ಸಭೆ ಸಮಾವೇಶಗಳಿಗೆ ತೆರಳದೆ ತಮ್ಮ ಬೆಂಬಲಿಗರನ್ನೋ ಸಂಬಂಧಿಕರನ್ನೋ ಕಳುಹಿಸಿ ನುಣುಚಿಕೊಳ್ಳುತ್ತಿದ್ದಾರೆ.
ಕಳೆದ ಬಾರಿ ಪರಿಷತ್ ಚುನಾವಣೆ ಸಂದರ್ಭದಲ್ಲಿ 20ರಿಂದ 50 ಸಾವಿರ ರೂ.ವರೆಗೆ ಸದಸ್ಯರಿಗೆ ಹಣ ಕೊಟ್ಟು ಮತ ಪಡೆಯಲಾಗಿತ್ತು. ಈಗ ಅದು ಎರಡರಷ್ಟಾಗುವ ಸಾಧ್ಯತೆ ಇದೆ. ಮತವೊಂದಕ್ಕೆ 1 ರಿಂದ 2 ಲಕ್ಷ ರೂ.ವರೆಗೆ ಸಿಗಲಿದೆ. ಹಾಗಾಗಿ ಸದಸ್ಯರುಗಳು ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದ್ದಾರೆ. ಕೆಲವು ಪಕ್ಷ ನಿಷ್ಠರು ಮಾತ್ರ ಪಕ್ಷದ ಪರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ.

ಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟ ಅಭ್ಯರ್ಥಿಗಳು ಎಲ್ಲಾ ಗ್ರಾಪಂ ಸದಸ್ಯರನ್ನು ಖುದ್ದು ಭೇಟಿ ಮಾಡಿ ಹಣದ ಆಮಿಷ ಒಡ್ಡುವಲ್ಲಿ ಪೈಪೋಟಿಗೆ ಬಿದ್ದಿದ್ದಾರೆ.

ಈಬಾರಿ ಪರಿಷತ್ ಚುನಾವಣೆಯಲ್ಲಿ ಬಿಬಿಎಂಪಿ, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಸದಸ್ಯರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಅವಧಿ ಮುಗಿದಿರುವುದರಿಂದ ಈ ಸದಸ್ಯರ ಹೆಸರುಗಳನ್ನು ಚುನಾವಣಾ ಆಯೋಗ ಮತದಾರರ ಪಟ್ಟಿಯಿಂದ ಕೈಬಿಟ್ಟಿದೆ. ಗ್ರಾಮ ಪಂಚಾಯ್ತಿ, ಪಟ್ಟಣ ಪಂಚಾಯ್ತಿ, ಪುರಸಭೆ, ಮಹಾನಗರ ಪಾಲಿಕೆ ಸದಸ್ಯರಿಗೆ ಮತದಾನದ ಹಕ್ಕು ಇದೆ. ಹಾಗಾಗಿ ರಾಜಕೀಯ ಪಕ್ಷಗಳು ಗ್ರಾಪಂ ಸದಸ್ಯರ ಕಡೆ ಮುಖ ಮಾಡಿದ್ದಾರೆ.

47,205 ಪುರುಷರು, 51,854 ಮಹಿಳೆಯರು ಹಾಗೂ ಇತರೆ ಮೂವರು ಸೇರಿ ಒಟ್ಟು 99062 ಮಂದಿ ಹಕ್ಕು ಚಲಾಯಿಸುವ ಅರ್ಹತೆ ಪಡೆದಿದ್ದು, ಇದಕ್ಕಾಗಿ 6,072 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಈಗಾಗಲೇ ಎಲ್ಲಾ ಮತಗಟ್ಟೆಗಳಿಗೆ ಬೂತ್ ಏಜೆಂಟ್‍ಗಳನ್ನು ರಾಜಕೀಯ ಪಕ್ಷಗಳ ಮುಖಂಡರು ನೇಮಕ ಮಾಡಲು ಮುಂದಾಗಿದ್ದಾರೆ. ಹಣದ ಆಮಿಷಗಳ ನಡುವೆ ಮತದಾರರನ್ನು ಕೊನೆಯ ಕ್ಷಣಗಳವರೆಗೆ ಹಿಡಿದಿಟ್ಟುಕೊಳ್ಳುವುದೇ ಹರ ಸಾಹಸವಾಗಿದೆ.

ರಾಜ್ಯದ 31 ಜಿಲ್ಲಾ ಪಂಚಾಯ್ತಿ ಹಾಗೂ 233 ತಾಲೂಕು ಪಂಚಾಯ್ತಿಗಳ ಚುನಾಯಿತ ಸದಸ್ಯರ ಅವ ಮುಗಿದಿದೆ. ಹೀಗಾಗಿ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿಯಲ್ಲಿ ಸಧ್ಯ ಮತದಾರರು ಇಲ್ಲ. 2016ರ ಸಾರ್ವತ್ರಿಕ ಚುನಾವಣೆಯಲ್ಲಿ 1083 ಜಿಪಂ ಹಾಗೂ 3884 ತಾಪಂ ಸೇರಿ ಒಟ್ಟು 4967 ಸದಸ್ಯರು ಗೆಲುವು ಸಾಸಿದ್ದರು. ಈ ಬಾರಿಯ ವಿಧಾನ ಪರಿಷತ್ ಚುನಾವಣೆಗೆ ಜಿಪಂ, ತಾಪಂನ ಒಟ್ಟು 4967 ಮತಗಳು ಲಭ್ಯವಾಗುವುದಿಲ್ಲ. 273 ನಗರ ಸ್ತಳೀಯ ಸಂಸ್ಥೆಗಳ ಪೈಕಿ 56ಕ್ಕೂ ಹೆಚ್ಚು ಕಡೆ ಚುನಾವಣೆ ನಡೆಯಬೇಕಾಗಿರುವುದರಿಂದ 1100ಕ್ಕೂ ಹೆಚ್ಚು ಮತಗಳು ಸಿಗುವುದಿಲ್ಲ. ಜೊತೆಗೆ ಬಿಬಿಎಂಪಿಯ 198 ವಾಡ್ ಸದಸ್ಯರ ಮತಗಳು ಇಲ್ಲ.

ಹೀಗಾಗಿ 6000 ಸಾವಿರಕ್ಕೂ ಹೆಚ್ಚು ಮತಗಳ ಕೊರತೆಯನ್ನು ಗ್ರಾಪಂ, ನಗರ ಸ್ಥಳೀಯ ಸಂಸ್ಥೆಗಳಿಂದ ಸರಿ ದೂಗಿಸಿಕೊಳ್ಳುವ ಅನಿವಾರ್ಯತೆಯಲ್ಲಿ ಮೂರೂ ಪಕ್ಷಗಳು ಸಿಲುಕಿವೆ. ಕಳೆದ ಬಾರಿ ಹೆಚ್ಚು ಸದಸ್ಯರನ್ನು ಹೊಂದಿದ್ದ ಕರಾವಳಿಯಲ್ಲಿ ಬಿಜೆಪಿಗೆ ಉತ್ತರ ಕರ್ನಾಟಕದ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಹಳೇ ಮೈಸೂರು ಭಾಗದ ಜೆಡಿಎಸ್‍ಗೆ ಈ ಬಾರಿ ಮತಗಳ ಹಾನಿ ಆಗಲಿದೆ. ಹಾಗಾಗಿ ಇದನ್ನು ಸರಿದೂಗಿಸಿಕೊಳ್ಳಲು ಗ್ರಾಮ ಪಂಚಾಯ್ತಿ ಸದಸ್ಯರನ್ನೇ ನೆಚ್ಚಿಕೊಂಡಿದ್ದು, ಮೂರೂ ಪಕ್ಷಗಳು ಗ್ರಾಪಂಗಳ ಸದಸ್ಯರ ಮನವೊಲಿಕೆಗೆ ತೀವ್ರ ಕಸರತ್ತು ನಡೆಸಿವೆ.

ಜೆಡಿಎಸ್ ಸ್ರ್ಪಸಿರುವ ಮೈಸೂರು, ಮಂಡ್ಯ, ಹಾಸನ, ತುಮಕೂರು, ಬೆಂಗಳೂರು, ಗ್ರಾಮಾಂತರ ಕೋಲಾರ ಜಿಲ್ಲೆಯಲ್ಲಿ ಭಾರೀ ಪ್ರಚಾರ ನಡೆಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ ನೇತೃತ್ವದಲ್ಲಿ ಶಾಸಕರು ಸಚಿವರು ಬಿಜೆಪಿ ಪದಾಕಾರಿಗಳ ತಂಡ ರಚಿಸಿಕೊಂಡು ರಾಜಜ್ಯಾದ್ಯಂತ ಪ್ರಚಾರ ಕೈಗೊಂಡಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನಿತರ ಮುಖಂಡರೊಂದಿಗೆ ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ.

ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಪರಸ್ಪರ ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದ್ದು, ರಾಜಕೀಯ ಕೆಸರೆರಚಾಟ ಮುಗಿಲು ಮುಟ್ಟಿದೆ. ಡಿ.10ರಂದು ಚುನಾವಣೆ ನಡೆಯಲಿದ್ದು, ಮತದಾರ ಯಾರ ಕೈ ಹಿಡಿಯಲಿದ್ದಾನೆ ಎಂದು ಡಿ.14ರ ಫಲಿತಾಂಶದಲ್ಲಿ ಪ್ರಕಟವಾಗಲಿದೆ.

Facebook Comments