ಮೇಲ್ಮನೆ ಆಯ್ಕೆಗೆ ತೆರೆಮರೆಯಲ್ಲಿ ಮಂದುವರೆದ ಕಸರತ್ತು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.30- ಕೋವಿಡ್ ಹೊಡೆತಕ್ಕೆ ರಾಜ್ಯ ರಾಜಕೀಯದ ಚಟುವಟಿಗಳು ಸ್ತಬ್ಧವಾಗಿದ್ದರೂ ತೆರೆಮರೆಯಲ್ಲಿ ಕಸರತ್ತು ಮಂದುವರೆದಿದೆ. ರಾಜ್ಯಸಭೆ ಹಾಗೂ ವಿಧಾನಪರಿಷತ್‍ನ ದ್ವೈವಾರ್ಷಿಕ ಚುನಾವಣೆ ಸಂದರ್ಭದಲ್ಲಿ ಗರಿಗೆದರಿದ್ದ ರಾಜಕೀಯ ಚಟುವಟಿಕೆಗಳಿಗೆ ಅಲ್ಪ ವಿರಾಮ ನೀಡಲಾಗಿದೆ.

ಹಾಗಾಗಿಯೇ ವಿಧಾನಪರಿಷತ್‍ನ ಐದು ಸದಸ್ಯರ ನಾಮನಿರ್ದೇಶನ ವಿಳಂಬವಾಗುವ ಲಕ್ಷ್ಮಣಗಳು ಗೋಚರಿಸುತ್ತಿವೆ. ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ನಾಮ ನಿರ್ದೇಶನ ಪ್ರಕ್ರಿಯೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸದ್ಯಕ್ಕೆ ಚಾಲನೆ ನೀಡದಿರಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ವಂಚಿತರಾದ ಕೆಲ ಪ್ರಮುಖ ಮುಖಂಡರು ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿ ಅವಕಾಶ ಸಿಗುತ್ತದೆಂಬ ವಿಶ್ವಾಸದಲ್ಲಿ ತೆರೆಮರೆಯಲ್ಲೇ ಕಸರತ್ತು ನಡೆಸುತ್ತಿದ್ದಾರೆ.

ಇನ್ನು ಹಿರಿಯ ನಾಯಕ ಹೆಚ್.ವಿಶ್ವನಾಥ್, ಸಿ.ಪಿ.ಯೋಗೇಶ್ವರ್, ನಿರ್ಮಲಕುಮಾರ್ ಸುರಾನ, ಭಾರತಿ ಶೆಟ್ಟಿ, ನಟ ಮತ್ತು ರಾಜಕಾರಣಿ ಜಗ್ಗೇಶ್, ನಟಿ ಶೃತಿ, ಮಾಳವಿಕಾ ಅವಿನಾಶ್ ಮತ್ತಿತರರು ಮೇಲ್ಮನೆ ಪ್ರವೇಶಿಸುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.

ಬಿಜೆಪಿ ವರಿಷ್ಠರು ಗ್ರೀನ್ ಸಿಗ್ನಲ್ ನೀಡಿದ ನಂತರವಷ್ಟೇ ರಾಜ್ಯ ನಾಯಕರು ನಾಮನಿರ್ದೇಶನ ಕಾರ್ಯಕ್ಕೆ ಚಾಲನೆ ನೀಡುತ್ತಾರೆ. ನುಡಿದಂತೆ ನಡೆದ ಸಿಎಂ ಯಡಿಯೂರಪ್ಪ ಅವರ ಮೇಲೆ ವಿಶ್ವಾಸವಿದೆ ಎಂಬ ಮಾತುಗಳನ್ನಾಡುವ ಮೂಲಕ ಹೆಚ್.ವಿಶ್ವನಾಥ್ ಒತ್ತಡ ಹೇರಿದ್ದಾರೆ.

ಇನ್ನು ಕೆಲವರು ರಾಜ್ಯ ನಾಯಕರ ಮೂಲಕ ರಾಷ್ಟ್ರ ನಾಯಕರ ಮೇಲೆ ಒತ್ತಡ ಹಾಕಿ ಮೇಲ್ಮನೆ ಪ್ರವೇಶಿಸಲು ಕಸರತ್ತು ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ದೆಹಲಿ ವರಿಷ್ಠರು ಮಾತ್ರ ಸರ್ಕಾರಕ್ಕೆ ಯಾವುದೇ ಸಮಸ್ಯೆಯಾಗದಂತೆ ಅವರದೇ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ನಾಮನಿರ್ದೇಶನ ಮಾಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ, ಅನ್ವರ್ ಮಾಣಿಪ್ಪಾಡಿ ಸೇರಿದಂತೆ ಹಲವರ ಹೆಸರುಗಳು ಕೇಳಿಬರುತ್ತಿವೆ.  ವಿಧಾನಪರಿಷತ್ ನಾಮನಿರ್ದೇಶನ ಪ್ರಕ್ರಿಯೆಗೆ ಜುಲೈನಲ್ಲಿ ಚಾಲನೆ ಸಿಗುವ ಸಾಧ್ಯತೆಯಿದ್ದು, ದೆಹಲಿ ಹಾಗೂ ರಾಜ್ಯ ನಾಯಕರ ನಡೆ ಏನೆಂಬುದು ಕುತೂಹಲ ಮೂಡಿಸಿದೆ.

Facebook Comments