ಸುರೇಶ್ ಅಂಗಡಿಗೆ ನಿಧನಕ್ಕೆ ಮೇಲ್ಮನೆಯಲ್ಲಿ ಶ್ರದ್ಧಾಂಜಲಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.24- ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನಕ್ಕೆ ವಿಧಾನಪರಿಷತ್‍ನಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಅವರು ಸಂತಾಪ ನಿರ್ಣಯವನ್ನು ಮಂಡಿಸಿ, ನಿನ್ನೆ ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಅಕಾಲಿಕ ನಿಧನಕ್ಕೀಡಾದ ಸುದ್ದಿ ತಿಳಿಸಿ ವಿಷಾದಿಸಿದರು.

ಸುರೇಶ್ ಅಂಗಡಿ ಅವರ ಹುಟ್ಟು, ಬೆಳವಣಿಗೆ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು. ನಂತರ ಸಂತಾಪ ನಿರ್ಣಯದ ಮೇಲೆ ಮಾತನಾಡಿದ ಕನ್ನಡ ಮತ್ತು ಸಂಸ್ಕøತಿ ಸಚಿವ ಸಿ.ಟಿ.ರವಿ ಅವರು, ರೈತ ಕುಟುಂಬದಿಂದ ಬಂದ ಅಂಗಡಿ ಅವರು ಸರಳ ಸಜ್ಜನ ವ್ಯಕ್ತಿಯಾಗಿದ್ದರು, ಭಾಷಾ ಸಾಮರಸ್ಯ ಕಾಪಾಡಿಕೊಳ್ಳುವಲ್ಲಿ ಅವರ ಕೊಡುಗೆ ಅಪಾರವಾದದ್ದು, ಮರಾಠಿ ಮತ್ತು ಕನ್ನಡಿಗರ ನಡುವೆ ಸೌಹಾರ್ದತೆ ಮೂಡಲು ಅಂಗಡಿ ಅವರು ಶ್ರಮಿಸಿದ್ದರು. ಸತತ ನಾಲ್ಕು ಬಾರಿ ಬೆಳಗಾವಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು ಎಂದು ಹೇಳಿದರು.

ಕೇಂದ್ರ ರೈಲ್ವೆ ಸಚಿವರಾಗಿ ಅಪಾರ ಕೊಡುಗೆ ನೀಡಿದ್ದಾರೆ. ರಾಜ್ಯದಲ್ಲಿ ಹಲವಾರು ಹೊಸ ಯೋಜನೆಗಳಿಗೆ ತಯಾರಿ ನಡೆಸಿದ್ದರು. ಬಹಳಷ್ಟು ರೈಲ್ವೆ ಮಾರ್ಗಗಳನ್ನು ಆರಂಭಿಸಿದರು. ಅವರನ್ನು ಕಳೆದುಕೊಂಡು ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.

ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಸ್ನೇಹಜೀವಿಯಾಗಿದ್ದ ಅಂಗಡಿ ಸಾವು ರಾಜ್ಯಕ್ಕಾದ ನಷ್ಟ. ಪಕ್ಷ ಯಾವುದೇ ಇದ್ದರೂ ಅಭಿವೃದ್ಧಿ ವಿಷಯದಲ್ಲಿ ಅವರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರು. ರೈಲ್ವೆ ಯೋಜನೆಗಳಲ್ಲಿ ಮಹತ್ವದ ಸಾಧನೆ ಮಾಡಲು ಅಡಿಯಿಟ್ಟಿದ್ದರು ಎಂದು ಹೇಳಿದರು.

ಕೊರೊನಾ ಸೋಂಕಿನಿಂದ ಅಂಗಡಿ ಸಾವನ್ನಪ್ಪಿರುವುದು ಭಯ ಭೀತ ವಾತಾವರಣ ನಿರ್ಮಿಸಿದೆ. ವೈಯಕ್ತಿಕವಾಗಿ ನನಗೂ ಭಯವಾಗಿದೆ. ಕೇಂದ್ರ ಸಚಿವರೇ ಸೋಂಕಿನಿಂದ ಗುಣಮುಖರಾಗಲಿಲ್ಲ ಎಂದರೆ, ಇನ್ನೂ ಜನ ಸಾಮಾನ್ಯರ ಪಾಡೇನು ಎಂದು ಆತಂಕ ವ್ಯಕ್ತ ಪಡಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಮಾತನಾಡಿ, ದೆಹಲಿಗೆ ಹೋದಾಗ ಅವರ ಆತ್ಮಿಯತೆ ಸದಾ ನನ್ನನ್ನು ಕಾಡುತ್ತದೆ. ಕರ್ನಾಟಕದಿಂದ ಹೋದವರಿಗೆ ಅವರು ಸಂಪರ್ಕದ ಕೊಂಡಿಯಾಗಿದ್ದರು ಎಂದರು.

ಸದಸ್ಯ ಅರುಣ್ ಶಹಪೂರ್ ಮಾತನಾಡುತ್ತಲೇ ಭಾವುಕರಾಗಿ ಬಿಕ್ಕಿದರು. ಬಸವರಾಜ ಹೊರಟ್ಟಿ, ತೇಜೇಶ್ವಿನಿಗೌಡ, ಭಾರತಿಶೆಟ್ಟಿ, ಮಹಾಂತೇಶ್ ನಿರಾಣಿ, ಹನುಮಂಡಪ್ಪ ನಿರಾಣಿ ಸೇರಿದಂತೆ ಅನೇಕರು ಮಾತನಾಡಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

Facebook Comments