ವಿಧಾನ ಪರಿಷತ್‍ನಲ್ಲಿ ರಾಜ್ಯ ಸರ್ಕಾರ ಸಿವಿಲ್ ಸೇವೆಗಳ ವಿಧೇಯಕ ಅಂಗೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.24- ನಿಗಮ ಮಂಡಳಿಗಳು ಸೇರಿದಂತೆ ವಿವಿಧ ಸಂಸ್ಥೆಗಳು ಮುಚ್ಚಿದಾಗ ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಅಧಿಕಾರಿಗಳನ್ನು ಇನ್ನು ಮುಂದೆ ಸರ್ಕಾರ ಇತರ ಇಲಾಖೆಗಳಿಗೆ ಸೇರ್ಪಡೆ ಮಾಡುವುದನ್ನು ನಿಷೇಧಿಸಲಾಗಿದೆ. ರಾಜ್ಯ ಸರ್ಕಾರ ಸಿವಿಲ್ ಸೇವೆಗಳ (ಸಾರ್ವಜನಿಕ ವಲಯದ ಸಂಸ್ಥೆಗಳ ನೌಕರರರ ಸೇವೆಗಳನ್ನು ಸಾರ್ವಜನಿಕ ಸೇವೆಗಳಿಗೆ ವಿಲೀನಗೊಳಿಸುವುದನ್ನು ನಿಷೇಧಿಸುವ) ವಿಧೇಯಕವನ್ನು ವಿಧಾನಸಭೆಯ ಬಳಿಕ, ವಿಧಾನ ಪರಿಷತ್‍ನಲ್ಲೂ ಅಂಗೀಕರಿಸಲಾಗಿದೆ.

ವಿಧೇಯಕವನ್ನು ಮಂಡಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಸಾರ್ವಜನಿಕ ಸಂಸ್ಥೆಗಳು, ಒಕ್ಕೂಟಗಳು ಪರಿಸಮಾಪ್ತಿಯಾಗುವ ಹಂತದಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಮತ್ತು ಅಧಿಕಾರಿಗಳು ನಮ್ಮನ್ನು ಸರ್ಕಾರಿ ನೌಕಕರೆಂದು ಪರಿಗಣಿಸುವಂತೆ ಒತ್ತಡ ತರುತ್ತಾರೆ.

ಯಾವುದೇ ತರಬೇತಿ ಇಲ್ಲದೆ ನೇರ ನೇಮಕಾತಿ ಮೂಲಕ ವಿವಿಧ ಇಲಾಖೆಗಳಿಗೆ ಸೇರ್ಪಡೆಯಾಗುವುದರಿಂದ ಆಡಳಿತದ ಗುಣಮಟ್ಟ ಹಾಳಾಗುತ್ತಿದೆ. ಆ ರೀತಿ ಬಂದವರಿಗೆ ವೇತನ ಬಾಕಿ ನೀಡಬೇಕಾಗುತ್ತದೆ. ವಯಸ್ಸಿನ ಸೇವಾಜೇಷ್ಠತೆ ನೀಡಬೇಕಾಗುತ್ತದೆ.

ತರಬೇತಿ ಇಲ್ಲದೆ ಇರುವುದರಿಂದ ಆಡಳಿತದ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಬೀರುತ್ತಿದೆ. ನೇರ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ಅನ್ಯಾಯವಾಗಲಿದೆ ಎಂದರು. ಈ ಮಸೂದೆಯನ್ನು ಸದಸ್ಯರಾದ ಮರಿತಿಬ್ಬೆಗೌಡ, ನಾರಾಯಣಸ್ವಾಮಿ ಸೇರಿದಂತೆ ಹಲವರು ವಿಧೇಯಕವನ್ನು ಸ್ವಾಗತಿಸಿದರು. ಮಸೂದೆಯನ್ನು ಧ್ವನಿಮತದ ಮೂಲಕ ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಯೋಜನಾ ಕೋಶಗಳು ಮಾತ್ರವೇ ಯೋಜನೆ ರೂಪಿಸುವ ಬದಲು ಸ್ಥಳಿಯ ಸಂಘ ಸಂಸ್ಥೆಗಳು, ಏರಿಯಾ ಕಮಿಟಿಗಳು, ವಾರ್ಡ್ ಸಮಿತಿಗಳನ್ನು ಸಂಪರ್ಕಿಸಿ ಯೋಜನೆಗಳನ್ನು ರೂಪಿಸಲು ಅನುಕೂಲವಾಗುವಂತೆ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ವಿಧಾನ ಪರಿಷತ್‍ನಲ್ಲಿ ಪಿ.ಆರ್.ರಮೇಶ್, ತಿಪ್ಪೇಸ್ವಾಮಿ, ಅರುಣ ಶಹಾಪುರ್ ಅವರು ಚರ್ಚೆಯಲ್ಲಿ ಭಾಗವಹಿಸಿದ್ದರು.

ಎಲ್ಲರನ್ನೂ ಒಳಗೊಂಡು ಸಮಿತಿಗಳನ್ನು ಮಾಡಬೇಕು, ಯೋಜನೆ ಮಾಡುವಾಗ ಸಮುದಾಯದ ಜೊತೆ ಚರ್ಚಿಸಬೇಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಿ ನಂತರ ಮಂಜೂರು ಮಾಡಬೇಕು ಎಂದು ನಿಯಮ ರೂಪಿಸಲಾಗಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು. ಸುಧೀರ್ಘ ಚರ್ಚೆಯ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು.

Facebook Comments