ನೀತಿ ಸಂಹಿತೆ ತಿದ್ದುಪಡಿಗೆ ಮೇಲ್ಮನೆಯಲ್ಲಿ ಒಕ್ಕೊರಲ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.10- ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಅಧಿಕಾರಿಗಳು ರಾಜಕೀಯ ಪಕ್ಷಗಳ ಮುಖಂಡರ ಮೇಲೆ ಹಾಕುತ್ತಿರುವ ಅತಿಯಾದ ನಿರ್ಭಂದ, ಅದರಿಂದ ಉಂಟಾಗುತ್ತಿರುವ ಪರಿಣಾಮ ಹಾಗೂ ಈ ಕಾಯ್ದೆಗೆ ತಿದ್ದುಪಡಿ ಮಾಡಬೇಕೆಂಬ ಒಕ್ಕೊರಲಿನ ಅಭಿಪ್ರಾಯ ವಿಧಾನಪರಿಷತ್‍ನಲ್ಲಿಂದು ವ್ಯಕ್ತವಾಯಿತು. ಹಾಲಿ ಇರುವ ಚುನಾವಣಾ ಕಾಯ್ದೆಗೆ ತಿದ್ದುಪಡಿ ಮಾಡುವ ಸಂಬಂಧ ವಿಧಾನಸಭೆಯ ಸ್ಪೀಕರ್, ವಿಧಾನಪರಿಷತ್‍ನ ಸಭಾಪತಿ ಹಾಗೂ ಸರ್ವಪಕ್ಷಗಳ ಸಭೆ ಕರೆದು ಈ ಸಮಸ್ಯೆ ಬಿಕ್ಕಟ್ಟಿಗೆ ತಾರ್ಕಿಕ ಅಂತ್ಯ ಕಾಣಬೇಕೆಂಬ ಅಭಿಪ್ರಾಯವನ್ನು ಪಕ್ಷ ಭೇದ ಮರೆತು ಸದಸ್ಯರು ವ್ಯಕ್ತಪಡಿಸಿದರು.

ವಿಧಾನಪರಿಷತ್‍ನಲ್ಲಿ ಸಂವಿಧಾನದ ಮೇಲಿನ ಚರ್ಚೆ ಕುರಿತಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಚರ್ಚೆಗೆ ನಾಂದಿ ಹಾಡಿದರು. ಸಂವಿಧಾನದ ಆಶಯ, ಅದರ ರಚನೆ, ಮಹತ್ವ ಹಾಗೂ ಇಂದು ಜನಪ್ರತಿನಿಧಿಗಳ ಸ್ಥಿತಿ ಮತ್ತು ನೀತಿ ಸಂಹಿತೆ ನೆಪದಲ್ಲಿ ಆಯೋಗ ಹಾಕುತ್ತಿರುವ ನಿಬಂಧನೆಗಳ ಬಗ್ಗೆ ಬೆಳಕು ಚೆಲ್ಲಿದರು. ಮಾಧುಸ್ವಾಮಿ ಅವರು ಹಾಕಿದ ಪೀಠಿಕೆಗೆ ಸುಮಾರು 30ನಿಮಿಷಗಳ ಹೆಚ್ಚು ಕಾಲ ಬಿಜೆಪಿ, ಕಾಂಗ್ರೆಸ್, ಹಾಗೂ ಜೆಡಿಎಸ್ ಸದಸ್ಯರು ತಮ್ಮ ಎಲ್ಲಾ ಭಿನ್ನಾಭಿಪ್ರಾಯ ಮರೆತು ನೀತಿ ಸಂಹಿತೆಗೆ ತಿದ್ದುಪಡಿ ಮಾಡಲೇಬೇಕೆಂಬ ಅಭಿಪ್ರಾಯವನ್ನು ಹೊರ ಹಾಕಿದರು.

ಮಾಧುಸ್ವಾಮಿ ಮಾತನಾಡುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಬಾದಾಮಿಗೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದೆ, ಅದು ನಮ್ಮ ತಾಯಿಯವರ ತವರೂರು ಹೌದು. ರಾತ್ರಿ 9 ಗಂಟೆಯಾಗಿದ್ದ ವೇಳೆ ನಾನು ಐಬಿಯಲ್ಲಿ ಕೆಲವೊತ್ತು ವಿಶ್ರಾಂತಿ ಪಡೆಯುತ್ತೇನೆಂದರೆ ಅದಕ್ಕೂ ಅವಕಾಶ ಕೊಡಲಿಲ್ಲ. ಕಡೆ ಪಕ್ಷ ಮೂತ್ರ ವಿಸರ್ಜನೆಗೂ ಅವಕಾಶ ಮಾಡಿಕೊಡಿ ಎಂದರೂ ಅಧಿಕಾರಿಗಳು ಅವಕಾಶ ಕೊಡಲಿಲ್ಲ. ಸರ್ಕಾರಿ ಶಾಲೆಗೆ ಹೋದರೆ ಅಲ್ಲಿಯೂ ಇದೆ ಸ್ಥಿತಿ. ಕೊನೆಗೆ ಸ್ನೇಹಿತನ ಮನೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು ಎಂದು ತಾವು ಎದುರಿಸಿದ ಸ್ಥಿತಿಯನ್ನು ಸದನದಲ್ಲಿ ಬಿಚ್ಚಟ್ಟರು.

ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಅಧಿಕಾರಿಗಳು ಅತಿಯದ ನಿಬಂಧನೆಗಳನ್ನು ಹಾಕುತ್ತಿದ್ದಾರೆ. ಪರಿಣಾಮ ಜನಪ್ರತಿನಿಧಿಗಳ ಸ್ಥಿತಿ ಅರೋಹರ ಎನ್ನುವಂತಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಶೆಟ್ಟರ್ ಮಾತಿಗೆ ದನಿಗೂಡಿಸಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ನೀತಿ ಸಂಹಿತೆ ನೆಪದಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಅತಿಯಾದ ನಿಬಂಧನೆಗಳನ್ನು ಹಾಕುತ್ತಿದ್ದಾರೆ. ನಾವು ದೇವಸ್ಥಾನಕ್ಕೆ ಹೋಗಿ ಹುಂಡಿಗೆ 5ರೂ. ಕಾಣಿಕೆ ಹಾಕದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲದಕ್ಕೂ ನೀತಿ ಸಂಹಿತೆ ಎಂದು ಹೇಳುತ್ತಾರೆ. ಇತ್ತೀಚೆಗೆ ನಡೆದ ಉಪ ಚುನಾವಣೆ ಬಗ್ಗೆ ಕೇಳಲೇ ಬೇಡಿ ಎಂದು ಹೇಳಿದರು.

ಮಾತು ಮುಂದುವರೆಸಿದ ಮಾಧುಸ್ವಾಮಿ, ನನ್ನನ್ನು ಮಂಡ್ಯ ಜಿಲ್ಲೆ ಮದ್ದೂರಿನ ಶಾಲೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಬೇಕೆಂದು ಹಿರಿಯ ರಾಜಕಾರಣಿಯಾಗಿರುವ ಮಾದೇಗೌಡರು ಆಹ್ವಾನಿಸಿದ್ದರು. ಅಂದು ಕೆ.ಆರ್.ಪೇಟೆಯಲ್ಲಿ ಉಪ ಚುನಾವಣೆ ನಡೆಯುತ್ತಿತ್ತು. ನಾನು ಮಂಡ್ಯ ಜಿಲ್ಲೆಯ ಗಡಿ ಭಾಗಕ್ಕೆ ತೆರಳುತ್ತಿದ್ದಂತೆ ಅಧಿಕಾರಿಗಳು ಸರ್ಕಾರಿ ವಾಹನಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಸ್ವತ ಕಾರಿನಲ್ಲಿ ಹೊರಟರೆ ಅಲ್ಲಿಯೂ ಕೂಡ ತಪಾಸಣೆ ಮಾಡಿದರು. ಚುನಾವಣೆ ನಡೆಯುವುದು ಕೆ.ಆರ್.ಪೇಟೆಯಲ್ಲಿ ಇಡೀ ಜಿಲ್ಲೆಗೆ ನೀತಿ ಸಂಹಿತೆ ಅಳವಡಿಸಿದರೆ ಹೇಗೆ ? ಇದಕ್ಕು ಒಂದು ಇತಿಮಿತಿ ಇರಬೇಕಲ್ಲವೇ ಎಂದು ಪ್ರಶ್ನಿಸಿದರು.

ನಾನು ಆ ವೇಳೆ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು ಕೆಲವು ನಿಬಂಧನೆಗಳನ್ನು ಸಡಿಲಿಸಬೇಕೆಂದು ಮನವಿ ಮಾಡಿಕೊಂಡಿದ್ದೆ. ಬೆಂಗಳೂರಿನಲ್ಲಿ ಚುನಾವಣೆ ನಡೆದರೆ ಆಯಾ ಕ್ಷೇತ್ರಗಳಿಗೆ ಮಾತ್ರ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಬೇರೆ ಕ್ಷೇತ್ರಗಳಿಗಾದರೆ ಇಡೀ ಜಿಲ್ಲೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ನಿಯಮಗಳ ಪ್ರಕಾರ ಚುನಾವಣೆ ಘೋಷಣೆಯಾದಾಗ ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಬಾರದು. ಇದರಿಂದ ಮತದಾರರ ಮೇಲೆ ಪ್ರಭಾವ ಬೀರುತ್ತದೆ ಎಂಬ ಕಾರಣಕ್ಕೆ ಈ ಕ್ರಮಗಳನ್ನು ಅನುಸರಿಸುತ್ತೇವೆ ಎಂದು ಹೇಳಿದರು.

ಈ ವೇಳೆ ಕಾಂಗ್ರೆಸ್‍ನ ಸಿ.ಎಂ.ಇಬ್ರಾಹಿಂ ಅವರು, ಬದಾಮಿ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದ್ದಾಗ ನಾನು ಪ್ರಚಾರಕ್ಕೆ ತೆರಳಿದ್ದೆ. ಆ ವೇಳೆ ನನಗೂ ಕೂಡ ಅಧಿಕಾರಿಗಳು ಅತಿಯಾದ ನಿರ್ಬಂಧಗಳನ್ನು ಹಾಕಿದರು. ಎಲ್ಲೇ ಹೋದರು ನನ್ನ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಬಟ್ಟೆ ಬಿಚ್ಚುವುದನ್ನು ಬಿಟ್ಟರೆ ಉಳಿದೆಲ್ಲವನ್ನು ಮಾಡಿದರು ಎಂದು ಹಾಸ್ಯ ಚಟಾಕಿ ಹಾರಿಸಿದರು.

ನಾಲ್ಕು ವರ್ಷ 9 ತಿಂಗಳು ನಾವು ಅಧಿಕಾರ ಚಲಾಯಿಸಿರುತ್ತೇವೆ. ಅವರು ಒಂದೇ ತಿಂಗಳಿನಲ್ಲಿ ಕೊಡಬಾರದಕಷ್ಟಗಳನ್ನು ಕಟ್ಟು ಅಷ್ಟು ದಿನಗಳ ಸಿಟ್ಟನ್ನು ತೀರಿಸಿಕೊಳ್ಳುತ್ತಾರೆ ಎಂದರು.ಜೆಡಿಎಸ್‍ನ ತಿಪ್ಪೇಸ್ವಾಮಿ, ಜನಪ್ರತಿನಿಧಿಗಳ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ನೀತಿ ಸಂಹಿತೆಯನ್ನು ಸಡಿಲಿಕೆ ಮಾಡಬಹುದು. ಈ ಬಗ್ಗೆ ಸದನದಲ್ಲಿ ನಿರ್ಣಯ ಕೈಗೊಳ್ಳುವಂತೆ ಸಲಹೆ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜೆಟ್ಟರ್, ಕೇವಲ ಚರ್ಚೆ ಮಾಡುವುದರಿಂದ ಸಮಸ್ಯೆ ಇತ್ಯರ್ಥವಾಗುವುದಿಲ್ಲ. ಈ ಉಬಯ ಸದನಗಳಲ್ಲಿ ನಿರ್ಣಯ ಕೈಗೊಳ್ಳೋಣ, ಸಭಾಧ್ಯಕ್ಷರು, ಸಭಾಪತಿಯವರು ಹಾಗೂ ಸರ್ವಪಕ್ಷಗಳ ನಿಯೋಗ ಕರೆದು ಒಂದು ತೀರ್ಮಾನ ಕೈಗೊಳ್ಳಣ. ಎಲ್ಲ ಪಕ್ಷಗಳ ಪ್ರಮುಖರ ಸಭೆ ಕರೆಯೋಣ ಅಲ್ಲಿ ವ್ಯಕ್ತವಾಗುವ ಅಭಿಪ್ರಾಯವನ್ನು ಆಯೋಗಕ್ಕೆ ತಿಳಿಸೋಣ ಎಂದರು. ಇದಕ್ಕೂ ಮುನ್ನ ಚರ್ಚೆ ಆರಂಭಿಸಿದ ಮಾಧುಸ್ವಾಮಿ, ಸಂವಿಧಾನದ ಆಶಯದ ಮೇಲೆ ಮಾತನಾಡಿದರು. ಸಂವಿಧಾನದ ರಚನೆ, ಮಹತ್ವ, ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಗಳ ಮಹತ್ವವನ್ನು ಎಳೆ ಎಳೆಯಲ್ಲಿ ಸದನದಲ್ಲಿ ಬಿಚ್ಚಟ್ಟರು.

Facebook Comments