ಮೇಲ್ಮನೆಯಲ್ಲಿ ಅಸ್ಪೃಶ್ಯತೆ ಕುರಿತ ಬಿಸಿ ಬಿಸಿ ಚರ್ಚೆ, ಮಾತಿನ ಚಕಮಕಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.16- ಸಮಾಜದಲ್ಲಿ ಈಗಲೂ ಅಸ್ಪೃಶ್ಯತೆ ಜೀವಂತವಾಗಿರುವುದು ಹಾಗೂ ದಲಿತರಿಗೆ ದೇವಾಲಯಗಳಿಗೆ ಪ್ರವೇಶ ಇಲ್ಲದಿರುವ ಬಗ್ಗೆ ವಿಧಾನಪರಿಷತ್‍ನಲ್ಲಿಂದು ಬಿಸಿ ಬಿಸಿ ಚರ್ಚೆ ನಡೆದು ಆಡಳಿತ ಮತ್ತು ಪ್ರತಿ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿಗೂ ಕಾರಣವಾಯಿತು. ಸಂವಿಧಾನದ ಮಹತ್ವ ಕುರಿತಂತೆ ಮುಂದುವರೆದ ಚರ್ಚೆಯಲ್ಲಿ ಕಾಂಗ್ರೆಸ್ ಆರ್.ಬಿ.ತಿಮ್ಮಾಪುರ ಅವರು ಬಿಜೆಪಿಯವರು ಈಗಲೂ ದಲಿತರನ್ನು ಅಸ್ಪೃಶ್ಯರಂತೆ ಕಾಣುತ್ತಾರೆ.

ಅವರಿಗೆ ಈಗಲೂ ಇದೇ ವ್ಯವಸ್ಥೆ ಮುಂದುವರೆಯಬೇಕೆಂಬ ಆಶಯವಿದೆ. ಶ್ರೇಣಿಕೃತ ಸಮಾಜವನ್ನೇ ಬಯಸುವ ಅವರು ಹಿಂದು ಸಮಾಜ ನಿರ್ಮಾಣ ಮಾಡುತ್ತೇನೆ ಎಂದು ಹೇಳುತ್ತಾರೆ. ವಾಸ್ತವದಲ್ಲಿ ಹಿಂದು ದೇವಾಲಯಗಳಿಗೆ ನಾಯಿಗಳನ್ನಾದರು ಬಿಡು ತ್ತಾರೆ. ಆದರೆ, ದಲಿತರನ್ನು ಮಾತ್ರ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಆಡಳಿತ ಪಕ್ಷದ ನಾಯಕ ಹಾಗೂ ಸಚಿವ ಕೋಟಾ ಶ್ರೀನಿವಾಸಪೂಜಾರಿ, ಎಲ್ಲಿ ಅಸ್ಪೃಶ್ಯ ಜೀವಂತ ವಾಗಿದೆ ಹೇಳಿ.

ಒಂದು ವೇಳೆ ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ಮಾಡಲು ನಿರ್ಬಂಧ ಹಾಕಿದರೆ ಅಂತಹವರ ವಿರುದ್ಧ ನಾವು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಸುಖಾ ಸುಮ್ಮನೆ ಆಧಾರ ರಹಿತವಾಗಿ ಮಾತನಾಡಬೇಡಿ ಎಂದು ತಿರುಗೇಟು ನೀಡಿದರು. ಮಾತು ಮುಂದುವರೆಸಿದ ತಿಮ್ಮಾಪುರ, ಈಗಲೇ ಅನೇಕ ಕಡೆ ಅಸ್ಪೃಶ್ಯತೆ ಜೀವಂತವಾಗಿದೆ. ಶತ ಶತಮಾನಗಳಿಂದಲೂ ಈ ಕೆಟ್ಟ ಸಂಪ್ರದಾಯವನ್ನು ಈಗಲೂ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ದಲಿತರು ಅಸ್ಪೃಶ್ಯರಾಗಿಯೇ ಉಳಿಯಬೇಕು. ಇದು ಬಿಜೆಪಿಯ ಹುನ್ನಾರ ಎಂದು ಆರೋಪಿಸಿದರು.

ಇದಕ್ಕೆ ತಿರುಗೇಟು ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಬಿಜೆಪಿಯವರು ಅದೇಗೇ ದಲಿತರ ವಿರೋಧಿಗಳಾಗುತ್ತಾರೆ ? ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಕಾಂಗ್ರೆಸಿಗರು ಭಾರತ ರತ್ನ ಕೊಡಲು ಸಾಧ್ಯವಾಗಲಿಲ್ಲ , ಪಂಡಿತ್ ಜವಹರಲಾಲ್ ನೆಹರು ಹಾಗೂ ಅವರ ಪುತ್ರಿ ಇಂದಿರಾಗಾಂಧಿ ಅವರು ಭಾರತರತ್ನ ತೆಗೆದುಕೊಂಡರು. ಅಂಬೇಡ್ಕರ್ ಅವರಿಗೆ ಕೊಡಲು ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು.

ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಟ್ಟಿದ್ದು, ಮಾಜಿ ಪ್ರಧಾನಿ ದಿವಂಗತ ಅಟಲ್‍ಬಿಹಾರಿ ವಾಜಪೇಯಿ ಅವರು. ಹಿಂದುಳಿದ ವರ್ಗದ ಜಾತಿಗೆ ಸೇರಿದವರು ಈ ದೇಶದಲ್ಲಿ ಪ್ರಧಾನಿಯಾಗಿದ್ದರೆ, ಹಿಂದುಳಿದ ಸಮುದಾಯಕ್ಕೆ ಸೇರಿದವರೊಬ್ಬರು ಈಗ ಪ್ರಧಾನಿಯಾಗಿರುವುದು ಹಾಗೂ ಮುಸ್ಲಿಂ ಸಮುದಾಯಕ್ಕೆ ಸೇರಿದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿದ್ದು ಬಿಜೆಪಿ ಅಧಿಕಾರದಲ್ಲಿದ್ದ ಕಾರಣಕ್ಕೆ. ಬಾಬು ಜಗಜೀವನರಾಮ್ ಅವರನ್ನು ಪ್ರಧಾನಮಂತ್ರಿ ಮಾಡಲಿಲ್ಲ. ಇದು ಕಾಂಗ್ರೆಸ್‍ನ ಸಂಸ್ಕøತಿ ಎಂದು ವಾಗ್ದಾಳಿ ನಡೆಸಿದರು.

ಈ ಹಂತದಲ್ಲಿ ಬಿಜೆಪಿಯ ಪ್ರಾಣೇಶ್ ಅವರು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದಲಿತರು ನೆನಪಾಗುವುದಿಲ್ಲ. ಅವರನ್ನು ವೋಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡಿದ್ದರಿಂದಲೇ ತಿರುಗಿ ಬಿದಿದ್ದಾರೆ. ಈಗಲಾದರೂ ಅವರ ಬಗ್ಗೆ ಜ್ಞಾನೋದಯವಾಗಿರುವುದು ಸಂತೋಷ ಎಂದು ವ್ಯಂಗ್ಯವಾಡಿದರು. ಬಿಜೆಪಿಯ ರವಿಕುಮಾರ್ ಅಂಬೇಡ್ಕರ್ ತೀರಿಕೊಂಡಾಗ ದೆಹಲಿಯಲ್ಲಿ ಅಂತ್ಯಸಂಸ್ಕಾರ ನಡೆಸಲು ಕಾಂಗ್ರೆಸಿಗರು ಬಿಡಲಿಲ್ಲ. ಕಡೆ ಪಕ್ಷ ಮುಂಬೈಗೆ ತರಲು ವಿಮಾನ ಪ್ರಯಾಣದ ವೆಚ್ಚವನ್ನೂ ಕೊಡಲಿಲ್ಲ. ಇದು ನಿಮ್ಮ ಇಬ್ಬಗೆಯ ನೀತಿ ಎಂದು ವಾಗ್ದಾಳಿ ನಡೆಸಿದರು.

ಮಾತು ಮುಂದುವರೆಸಿದ ತಿಮ್ಮಾಪುರ, 12ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಬಸವಣ್ಣನವರು ಪ್ರಯತ್ನ ಪಟ್ಟರು. ಈಗಲೂ ಅನೇಕ ಕಡೆ ಮಠಗಳಿದ್ದಾವೆ. ದಲಿತರಿಗೆ ಪ್ರವೇಶವಿಲ್ಲದ ಮಠಗಳು ಇದ್ದರೇನು, ಬಿಟ್ಟರೇನು ಎಂದು ಪ್ರಶ್ನಿಸಿದರು. ಇದಕ್ಕೆ ಆಕ್ಷೇಪಿಸಿದ ಬಿಜೆಪಿ ಆಯನೂರು ಮಂಜುನಾಥ್, ಮಠಗಳು ಅನಾಧಿಕಾಲದಿಂದಲೇ ತಮ್ಮದೇ ಆದ ಸಮಾಜ ಸೇವೆ ಮಾಡುತ್ತಾ ಬಂದಿವೆ.

ಅನೇಕ ಮಠಗಳಲ್ಲಿ ಜಾತಿ, ಧರ್ಮ ಯಾವುದನ್ನೂ ನೋಡದೆ ಅನ್ನದಾಸೋಹ ಮಾಡುತ್ತಿವೆ. ನೀವು ಎರಡು ಬಾರಿ ಸಚಿವರಾಗಿ ಅನೇಕ ಹುದ್ದೆಗಳನ್ನು ನಿಭಾಯಿಸಿದ್ದೀರಿ. ದಲಿತರ ಉದ್ದಾರಕ್ಕಾಗಿ ಮಾಡಿರುವ ನಾಲ್ಕು ಕೆಲಸಗಳನ್ನು ಹೇಳಿ ಬಿಡಿ ಎಂದು ಸವಾಲು ಹಾಕಿದರು.

ನಾನು ಸಮಾಜದ ಬದಲಾವಣೆಗಾಗಿ ಪ್ರಯತ್ನ ಪಟ್ಟಿದ್ದರಿಂದಲೇ ವಿಧಾನಸಭೆ ಚುನಾವಣೆಯಲ್ಲಿ ಮೂರು ಬಾರಿ ಸೋತಿದ್ದೇನೆ. ನಿಮ್ಮ ಮನಸ್ಥಿತಿಗಳು ಬದಲಾಗದಿದ್ದರೆ ಸಮಾಜ ಹೇಗೆ ಬದಲಾವಣೆಯಾಗಲು ಸಾಧ್ಯ ಎಂದು ತಿಮ್ಮಾಪುರ ಮರು ಪ್ರಶ್ನೆ ಹಾಕಿದರು.

Facebook Comments