ಪರಿಷತ್ ಚುನಾವಣೆಗೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.16- ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬಂಡವಾಳಶಾಹಿಗಳಿಗೆ ಮಣೆ ಹಾಕಬೇಡಿ ಎಂದು ಆಕಾಂಕ್ಷಿಗಳು ಒತ್ತಡ ಹೇರಿದ್ದಾರೆ. ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಇಂದು ಬೆಳಗ್ಗೆಯಿಂದ ಕಾಂಗ್ರೆಸ್ ಪಾಳೆಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆದವು.

ಆಕಾಂಕ್ಷಿಗಳಾದ ಎಚ್.ಎಂ.ರೇವಣ್ಣ, ಎಂ.ಆರ್. ಸೀತಾರಾಮï, ಎಂ.ಡಿ. ಲಕ್ಷ್ಮೀನಾರಾಯಣ, ನಾಗರಾಜ್ ಯಾದವ್, ನಜೀರ್ ಅಹಮ್ಮದ್ ಸೇರಿದಂತೆ ಹಲವಾರು ಮಂದಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವಾರು ನಾಯಕರನ್ನು ಭೇಟಿ ಮಾಡಿದ್ದಾರೆ.

ಆಕಾಂಕ್ಷಿಗಳು ಪ್ರಮುಖವಾಗಿ ಪ್ರಸ್ತಾಪಿಸಿರುವುದು ವಿಧಾನ ಪರಿಷತ್ ಸ್ಥಾನವನ್ನು ಬಂಡವಾಳಶಾಹಿಗಳಿಗೆ ಮಾರಾಟ ಮಾಡಬೇಡಿ. ಪಕ್ಷದಲ್ಲಿ ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡಿದ ಕಾರ್ಯಕರ್ತರನ್ನು ಗುರುತಿಸಿ ಅವಕಾಶ ನೀಡಿ. ಒಂದು ವೇಳೆ ಹಣ ಇದ್ದವರಿಗೆ ಮಣೆ ಹಾಕಿದರೆ. ತಪ್ಪು ಸಂದೇಶ ರವಾನೆಯಾಗಲಿದೆ ಎಂದು ಎಚ್ಚರಿಸಿದ್ದಾರೆ.

ಮೂಲಗಳ ಪ್ರಕಾರ, ಕೆಪಿಸಿಸಿ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದು, ಸುಮಾರು 40 ಕೋಟಿ ಸಾಲ ಇದೆ. ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಸಾಲ ಕೊಟ್ಟ ನಾಯಕರು ವಿಧಾನ ಪರಿಷತ್ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಕಾಂಗ್ರೆಸ್ ವರಿಷ್ಠರು ಬಂಡವಾಳ ಶಾಹಿಗಳಿಗೆ ಮಣೆ ಹಾಕಬಹುದು ಎಂಬ ಆತಂಕ ಆಕಾಂಕ್ಷಿಗಳನ್ನು ಕಾಡುತ್ತಿದೆ.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಅವರು, ಕಾಂಗ್ರೆಸ್‍ನಲ್ಲಿ ಕೆಲ ವದಂತಿಗಳು ಕೇಳಿಬರುತ್ತಿವೆ. ಹಣ ಇರುವವರಿಗೆ ವಿಧಾನಪರಿಷತ್ ಟಿಕೆಟ್ ನೀಡಲಾಗುತ್ತದೆ ಎಂಬ ಗುಸುಗುಸು ನಡೆಯುತ್ತಿದೆ. ಕಾಂಗ್ರೆಸ್ ಅತ್ಯಂತ ಹಳೆಯ ಪಕ್ಷ. ವಿಧಾನ ಪರಿಷತ್ ಸ್ಥಾನಗಳನ್ನು ಹರಾಜಗೀಡಬಾರದು ಪಕ್ಷ ನಿಷ್ಠರನ್ನು ಗುರುತಿಸಿ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ನಾಗರಾಜ್ ಯಾದವ್ ಮಾತನಾಡಿ, ಜತಿ ಮೀರಿ ಪಕ್ಷ ನಿಷ್ಠೆ ಉಳ್ಳವರಿಗೆ, ಕಾಂಗ್ರೆಸ್ ಸಿದ್ಧಾಂತಗಳನ್ನು ಆಧರಿಸಿ ಪಕ್ಷ ಕಟ್ಟುತ್ತಿರುವವರಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು. ಯಾವುದೇ ಕಾರಣಕ್ಕೂ ಬಂಡವಾಳಶಾಹಿಗಳಿಗೆ ಮಣೆ ಹಾಕಬಾರದು ಎಂದು ಅವರು ಒತ್ತಾಯಿಸಿದರು.

ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ವಿದ್ಯಾರ್ಥಿ ನಾಯಕನಾಗಿದ್ದಾಗಿನಿಂದಲೂ ನಾನು ಕಾಂಗ್ರೆಸ್ ನಿಷ್ಠನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ ಚುನಾವಣೆಯಲ್ಲಿ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಕ್ಕೆ ಯಾವ ಪೂರ್ವ ತಯಾರಿ ಇಲ್ಲದೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾ. ಆಗ ಮಾತುಕೊಟ್ಟಂತೆ ಈಗ ವಿಧಾನ ಪರಿಷತ್ ಚುನಾವಣೆಯಲ್ಲಿ ಅವಕಾಶ ಕೊಡಿ ಎಂದು ಮನವಿ ಮಾಡಿದ್ದೇನೆ ಎಂದರು.

ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ್ ಮಾತನಾಡಿ, ಪ್ರಾಮಾಣಿಕವಾಗಿ ದುಡಿದ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಬೇಕು. ಪಕ್ಷದಲ್ಲಿ ಅನೇಕ ವಿಷಯ ಚರ್ಚೆಯಾಗುತ್ತಿವೆ. ಕಾಂಗ್ರೆಸ್ ವಿಧಾನ ಪರಿಷತ್ ಸ್ಥಾನಗಳನ್ನು ಹರಾಜು ಹಾಕುವ ಸ್ಥಿತಿಗೆ ಹೋಗಬಾರದು. ಬಂಡವಾಳ ಶಾಹಿಗಳಿಗೆ ಮಣೆ ಹಾಕಬಾರದು. ಕಾರ್ಯಕರ್ತರಿಗೆ ಅವಕಾಶ ಸಿಗಬೇಕು ಎಂದು ಹೇಳಿದರು.

Facebook Comments