ಸ್ವಚ್ಛತೆ ಹೆಸರಿನಲ್ಲಿ ಖಾಲಿಯಾಗ್ತಿದೆ ಸರ್ಕಾರದ ಖಜಾನೆ.,!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.4- ಸ್ವಚ್ಛ ಪರಿಸರ, ಸ್ವಸ್ಥ ಆರೋಗ್ಯ ಎಂಬ ಮಾತನ್ನು ರಾಜ್ಯ ಸರ್ಕಾರ ಶಿರಸಾ ಪಾಲಿಸುವಂತೆ ಕಾಣುತ್ತಿದೆ. ಆದರೆ, ಸ್ವಚ್ಛತೆ ಹೆಸರಿನಲ್ಲಿ ಲಕ್ಷ ಲಕ್ಷ ಖರ್ಚು ಮಾಡುತ್ತಿರುವುದಂತೂ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ, ಸರ್ಕಾರದ ಹಣ ಹೇಳುವವರಿಲ್ಲ, ಕೇಳುವವರಿಲ್ಲ ಎಂಬುದು ನೂರಕ್ಕೆ ನೂರರಷ್ಟು ಸತ್ಯ ಎಂಬಂತೆ ಇಲ್ಲಿ ಕಾಣುತ್ತಿದೆ.

ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಗೋಡೆ ಮತ್ತು ಕಾರಿಡಾರ್ ಸ್ವಚ್ಛಗೊಳಿಸಲು ಸರ್ಕಾರ ಮಾಡುತ್ತಿರುವ ಖರ್ಚು ಕನಿಷ್ಠ 59 ಲಕ್ಷ ರೂ. ಅದು ಕೂಡ ಕೇವಲ 7 ತಿಂಗಳಿಗೆ. ಈ ಅವಧಿ ಮುಗಿದ ಬಳಿಕ ಹೊಸ ಟೆಂಡರ್ ಕರೆಯಲಾಗುತ್ತದೆ.

ಕೊರೊನಾ ಸಮಯದಲ್ಲಿ ಸರ್ಕಾರ ಹಣದ ಕೊರತೆ ಎದುರಿಸುತ್ತಿರುವಾಗ, ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮೀನಾಮೇಷ ಎಣಿಸುತ್ತಿರುವಾಗ, ಸರ್ಕಾರಿ ನೌಕರರಿಗೆ ಸರಿಯಾಗಿ ವೇತನ ನೀಡಲು ಸಾಧ್ಯವಿಲ್ಲದಿರುವಾಗ ಇಷ್ಟೊಂದು ಖರ್ಚು ಕೇವಲ ಸ್ವಚ್ಛ ಮಾಡುವುದಕ್ಕೆ ಬೇಕಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಉದ್ಭವಿಸುತ್ತದೆ.

ವಿಧಾನಸೌಧದ ಲೋಕೋಪಯೋಗಿ ಇಲಾಖೆ ಖಾಸಗಿ ಸಂಸ್ಥೆಗಳಿಂದ ಏಳು ತಿಂಗಳಿಗೆ 59 ಲಕ್ಷ ರೂ.ನಂತೆ ಕಳೆದ ತಿಂಗಳು ಟೆಂಡರ್ ಕರೆದಿದೆ. ಅದರರ್ಥ ಸರ್ಕಾರ ಪ್ರತಿ ತಿಂಗಳು ಕೇವಲ ಕಾರಿಡಾರ್ ಮತ್ತು ಗೋಡೆ ಸ್ವಚ್ಛಗೊಳಿಸಲು ತಿಂಗಳಿಗೆ 8 ಲಕ್ಷ ರೂ. ಖರ್ಚು ಮಾಡುತ್ತದೆ. ಇನ್ನು ಹೌಸ್ ಕೀಪಿಂಗ್ ಸಿಬ್ಬಂದಿ ಮತ್ತು ಇತರ ಸಾಮಾನ್ಯ ನಿರ್ವಹಣೆಗೆ ಮಾಡುವ ಖರ್ಚು ಬೇರೆಯೇ ಇದೆ.

ವಿಧಾನಸೌಧವೆಂದರೆ ಮುಖ್ಯಮಂತ್ರಿ, ಸಚಿವರು, ಶಾಸಕರು, ಅಧಿಕಾರಿಗಳು ಕೆಲಸ ಮಾಡುವ ಸ್ಥಳ. ಇಲ್ಲಿ ಒಟ್ಟಾರೆ 370 ಕೊಠಡಿಗಳು ಮತ್ತು 14 ಶೌಚಾಲಯಗಳು ಇದೆ. ಕಲ್ಲುಗಳನ್ನು ಬಳಸಿ ಕಟ್ಟಿದ ಮಹಲು ವಿಧಾನಸೌಧ. ವಾಟರ್ ಜೆಟ್ ಕ್ಲೀನಿಂಗ್ ಮಾಡಿದರೆ ಸಾಕಾಗುತ್ತದೆ.

ವಿಧಾನಸೌಧ, ವಿಕಾಸಸೌಧ ಮತ್ತು ಎಂಎಸ್ ಬಿಲ್ಡಿಂಗ್ ನಲ್ಲಿ 1200 ಖಾಲಿ ಹುದ್ದೆಗಳಿವೆ. ಅದನ್ನು ಭರ್ತಿಗೊಳಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಉದ್ಯೋಗಿಗಳ ಕೊರತೆಯಿಂದಾಗಿ ಈಗಿರುವ ನೌಕರರ ಮೇಲೆ ಕೆಲಸದ ಹೊರೆ ಹೆಚ್ಚಾಗಿದೆ. ಸರ್ಕಾರವನ್ನು ಕೇಳಿದರೆ ಹಣಕಾಸಿನ ಕೊರತೆಯಿದೆ ಎನ್ನುತ್ತಾರೆ. ಹೀಗಿರುವಾಗ ಗೋಡೆ, ಕಾರಿಡಾರ್ ಸ್ವಚ್ಛ ಮಾಡಲು ಇಷ್ಟೊಂದು ಹಣ ಬೇಕೆ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣೆಗಳ ವಿಭಾಗದ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಕಸ ಗುಡಿಸುವವರ ಹುದ್ದೆಗೆ ಅನುಮೋದನೆಗೊಂಡದ್ದು 84 ಹುದ್ದೆಗಳು. ಆದರೆ, ವರ್ಷಗಳು ಕಳೆದಂತೆ ಹಲವರು ನಿವೃತ್ತಿಯಾಗಿದ್ದು ನಂತರ ನೇಮಕಾತಿ ನಡೆದಿಲ್ಲ.

ವಿಧಾನಸೌಧದ 14 ಶೌಚಾಲಯಗಳನ್ನು ಸ್ವಚ್ಛ ಮಾಡಲು 14 ಹೊರಗುತ್ತಿಗೆ ಸಿಬ್ಬಂದಿ ಇರುತ್ತಾರೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ. ಹೀಗಿರುವಾಗ ಕೇವಲ ಸ್ವಚ್ಛತೆಗೆ ಇಷ್ಟೊಂದು ಹಣದ ಅಗತ್ಯವಿತ್ತೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ.

Facebook Comments