ವಿಧಾನಸೌಧದ ಸಿಬ್ಬಂದಿಗಳಿಗೆ ಕೊರೊನಾ ಆತಂಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.7-ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೂ ಕೊರೊನಾ ಮಹಾಮಾರಿ ಒಕ್ಕರಿಸಿದ್ದು, ಇಲ್ಲಿನ ಸಿಬ್ಬಂದಿಗಳಿಗೆ ಆತಂಕ ಎದುರಾಗಿದೆ.  ಕಳೆದ 10 ದಿನಗಳ ಅವಧಿಯಲ್ಲಿ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿರುವ ಮೂವರು ಸಚಿವರ ಕಚೇರಿಯಲ್ಲಿನ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮೂವರು ಸಚಿವರ ಕಚೇರಿಗಳನ್ನು ತಾತ್ಕಾಲಿಕವಾಗಿ ಸೀಲ್‍ಡೌನ್ ಮಾಡಲಾಗಿದ್ದು, ಒಂದು ವಾರಗಳ ಕಾಲ ಸಿಬ್ಬಂದಿ ಕಚೇರಿಗೆ ಬಾರದಂತೆ ಸೂಚನೆ ಕೊಡಲಾಗಿದೆ.

ಇದೀಗ ಸಚಿವರ ಕಚೇರಿಗಳನ್ನೇ ಸೀಲ್‍ಡೌನ್ ಮಾಡಿರುವುದರಿಂದ ಅಕ್ಕಪಕ್ಕದಲ್ಲಿರುವ ಸಿಬ್ಬಂದಿಗಳಿಗೂ ಕೊರೊನಾ ಭೀತಿ ಕಾಡುತ್ತಿದೆ. ಹೆಸರು ಹೇಳಲು ಇಚ್ಛಿಸದ ಸಚಿವರ ಆಪ್ತರೊಬ್ಬರು ಇದನ್ನು ಬಹಿರಂಗಪಡಿಸಿದ್ದಾರೆ. ಒಂದು ವಾರ ಕಾಲ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿದ್ದು, ಸದ್ಯಕ್ಕೆ ಎಲ್ಲ ಸಿಬ್ಬಂದಿಗಳು ಹೋಮ್ ಕ್ವಾರಂಟೈನ್‍ನಲ್ಲಿ ಇರುವಂತೆ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ(ಡಿಪಿಎಆರ್) ಸೂಚನೆ ನೀಡಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ವಿಧಾನಸೌಧ ಮತ್ತು ವಿಕಾಸ ಸೌಧಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಚಿವರು ಹಾಗೂ ಅಧಿಕಾರಿಗಳನ್ನು ಭೇಟಿಯಾಗಲು ಕೆಲಸದ ನಿಮಿತ್ತ ಆಗಮಿಸುತ್ತಾರೆ. ಯಾರನ್ನೂ ಕೂಡ ಪರೀಕ್ಷೆಗೊಳಪಡಿಸದೆ ನೇರವಾಗಿ ಒಳಬಿಡುವುದರಿಂದ ನಮಗೂ ಕೂಡ ಆತಂಕವಾಗುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕಳೆದ 15 ದಿನಗಳಿಂದ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿದಿನ 3ರಿಂದ 4 ಸಾವಿರ ಪ್ರಕರಣಗಳು ದಾಖಲಾಗುತ್ತಿರುವುದು ಸಾರ್ವಜನಿಕರಲ್ಲೂ ಸಹ ಆತಂಕ ಸೃಷ್ಟಿಸಿದೆ.

Facebook Comments