ವಿಧಾನ ಪರಿಷತ್ ನ ಒಂದು ಸ್ಥಾನಕ್ಕೆ ಜೆಡಿಎಸ್‍ನಲ್ಲಿ ಹಲವರ ಪೈಪೋಟಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.10- ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‍ನ ಏಳು ಸದಸ್ಯ ಸ್ಥಾನಗಳಿಗೆ ನಡೆಯುವ ದ್ವೈ ವಾರ್ಷಿಕ ಚುನಾವಣೆಗೆ ಅಧಿಸೂಚನೆ ಹೊರಬಿದ್ದಿರುವ ಬೆನ್ನಲ್ಲೇ ಜೆಡಿಎಸ್‍ನಲ್ಲೇ ಆಕಾಂಕ್ಷಿಗಳಿಂದ ಪಕ್ಷದ ನಾಯಕರ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಯುತ್ತಿದೆ.

ಜೆಡಿಎಸ್‍ನಲ್ಲಿ ಹಲವು ಮಂದಿ ಆಕಾಂಕ್ಷಿಗಳಿದ್ದು, ಇನ್ನೂ ಯಾವುದೇ ತೀರ್ಮಾನವನ್ನು ವರಿಷ್ಠರು ತೆಗೆದುಕೊಂಡಿಲ್ಲ. ವಿಧಾನಸಭೆಯಲ್ಲಿ ಶಾಸಕರನ್ನು ಹೊಂದಿರುವ ಆಧಾರದ ಮೇಲೆ ಜೆಡಿಎಸ್ ಒಂದು ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದಾಗಿದೆ.

ಒಂದು ಸ್ಥಾನಕ್ಕೆ ಸುಮಾರು 10ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.  ಜೆಡಿಎಸ್‍ನಲ್ಲಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಮಾಜಿ ಶಾಸಕ ಕೋನರೆಡ್ಡಿ, ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಸಿ.ರಾಜಣ್ಣ, ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್ ಸೇರಿದಂತೆ ಹಲವರು ಆಕಾಂಕ್ಷಿಗಳಾಗಿದ್ದಾರೆ.

ಶರವಣ ಜೂ.30ರಂದು ವಿಧಾನ ಪರಿಷತ್ ಸದಸ್ಯ ಸ್ಥಾನದಿಂದ ನಿವೃತ್ತಿಯಾಗಲಿದ್ದಾರೆ. ಮತ್ತೊಂದು ಅವಧಿಗೆ ಅವಕಾಶ ನೀಡುವಂತೆ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ. ಮಾಜಿ ಶಾಸಕ ಕೋನರೆಡ್ಡಿ ಅವರು ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಲು ತಮಗೆ ಅವಕಾಶ ಮಾಡಿಕೊಡಬೇಕೆಂದು ಕೋರಿದ್ದಾರೆ. ರಾಜ್ಯಸಭೆಗೆ ಈ ಬಾರಿ ಸ್ಪರ್ಧೆ ಮಾಡದಿರುವ ಕುಪೇಂದ್ರರೆಡ್ಡಿ ಅವರ ಹೆಸರು ಕೂಡ ವಿಧಾನ ಪರಿಷತ್ ಚುನಾವಣೆ ಆಕಾಂಕ್ಷಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.

ಆರ್.ಪ್ರಕಾಶ್ ಅವರು ಕೂಡ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸುವ ಪ್ರಬಲ ಆಕಾಂಕ್ಷಿಯಾಗಿದ್ದಾರೆ.  ಕಳೆದ ವಿಧಾನಸಭೆ ಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲೂ ಅವಕಾಶ ಸಿಗಲಿಲ್ಲ ಎಂಬ ಅಸಮಾಧಾನವೂ ಅವರಲ್ಲಿದೆ. ಇದುವರೆಗೂ ವಿಧಾನ ಪರಿಷತ್‍ಗೆ ಅಭ್ಯರ್ಥಿ ಆಯ್ಕೆ ಕುರಿತಂತೆ ಜೆಡಿಎಸ್‍ನಲ್ಲಿ ಯಾವುದೇ ನಿರ್ಧಾರವಾಗಿಲ್ಲ.

ರಾಜ್ಯಸಭೆ ಚುನಾವಣೆ ಮುಗಿದ ಬಳಿಕ ವಿಧಾನ ಪರಿಷತ್‍ಗೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ತಿಳಿಸಿದರು.ಹಲವು ಮಂದಿ ವಿಧಾನ ಪರಿಷತ್ ಚುನಾವಣೆಗೆ ಪ್ರಬಲ ಆಕಾಂಕ್ಷಿಗಳಿದ್ದಾರೆ. ಈ ಬಗ್ಗೆ ಇದುವರೆಗೂ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಜಾತಿವಾರು, ಪ್ರದೇಶವಾರು ಆದ್ಯತೆಯನ್ನು ಆಯ್ಕೆ ಸಂದರ್ಭದಲ್ಲಿ ಪರಿಗಣಿಸಬೇಕಾಗುತ್ತದೆ ಎಂದು ಹೇಳಿದರು.

ಸೋಮವಾರದೊಳಗೆ ಬಹುತೇಕ ಅಭ್ಯರ್ಥಿ ಆಯ್ಕೆ ಅಂತಿಮಗೊಳ್ಳುವ ಸಾಧ್ಯತೆಯಿದೆ. ನಾಮಪತ್ರ ಸಲ್ಲಿಸಲು ಜೂ.18ರ ವರೆಗೂ ಅವಕಾಶವಿರುವುದರಿಂದ ಅಭ್ಯರ್ಥಿ ಆಯ್ಕೆಗೆ ತರಾತುರಿ ಮಾಡುತ್ತಿಲ್ಲ ಎಂದರು.

Facebook Comments