ಅತಂತ್ರ ಶಾಸಕರಿಂದ ಪರಿಷತ್‍ ಪಟ್ಟಕ್ಕೆ ಪಟ್ಟು, ಸಿಎಂಗೆ ಮತ್ತೊಂದು ತಲೆನೋವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.12-ಒಂದೆಡೆ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡವರು ಮೇಲ್ಮನೆ ಪ್ರವೇಶಿಸಲು ಸತತ ಪ್ರಯತ್ನ ನಡೆಸುತ್ತಿದ್ದರೆ, ಮತ್ತೊಂದೆಡೆ ಶಾಸಕ ಸ್ಥಾನ ತ್ಯಾಗ ಮಾಡಿರುವ ತ್ರಿಮೂರ್ತಿಗಳು ರಂಗಪ್ರವೇಶ ಮಾಡಿದ್ದಾರೆ.

ನ್ಯಾಯಾಲಯದ ತಡೆಯಾಜ್ಞೆಯಿಂದಾಗಿ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗದೆ ಅತಂತ್ರವಾಗಿರುವ ಮಾಜಿ ಶಾಸಕರಾದ ಮುನಿರತ್ನ ನಾಯ್ಡು, ಪ್ರತಾಪ್ ಗೌಡ ಪಾಟೀಲ್ ಹಾಗೂ ರೋಷನ್‍ಬೇಗ್ ಕೂಡ ವಿಧಾನಪರಿಷತ್‍ಗೆ ತಮ್ಮನ್ನು ಆಯ್ಕೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ.

ಇದರಿಂದಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮತ್ತೊಂದು ತಲೆನೋವು ಎದುರಾಗಿದೆ. ಈಗಾಗಲೇ ಉಪಚುನಾವಣೆಯಲ್ಲಿ ಪರಾಭವಗೊಂಡಿದ್ದ ಎಂ.ಟಿ.ಬಿ.ನಾಗರಾಜ್, ಎಚ್.ವಿಶ್ವನಾಥ್, ಚುನಾವಣೆಯಲ್ಲಿ ಸ್ಪರ್ಧೆ ಮಾಡದೇ ಇದ್ದ ಆರ್.ಶಂಕರ್ ಕೂಡ ಈಗಾಗಲೇ ಭೇಡಿಕೆಯನ್ನು ಸಿಎಂ ಬಳಿ ಇಟ್ಟಿದ್ದಾರೆ.

ಇದರ ನಡುವೆ ಮುನಿರತ್ನ ನಾಯ್ಡು, ಪ್ರತಾಪ್‍ಗೌಡ ಪಾಟೀಲ್ ಹಾಗೂ ರೋಷನ್ ಬೇಗ್ ಆಕಾಂಕ್ಷಿಯಾಗಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.  ಸಮ್ಮಿಶ್ರ ಸರ್ಕಾರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಈ ಮೂವರನ್ನು ಅಂದಿನ ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್‍ಕುಮಾರ್ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರು.

ಉಪಚುನಾವಣೆ ದಿನಾಂಕ ಘೋಷಣೆಯಾದಾಗ ನ್ಯಾಯಾಲಯದ ತಡೆಯಾಜ್ಞೆ ಇದ್ದ ಕಾರಣ ಬೆಂಗಳೂರಿನ ಆರ್‍ಆರ್‍ನಗರ ಹಾಗೂ ರಾಯಚೂರಿನ ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕವನ್ನು ಘೋಷಣೆ ಮಾಡಿರಲಿಲ್ಲ.

ಕೆಲವು ರಾಜಕೀಯ ಕಾರಣಗಳಿಂದಾಗಿ ಶಿವಾಜಿನಗರದಿಂದ ರೋಷನ್ ಬೇಗ್ ಉಪಚುನಾವಣೆಯಲ್ಲಿ ಸ್ರ್ಪಸಲು ಹಿಂದೇಟು ಹಾಕಿದರು. ಈಗ ಸಿಎಂ ಬಿಎಸ್‍ವೈ ಅವರನ್ನು ಭೇಟಿಯಾಗಿ ಮೇಲ್ಮನೆಗಾದರೂ ಅವಕಾಶ ನೀಡಬೇಕೆಂದು ಒತ್ತಡ ಹಾಕಿದ್ದಾರೆ.
ಆರ್‍ಆರ್‍ನಗರ ಮತ್ತು ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿಗಳೇ ಹೈಕೋರ್ಟ್‍ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ಇತ್ಯರ್ಥವಾಗಲು ವಿಳಂಬವಾಗುತ್ತಿರುವುದರಿಂದ ತಮ್ಮ ರಾಜಕೀಯ ಭವಿಷ್ಯ ಎಲ್ಲಿ ಮುಗಿದುಹೋಗುತ್ತದೆಯೋ ಎಂಬ ಆತಂಕ ಕಾಡುತ್ತಿದೆ. ಅಲ್ಲದೆ ಜೊತೆಗಿದ್ದ ಅವರ ಆಪ್ತರು ಇಂದು ಸಚಿವರಾಗಿ ಗೂಟದ ಕಾರಿನಲ್ಲಿ ಓಡಾಡುತ್ತಿರುವುದು ಕೂಡ ಕಣ್ಣು ಕೆಂಪಾಗುವಂತೆ ಮಾಡಿದೆ. ಹೀಗಾಗಿಯೇ ಮೇಲ್ಮನೆಗೆ ಪರಿಗಣಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ನ್ಯಾಯಾಲಯ ನಾಳೆ ಅರ್ಜಿ ಇತ್ಯರ್ಥಗೊಳಿಸಿ ಉಪಚುನಾವಣೆಗೆ ದಿನಾಂಕ ಘೋಷಣೆ ಮಾಡಿದರೆ ನಾವು ಮೇಲ್ಮನೆಗೆ ರಾಜೀನಾಮೆ ಕೊಡಲು ಸಿದ್ದರಿದ್ದೇವೆ. ಒಂದು ಕಡೆ ನ್ಯಾಯಾಲಯದಲ್ಲಿ ತಕರಾರು ಅರ್ಜಿಯು ಇತ್ಯರ್ಥವಾಗುತ್ತಿಲ್ಲ. ಉಪಚುನಾವಣೆ ದಿನಾಂಕವು ನಿಗದಿಯಾಗುತ್ತಿಲ್ಲ. ಇದ್ದ ಶಾಸಕ ಸ್ಥಾನ ಕಳೆದುಕೊಂಡು ನಾವು ಬೀದಿಗೆಬಿದ್ದಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.

ಚುನಾವಣಾ ಆಯೋಗವೇನಾದರೂ ದಿನಾಂಕವನ್ನು ಘೋಷಿಸಿದರೆ ನಾವು ಮೇಲ್ಮನೆಗೆ ರಾಜೀನಾಮೆ ಕೊಟ್ಟು ಉಪಚುನಾವಣೆಗೆ ಸ್ರ್ಪಸುತ್ತೇವೆ. ಮೊದಲು ಪರಿಷತ್‍ಗೆ ಆಯ್ಕೆ ಮಾಡಿ ಎಂಬ ಮನವಿಯನ್ನು ಮುಂದಿಟ್ಟಿದ್ದಾರೆ.

ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರಿಂದಲೇ ಬಿಜೆಪಿ ಅಕಾರಕ್ಕೆ ಬಂದಿತ್ತು. ಇಂದು ಯಾರ್ಯಾರೊ ಅಕಾರ ಅನುಭವಿಸುತ್ತಿದ್ದಾರೆ. ನಾವು ಶಾಸಕ ಸ್ಥಾನ ಕಳೆದುಕೊಂಡು ನೋಡುವವರ ಮುಂದೆ ನಗೆಪಾಟಲಿಗೆ ಬಿದ್ದಂತಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ಮುಖಂಡರು ನಮ್ಮ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಬೇಕೆಂದು ಮೂವರು ತಮ್ಮ ಆಪ್ತರ ಬಳಿ ನೋವು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದೇ 29ರಂದು ವಿಧಾನಪರಿಷತ್‍ನ ಏಳು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ವಿಧಾನಸಭೆಯ ಬಲಾಬಲದಲ್ಲಿ ಆಡಳಿತಾರೂಢ ಬಿಜೆಪಿ 4, ಕಾಂಗ್ರೆಸ್ 2 ಹಾಗೂ ಜೆಡಿಎಸ್ ಒಂದು ಸ್ಥಾನ ಪಡೆಯಲಿದೆ.

ದಕ್ಕುವ ನಾಲ್ಕು ಸ್ಥಾನಕ್ಕೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ಈಗಾಗಲೇ 100 ದಾಟಿದೆ. ರಾಜ್ಯಸಭೆ ಚುನಾವಣೆಯಲ್ಲಿ ವರಿಷ್ಠರು ಹೇಗೆ ಸಾಮಾನ್ಯ ಕಾರ್ಯಕರ್ತರಿಗೆ ಮಣೆ ಹಾಕಿದರೋ ಅದೇ ರೀತಿ ಇಲ್ಲಿಯೂ ಇದೇ ಮಾದರಿಯನ್ನು ಅನುಸರಿಸಬಹುದೆಂಬ ಆತಂಕವೂ ಎಲ್ಲರನ್ನು ಕಾಡುತ್ತಿದೆ.

Facebook Comments

Sri Raghav

Admin