ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್, ಹೆಚ್.ವಿಶ್ವನಾಥ್‌ಗೆ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ವಿಧಾನಸಭೆಯಿಂದ ವಿಧಾನಪರಿಷತ್ ಗೆ ನಡೆಯಲಿರುವ ಚುನಾವಣೆಗೆ ಆಡಳಿತಾರೂಢ ಬಿಜೆಪಿ ತನ್ನ ನಾಲ್ವರು ಅಭ್ಯರ್ಥಿಗಳ ಪಟ್ಟಿಯನ್ನು ತಡರಾತ್ರಿ ಬಿಡುಗಡೆ ಮಾಡಿದೆ. ಮಾಜಿ ಸಚಿವರಾದ ಎಂಟಿಬಿ ನಾಗರಾಜ್, ಆರ್. ಶಂಕರ್, ಸುನೀಲ್ ವಲ್ಯಾಪುರೆ ಹಾಗೂ ಸಂಘ ಪರಿವಾರ ಹಿನ್ನೆಲೆಯ  ಪ್ರತಾಪ್​ ಸಿಂಹ ನಾಯಕ್ ಗೆ ಟಿಕೆಟ್ ನೀಡಲಾಗಿದೆ.

ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರಿಗೆ ಅಚ್ಚರಿ ಎಂಬಂತೆ ಟಿಕೆಟ್ ಕೈ ತಪ್ಪಿದೆ.ಈ ಮೂಲಕ ಎಚ್ ವಿಶ್ವನಾಥ್ ಅವರ ಎಂಎಲ್ ಸಿ ಕನಸು ಭಗ್ನಗೊಂಡಿದೆ. ಈ ನಾಲ್ವರು ಇಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.ಬಹುತೇಕ ಕೋರ್ ಕಮಿಟಿ ಶಿಫಾರಸ್ಸಿಗೆ ಹೈಕಮಾಂಡ್ ಅಸ್ತು ಎಂದಿರುವುದು
ಮಹತ್ವದ್ದಾಗಿದೆ.

ವಿಧಾನ ಪರಿಷತ್ ಟಿಕೆಟ್‌ಗೆ ತೀವ್ರ ಪ್ರಯತ್ನ ನಡೆಸಿದ್ದ ವಿಶ್ವನಾಥ್ ಅವರ ಹೆಸರನ್ನು ಹೈಕಮಾಂಡ್ ಪರಿಗಣಿಸಿಲ್ಲ. ಹೀಗಾಗಿ ಅದು ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರದ ಮೇಲೆ ಪರಿಣಾಮ ಬೀರಿದರೂ ಅಚ್ಚರಿಯಿಲ್ಲ.

ರಾಜ್ಯಸಭಾ ಚುನಾವಣೆಯಂತೆ ಪಕ್ಷದ ವರಿಷ್ಟರು ಅಚ್ಚರಿ ಅಭ್ಯರ್ಥಿಗಳಿಗೆ ಮಣೆ ಹಾಕಿಲ್ಲ.ಈ ಬಾರಿ ಕೋರ್ ಕಮಿಟಿ ಸಭೆಯಲ್ಲಿ ಶಿಪಾರಸ್ಸು ಮಾಡಲಾಗಿದ್ದ ಪಟ್ಟಿಗೆ ಅಸ್ತು ಎಂದಿರುವುದು ವಿಶೇಷ. ಜೊತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಟ್ಡು ಹಿಡಿದು ತಮ್ಮ ಬೆಂಬಲಿಗರಾದ ನಾಲ್ವರಲ್ಲಿ ಮೂವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಾಲ್ಕು‌ ಸ್ಥಾನಗಳಲ್ಲಿ ಮೂರು ಸ್ಥಾನ ಕೋರ್ ಕಮಿಟಿ‌ ಶಿಫಾರಸ್ಸು ಮಾಡಿದಂತೆ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್ ಒಂದು ಸ್ಥಾನವನ್ನು ಮಾತ್ರ ತನ್ನ ವಿವೇಚನೆಯಂತೆ ಅಚ್ಚರಿ ರೀತಿಯಲ್ಲಿ ಪ್ರತಾಪ್ ಸಿಂಹ ನಾಯಕ್​ಗೆ ನೀಡಿದೆ.

ಚಿಂಚೋಳಿ ಉಪ ಚುನಾವಣೆ ವೇಳೆ ಅವಿನಾಶ್ ಜಾಧವ್ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದ ಸುನೀಲ್ ವಲ್ಯಾಪುರೆ, ಎಂಟಿಬಿ ನಾಗರಾಜ್ ಮತ್ತು ಆರ್ ಶಂಕರ್ ಅವರಿಗೆ ಪರಿಷತ್ ಸ್ಥಾನ ನೀಡುವುದಾಗಿ ಸಿಎಂ ಯಡಿಯೂರಪ್ಪ ಅವರು ಭರವಸೆ ನೀಡಿದ್ದರು. ಅದರಂತೆ ಈಗ ಮಾತು ಉಳಿಸಿಕೊಳ್ಳುವಂತೆ ಬಿಎಸ್ ವೈ ಯಶಸ್ವಿಯಾಗಿದ್ದಾರೆ.

# ವಿಶ್ವನಾಥ್‌ಗೆ ಶಾಕ್..!
ಉಪ ಚುನಾವಣೆಯಲ್ಲಿ ಸೋತ ಪರಿಣಾಮ ರಾಜ್ಯ ಸರ್ಕಾರದಲ್ಲಿ ಯಾವುದೇ ಮಹತ್ವದ ಹುದ್ದೆ ಸಿಗದೆ ಮೂಲೆ ಗುಂಪಾಗಿದ್ದ ಎಚ್. ವಿಶ್ವನಾಥ್, ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಸಚಿವರಾಗುವ ಕನಸು ಕಾಣುತ್ತಿದ್ದರು.

ಅಂದಿನ ಸಿಎಂ ಕುಮಾರಸ್ವಾಮಿ ಸಾರಥ್ಯದ ದೋಸ್ತಿ ಸರ್ಕಾರಕ್ಕೆ ಕೈಕೊಟ್ಟ ಅತೃಪ್ತರ ಪೈಕಿ, ವಿಶ್ವನಾಥ್‌ ಹೆಸರು ಮುಂಚೂಣಿಯಲ್ಲಿತ್ತು. ಆದ್ರೆ, ಉಪ ಚುನಾವಣೆಯಲ್ಲಿ ಸೋತ ಕಾರಣ, ವಿಶ್ವನಾಥ್‌ ಭಾರೀ ಹಿನ್ನಡೆ ಅನುಭವಿಸಿದ್ದರು.

ವಿಧಾನ ಪರಿಷತ್‌ ಚುನಾವಣೆಯಲ್ಲಿ ವಿಶ್ವನಾಥ್‌ ಅವರಿಗೆ ಟಿಕೆಟ್‌ ಕೊಡಿಸುವ ಸಲುವಾಗಿ ಸಚಿವ ನಾರಾಯಣ ಗೌಡ, ಗೋಪಾಲಯ್ಯ ಆದಿಯಾಗಿ ಹಲವರು ಪ್ರಯತ್ನಪಟ್ಟಿದ್ದರು. ವಿಶ್ವನಾಥ್ ಅವರಿಗೆ ಟಿಕೆಟ್‌ ಸಿಗೋದು ಖಚಿತ ಎಂದೇ ಹೇಳುತ್ತಿದ್ದರು. ಇತ್ತೀಚೆಗೆ ಸಚಿವ ನಾರಾಯಣಗೌಡ, ಸಂಸದ ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿಯಾಗಿದ್ದ ವೇಳೆಯಲ್ಲೂ ಇದೇ ಚರ್ಚೆಯಾಗಿತ್ತು.

ಯಡಿಯೂರಪ್ಪ ಕೊಟ್ಟ ಮಾತು ತಪ್ಪೋದಿಲ್ಲ, ವಿಶ್ವನಾಥ್‌ ಅವರಿಗೆ ಟಿಕೆಟ್‌ ಸಿಕ್ಕೇ ಸಿಗುತ್ತೆ ಎಂದು ಶ್ರೀನಿವಾಸ್‌ ಪ್ರಸಾದ್‌ ಕೂಡಾ ಅಭಯ ನೀಡಿದ್ದರು. ಆದ್ರೆ, ಹಳ್ಳಿ ಹಕ್ಕಿ ಎಚ್‌ ವಿಶ್ವನಾಥ್‌ಗೆ ಪರಿಷತ್‌ ಚುನಾವಣೆಯ ಟಿಕೆಟ್‌ ಕೈತಪ್ಪಿದೆ.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿದ್ದು, ಮಹತ್ವದ ಹುದ್ದೆಗಳನ್ನು ಪಡೆದು ಕೊನೆಗೆ ಬಿಜೆಪಿ ಸೇರಿದ್ದ ವಿಶ್ವನಾಥ್‌ ಅವರಿಗೆ ಇದೇ ಕೊನೆಯ ಅವಕಾಶ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿತ್ತು. ಆದ್ರೆ, ಈ ಅವಕಾಶವೂ ಅವರ ಕೈತಪ್ಪಿದಂತಾಗಿದೆ.

ದೋಸ್ತಿ ಸರ್ಕಾರ ಉರುಳಿದ ಸಂದರ್ಭದಲ್ಲಿ ವಿಶ್ವನಾಥ್‌ ವಿರುದ್ಧ ಕೆಂಡಾಮಂಡಲರಾಗಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್‌ ನಾಯಕರಿಗೆ ಇದೀಗ ಅವರನ್ನು ಕೆಣಕಲು ಸದವಕಾಶವೊಂದು ಸಿಕ್ಕಿದಂತಾಗಿದೆ..!
ವಿಧಾನಸಭೆ ಸದಸ್ಯರು ವಿಧಾನ ಪರಿಷತ್‌ಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಈ ಚುನಾವಣೆಯಲ್ಲಿ, ವಿಶ್ವನಾಥ್‌ಗೆ ಟಿಕೆಟ್‌ ಕೈತಪ್ಪಿದೆ.

ಅನರ್ಹರಾಗಿದ್ದ ವಿಶ್ವನಾಥ್, ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಸರ್ಕಾರದಲ್ಲಿ ಮಹತ್ವದ ಸ್ಥಾನ ಪಡೆಯಲು ಚುನಾವಣೆಯಲ್ಲಿ ಗೆಲ್ಲಲೇ ಬೇಕಿದೆ. ಒಂದು ವೇಳೆ ವಿಧಾನ ಪರಿಷತ್‌ಗೆ ವಿಶ್ವನಾಥ್‌ ಅವರನ್ನು ನಾಮ ನಿರ್ದೇಶನ ಮಾಡಿದರೂ ಕೂಡಾ ಸರ್ಕಾರದಲ್ಲಿ ಮಹತ್ವದ ಹುದ್ದೆ ಸಿಗೋದಿಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ.

ಎಂಟಿಬಿ ನಾಗರಾಜ್, ಆರ್ ಶಂಕರ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು. ಇನ್ನು ಸುನಿಲ್ ವಲ್ಯಾಪುರೆ ಕೂಡ ಈ ಹಿಂದೆ
2008 ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದ ವೇಳೆ ಸಚಿವರಾಗಿದ್ದರು. ಬಿಎಸ್ ವೈ ಬಿಜೆಪಿ ತೊರೆದು ಕೆಜೆಪಿ ಕಟ್ಡಿದ ವೇಳೆ  ಚಿಂಚೋಳಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಪರಭಾವಗೊಂಡಿದ್ದರು.

2018 ರ ಚುನಾವಣೆಯಲ್ಲೂ ಪುನಃ ಬಿಜೆಪಿಯಿಂದ ಸ್ಪರ್ಧೆಸಿ ಇಂದಿನ ಕಲಬುರಗಿ ಲೋಕಸಭಾ ಕ್ಷೇತ್ರದ ಸಂಸದ ಡಾ. ಉಮೇಶ್ ಜಾಧವ್ ಎದುರು ಸೋತಿದ್ದರು.

2019 ರ ಮೇ ನಲ್ಲಿ ನಡೆದ ಚಿಂಚೋಳಿ ಉಪಚುನಾವಣೆಯಲ್ಲಿ ಜಾಧವ್ ಪುತ್ರ ಅವರನ್ನು ಬೆಂಬಲಿಸಬೇಕೆಂದು ಪಕ್ಷ ಸೂಚಿಸಿತ್ತು.ಕ್ಷೇತ್ರವನ್ನು ತ್ಯಾಗ ಮಾಡಿದ ಪರಿಣಾಮ ಸುನಿಲ್ ವಲ್ಯಪುರೆಗೆ ಮೇಲ್ಮನೆ ಪ್ರವೇಶಕ್ಕೆ ದಾರಿ ಸುಗಮವಾಗಿದೆ.

ಇನ್ನು ಪ್ರತಾಮ ಸಿಂಹ ನಾಯಕ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯವರಾಗಿದ್ದು, ಸಂಘ ಪರಿವಾರದ ಹಿನ್ನಲೆಯವರು. ಈ ಹಿಂದೆ ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ ಅನುಭವ ಅವರಿಗಿದೆ.

Facebook Comments

Sri Raghav

Admin