ಅಮೇರಿಕಾದಲ್ಲಿ ‘ವಿಜಯ್ ಪ್ರಕಾಶ್ ಡೇ’ ಆಚರಣೆ, ಗಾಯಕನಿಗೆ ಈ ಗೌರವ ಸಿಕ್ಕಿದ್ದೇಕೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ತಮ್ಮ ಕಂಚಿನ ಕಂಠದಿಂದಲೇ ಸಂಗೀತ ಪ್ರೇಮಿಗಳ ಮನಗೆದ್ದಿದ್ದ ಗಾಯಕ ವಿಜಯ್ ಪ್ರಕಾಶ್ ಅವರ ಹೆಸರಿನಲ್ಲಿ ಮೇ.12ನ್ನು ವಿಜಯ್ ಪ್ರಕಾಶ್ ಡೇ ಎಂದು ಆಚರಿಸಲಾಗುವುದು ಎಂದು ಉತ್ತರ ಕರೋಲಿನಾದ ಮೇಯರ್ ಘೋಷಿಸಿದ್ದಾರೆ. ಈ ವಿಷಯವನ್ನು ಗಾಯಕ ವಿಜಯ ಪ್ರಕಾಶ್ ಮೊನ್ನೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಹೇಳಿಕೊಂಡರು.

ಕಳೆದ ಮೇ 12ರಂದು ಅಮೆರಿಕದ ಉತ್ತರ ಕರೊಲಿನಾದ ಷಾರ್ಲೆಟ್ ನಗರದಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಹಾಡಿದ ವಿಜಯ್‍ಪ್ರಕಾಶ್ ಅಲ್ಲಿನ ಸಂಗೀತ ಪ್ರೇಮಿಗಳನ್ನು ರಂಜಿಸಿದ್ದರು. ಅಪಾರ ಸಂಖ್ಯೆಯ ಅನಿವಾಸಿ ಭಾರತೀಯರಲ್ಲದೆ ಅಮೆರಿಕನ್ನರೂ ಕೂಡ ಆಗಮಿಸಿದ್ದ ಅಲ್ಲಿನ ಮೇಯರ್ ವಿಲಿಯಮ್ ಸಿ ಡಶ್ ಕೂಡ ಭಾಗವಹಿಸಿದ್ದರು.

ವಿಜಯ್‍ಪ್ರಕಾಶ್ ಹಾಡಿದ ಒಪನ್ ದಿ ಬಾಟಲ್ ಹಾಗೂ ಏತಕೆ ಹೀಗೆ ಗೀತೆಗಳನ್ನು ಕೇಳಿದ ಪ್ರೇಕ್ಷಕರು ಕುಣಿದು ಕುಪ್ಪಳಿಸುತ್ತಿರುವ ದೃಶ್ಯವನ್ನು ಆ ಮೇಯರ್ ವೀಕ್ಷಿಸಿದ್ದರು. ಗಾಯಕ ವಿಜಯ ಪ್ರಕಾಶ್ ಅವರ ಆ ಕಂಠಸಿರಿಗೆ ಮಾರುಹೋದ ಅಲ್ಲಿನ ಚುನಾಯಿತ ಪ್ರತಿನಿಧಿ ವಿಲಿಯಮ್, ವಿಜಯ್ ಪ್ರಕಾಶ್ ಅವರ ಬಗ್ಗೆ ಹಾಗೂ ಅವರ ಸಂಗೀತ ಸಾಧನೆಯ ಬಗ್ಗೆ ತಿಳಿದುಕೊಂಡಿದ್ದಾರೆ.

ಷಾರ್ಲೆಟ್ ನಗರವನ್ನೇ ಸಂಗೀತದ ಅಲೆಯಲ್ಲಿ ತೇಲಿಸಿದ್ದ ವಿಜಯ್ ಪ್ರಕಾಶ್ ಅವರಿಗೆ ಆ ದಿನವನ್ನು ಮೀಸಲಿಡಲು ಸ್ಥಳೀಯ ಆಡಳಿತ ಮಂಡಳಿಯ ಜೊತೆ ಮೇಯರ್ ವಿಲಿಯಂ ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದಾರೆ.

ಇದೀಗ 2019ರ ಮೇ 12 ವಿಜಯ್ ಪ್ರಕಾಶ್ ಡೇ ಎಂದು ಷಾರ್ಲೆಟ್ ನಗರದ ಸರ್ಕಾರಿ ದಾಖಲೆಯಲ್ಲಿ ನಮೂದಿಸಲಾಗಿದೆ. ಪ್ರತಿವರ್ಷ ಈ ದಿನವನ್ನು ವಿಜಯಪ್ರಕಾಶ್ ಡೇ ಎಂದು ಆಚರಿಸಲು ನಾರ್ತ್  ಕರೊಲಿನಾದ ಷಾರ್ಲೆಟ್ ನಗರದ ಆಡಳಿತ ಮಂಡಳಿ ಅಧಿಕೃತ ಪ್ರಕಟಣೆ ಹೊರಡಿಸಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ