ರೆಡ್ಡಿಗಳ ಕೋಟೆ ಬಳ್ಳಾರಿ ವಿಭಜನೆಗೆ ಸಿಎಂ ಬಿಎಸ್‌ವೈ ತಯಾರಿ, ಬಜೆಟ್‍ನಲ್ಲಿ 31ನೇ ಜಿಲ್ಲೆ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.24-ಗಣಿ ರೆಡ್ಡಿಗಳ ವಿರುದ್ಧವೇ ಬಳ್ಳಾರಿ ಜಿಲ್ಲೆಯನ್ನು ವಿಭಜಿಸುವ ಮತ್ತು ಸಾಂಸ್ಕೃತಿಕ ನಗರಿ ಮೈಸೂರನ್ನು ವಿಭಜಿಸದೇ ಹಾಗೆ ಉಳಿಸಿಕೊಳ್ಳುವ ಮಹತ್ವದ ನಿರ್ಧಾರ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಮೂಲಕ ರಾಜ್ಯದ 31ನೇ ನೂತನ ಜಿಲ್ಲೆಯಾಗಿ ವಿಜಯನಗರವನ್ನು ಮಾರ್ಚ್ 5ರಂದು ಮಂಡನೆಯಾಗಲಿರುವ ಬಜೆಟ್‍ನಲ್ಲಿ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕೃತವಾಗಿ ಘೋಷಣೆ ಮಾಡುವರು.

ಮೈಸೂರು ಜಿಲ್ಲೆ ವಿಭಜಿಸಿ, ಹುಣಸೂರನ್ನು ಪ್ರತ್ಯೇಕವಾಗಿ ಜಿಲ್ಲೆ ಮಾಡುವಂತೆ ಕೂಗು ಬಂದಿದ್ದಲ್ಲದೆ, ಅದರ ಬಗ್ಗೆ ಪರಿಶೀಲಿಸಿ, ವರದಿ ತರಿಸಿಕೊಳ್ಳುವುದಾಗಿಯು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದರು.  ಅನರ್ಹ ಶಾಸಕ ಎಚ್.ವಿಶ್ವನಾಥ್ ತಾವು ಪ್ರತನಿಧಿಸುತ್ತಿದ್ದ, ವಾಣಿಜ್ಯ ಕೇಂದ್ರವಾದ ಹುಣಸೂರನ್ನು ಜಿಲ್ಲೆಯನ್ನಾಗಿ ಪರಿವರ್ತಿಸಲು ಮುಖ್ಯಮಂತ್ರಿಗೆ ಮನವಿ ಮಾಡಿದ್ದರಲ್ಲದೆ, ಯಾವ ಕಾರಣಕ್ಕೆ ಮೈಸೂರು ವಿಭಜನೆಯಾಗಬೇಕೆಂದು ಮನವರಿಕೆ ಮಾಡಿಕೊಟ್ಟಿದ್ದರು.

ವಿಶ್ವನಾಥ್ ನಿಲುವಿಗೆ ಇಡೀ ಜಿಲ್ಲಾಧ್ಯಂತ ವಿರೋಧ ವ್ಯಕ್ತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಳ್ಳಲು ಮುಂದಾಗಲಿಲ್ಲ. ಇದೀಗ ಬಳ್ಳಾರಿ ವಿಭಜಿಸಿ, ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯಾಗಿ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.  ಬಳ್ಳಾರಿಯ ಜಿಲ್ಲಾಧಿಕಾರಿಗಳು ಹೊಸ ಜಿಲ್ಲೆ ಸ್ಥಾಪನೆಗೆ ಪೂರಕ ವರದಿ ನೀಡಿರುವುದನ್ನು ಕಂದಾಯ ಸಚಿವಾಲಯ ಸಮ್ಮತಿಸಿದ್ದು, ಜಿಲ್ಲೆಯನ್ನು ವಿಭಜಿಸಲು ಮುಖ್ಯಮಂತ್ರಿಗೆ ಶಿಫಾರಸ್ಸು ಮಾಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮುಂದಿನ ಬಜೆಟ್ ಸಂದರ್ಭದಲ್ಲಿ ಹೊಸ ಜಿಲ್ಲೆ ಮತ್ತು ಹೊಸ ತಾಲ್ಲೂಕುಗಳ ಘೋಷಣೆ ಮಾಡಲಿದ್ದಾರೆ.

ಕಾಂಗ್ರೆಸ್‍ನಲ್ಲಿದ್ದ ಆನಂದ್ ಸಿಂಗ್ ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಯಡಿಯೂರಪ್ಪನವರನ್ನು ಅಧಿಕಾರಕ್ಕೆ ತರುವ ಸಂದರ್ಭದಲ್ಲಿ ವಿಜಯನಗರವನ್ನು ಜಿಲ್ಲೆಯಾಗಿ ಮಾಡಬೇಕೆಂದು ಬೇಡಿಕೆ ಇಟ್ಟಿದ್ದರು.  ಸ್ಥಳೀಯವಾಗಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದರೂ ಆನಂದ್‍ಸಿಂಗ್‍ಗೆ ನೀಡಿದ ಭರವಸೆಯನ್ನು ಯಡಿಯೂರಪ್ಪನವರು ಈಗ ಈಡೇರಿಸುತ್ತಿದ್ದಾರೆ. ಆದರೆ ಇದೇ ಸನ್ನಿವೇಶದಲ್ಲಿ ತಮ್ಮ ಪಕ್ಷಗಳನ್ನು ತೊರೆದು, ಬಿಜೆಪಿಗೆ ಸೇರ್ಪಡೆಗೊಂಡ ವಿಶ್ವನಾಥ್ ಹಾಗೂ ರಮೇಶ್ ಜಾರಕಿಹೊಳಿ ಅವರ ಶಿಫಾರಸ್ಸಿಗೆ ಮನ್ನಣೆ ನೀಡಲಿಲ್ಲ.

ಕಾಂಗ್ರೆಸ್ ತೊರೆದು, ಬಿಜೆಪಿ ಸೇರ್ಪಡೆ ಸಂದರ್ಭದಲ್ಲಿ ರಮೇಶ್ ಕೂಡಾ ಗೋಕಾಕ್ ಜಿಲ್ಲೆಯಾಗಿ ಮಾರ್ಪಡಿಸಬೇಕೆಂದು ಮನವಿ ಮಾಡಿಕೊಂಡಿದ್ದರು. ವಿಜಯನಗರ ಜಿಲ್ಲೆ ಹೊಸದಾಗಿ ಘೋಷಣೆಯಾದರೆ ಇದರ ವ್ಯಾಪ್ತಿಗೆ ನಾಲ್ಕು ತಾಲ್ಲೂಕುಗಳು ಸೇರ್ಪಡೆಯಾಗಲಿವೆ. ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ವಿಜಯನಗರ ಹಾಗೂ ಹೂವಿನಹಡಗಲಿ ತಾಲ್ಲೂಕುಗಳನ್ನು ಒಳಗೊಳ್ಳಲಿದೆ.  ಬಳ್ಳಾರಿ ಜಿಲ್ಲೆಗೆ ಬಳ್ಳಾರಿ ನಗರ, ಬಳ್ಳಾರಿ ಗ್ರಾಮಾಂತರ, ಶಿರಗುಪ್ಪ, ಸಂಡೂರು ಹಾಗೂ ಕೂಡ್ಲಿಗಿ ತಾಲ್ಲೂಕುಗಳು ಬರಲಿವೆ.

Facebook Comments