ಶಿರಾದಲ್ಲಿ ಬಿಜೆಪಿ ಖಾತೆ ತೆರೆದ ‘ವಿಕ್ಟರಿ ವಿಜಯೇಂದ್ರ’ನ ಕಥೆ

ಈ ಸುದ್ದಿಯನ್ನು ಶೇರ್ ಮಾಡಿ

ಕರ್ನಾಟಕವೇ ಅತಿ ಕಾತುರತೆಯಿಂದ ಎದುರು ನೋಡುತ್ತಿದ್ದ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳ ಫಲಿತಾಂಶ ನಿನ್ನೆ ಹೊರಬಿದ್ದಿದೆ.  ಯಾರೂ ನಿರೀಕ್ಷೆ ಮಾಡಿರದ ರೀತಿಯಲ್ಲಿ ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಬೀಗಿದೆ. ಆರ್‍ಆರ್ ನಗರದಿಂದ ಮುನಿರತ್ನ 58,113 ಮತಗಳ ಅಂತರದಲ್ಲಿ ಸತತ ಮೂರನೆ ಬಾರಿಗೆ ಗೆಲುವು ಸಾಧಿಸಿ ಹ್ಯಾಟ್ರಿಕ್ ಎಂಎಲ್‍ಎ ಆಗಿದ್ದಾರೆ.

ಶಿರಾದಲ್ಲಿ ಡಾ.ರಾಜೇಶ್ ಗೌಡ 12,949 ಮತಗಳ ಅಂತರದಲ್ಲಿ ಎದುರಾಳಿ ಕಾಂಗ್ರೆಸ್ ನ ಟಿ.ಬಿ.ಜಯಚಂದ್ರ ಅವರನ್ನು ಮಣಿಸಿ ಶಿರಾದಲ್ಲಿ ಕಮಲ ಅರಳಿಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ರಾಜೇಶ್ ಗೌಡರಿಗೆ ರಾಜಕೀಯ ಹೊಸದಲ್ಲ. ತಂದೆ ಸಿ.ಪಿ.ಮೂಡಲಗಿರಿಯಪ್ಪಅವರು ಕಾಂಗ್ರೆಸ್ ಪಕ್ಷದಲ್ಲಿ ಮೂರು ಬಾರಿ ಸಂಸದ ಮತ್ತು ಒಂದು ಬಾರಿ ಶಾಸಕರಾಗಿ ಕೆಲಸ ಮಾಡಿದ್ದರು.

ಬಾಲ್ಯದಿಂದಲೂ ಮನೆಯಲ್ಲೇ ತಂದೆಯವರಿಂದ ರಾಜಕೀಯ ಪಟ್ಟುಗಳನ್ನು ಕಲಿತಿದ್ದ ರಾಜೇಶ್‍ಗೌಡರಿಗೆ ಮೊದಲ ಚುನಾವಣೆಯಲ್ಲೇ ಶಾಸಕರಾಗುವ ಅದೃಷ್ಟ ಒಲಿದು ಬರಲು ಮುಖ್ಯ ಕಾರಣ ಬಿ.ವೈ.ವಿಜಯೇಂದ್ರ. ರಾಜಕೀಯವೇ ಹಾಗೇ. ಅದೊಂದು ಅಧಿಕಾರದ ದಾಹ, ಪದವಿಯ ಮೋಹ, ಇಲ್ಲಿ ವಿಧುರನ ನೀತಿ ಬೇಕಿಲ್ಲ, ಕೃಷ್ಣನ ತಂತ್ರವೊಂದಿದ್ದರೆ ಸಾಕು.

ಇಲ್ಲೇನಿದ್ದರೂ ಕುರ್ಚಿ ಹಿಡಿಯುವುದೊಂದೆ ಪ್ರತಿಯೊಬ್ಬ ರಾಜಕಾರಣಿಗಳ ಮೂಲಮಂತ್ರ. ಆದ್ದರಿಂದ ರಾಜಕೀಯವೆಂದರೆ ತೆರೆಮರೆಯ ಗುದ್ದಾಟ, ಎದುರಾಳಿಗಳ ಜತೆ ಆಡುವ ಚದುರಂಗದಾಟ, ಸಮಯಕ್ಕೆ ತಕ್ಕಂತೆ ದಾಳ ಉರುಳಿಸುವ ತಂತ್ರ ಬಲ್ಲವರು ಮಾತ್ರ ಗೆಲುವಿನ ನಗೆ ಬೀರಲು ಸಾಧ್ಯ ಎಂಬುದು ರಾಜಕೀಯ ಪಂಡಿತರು ಹೇಳುವ ಅನುಭವದ ಮಾತು.

ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಇಂತಹದ್ದೇ ಒಂದು ಚದುರಂಗದಾಟ ಶುರುವಾಗಿದೆ. ತನ್ನ 40 ವರ್ಷದ ರಾಜಕಾರಣದ ಅನುಭವವನ್ನು ಧಾರೆಯೆರೆದು ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಸಿನಿಮೀಯ ರೀತಿಯಲ್ಲಿ ಕೆಡವಿ ವಿಧಾನಸೌಧದ ಮೂರನೆ ಮಹಡಿಯಲ್ಲಿ ಕುಳಿತಿರುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತಮ್ಮ ಪ್ರೀತಿಯ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ರಾಜಕೀಯದಲ್ಲಿ ದೊಡ್ಡ ಮಟ್ಟದ ನಾಯಕನನ್ನಾಗಿ ಬೆಳೆಸಬೇಕೆಂಬುದು ಅವರ ದೊಡ್ಡ ಕನಸು.

ಆದ್ದರಿಂದಲೇ 2018ರ ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರ ಅವರಿಗೆ ಮೈಸೂರಿನ ವರುಣಾ ಕ್ಷೇತ್ರದಿಂದ ಭಾಜಪದ ಟಿಕೆಟ್ ಕೊಡಿಸಲು ಬಿಎಸ್‍ವೈ ಎಷ್ಟೇ ಹೋರಾಟ ಮಾಡಿದರೂ ಅವರು ಕೊನೆಗೂ ಮಗನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಲಿಲ್ಲ. ವಿಜಯೇಂದ್ರ ಅವರಿಗೆ ಟಿಕೆಟ್ ತಪ್ಪಿಸಿದ್ದು ಸ್ವಪಕ್ಷೀಯರ ಜತೆ ಯಡಿಯೂರಪ್ಪನವರ ಜಾತಿಗೆ ಸೇರಿದ ಮೈಸೂರಿನ ಪ್ರಬಲ ಲಿಂಗಾಯತ ಸ್ವಾಮೀಜಿಯೊಬ್ಬರ ಕೈವಾಡವಿತ್ತು ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ.

ಆದರೆ, ಈ ಕಹಿ ಬೆಳವಣಿಗೆಗಳಿಂದ ನಿರಾಸೆಯಾಗದ ವಿಜಯೇಂದ್ರ ಅವರಿಗೆ ಒಂದು ಸತ್ಯ ಅರಿವಾಗಿತ್ತು. ಜಗತ್ತಿನಲ್ಲಿ ಪ್ರತಿಭೆ ಇದ್ದರೆ ಹುಲ್ಲುಕಡ್ಡಿಗೂ ಬೆಲೆ ಇದೆ. ಆದ್ದರಿಂದ ಕೇವಲ ಯಡಿಯೂರಪ್ಪನವರ ಮಗ ಎಂಬ ಹೆಸರಿನಲ್ಲಿ ರಾಜಕೀಯ ಮಾಡದೆ ನನ್ನದೇ ಸ್ವಂತ ವ್ಯಕ್ತಿತ್ವ, ವರ್ಚಸ್ಸು ಬೆಳೆಸಿಕೊಳ್ಳಬೇಕೆಂಬ ಹಠಕ್ಕೆ ಬಿದ್ದ ವಿಜಯೇಂದ್ರ ಭಾಜಪ ಪಕ್ಷದಲ್ಲಿ ತಮ್ಮದೇ ಆದ ನಿಷ್ಠಾವಂತ ಯುವಕರ ತಂಡ ಕಟ್ಟಿಕೊಂಡು ತಮ್ಮದೇ ತಂತ್ರಗಾರಿಕೆ ಬಳಸಿ ಉಪಚುನಾವಣೆಯಲ್ಲಿ ಕೆಆರ್ ಪೇಟೆ ಕ್ಷೇತ್ರದಿಂದ ನಾರಾಯಣಗೌಡರ ಪರವಾಗಿ ಪ್ರಚಾರ ಮಾಡಿ ಜನರ ಗಮನವನ್ನು ಭಾಜಪದ ಕಡೆ ಸೆಳೆದು ಕೊನೆಗೂ ಜೆಡಿಎಸ್ ಮತ್ತು ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲವನ್ನು ಅರಳಿಸಿದ್ದು ಒಂದು ರೋಚಕ ಇತಿಹಾಸ.

ಆಗಲೇ ನೋಡಿ ವಿಜಯೇಂದ್ರರವರ ವರ್ಚಸ್ಸಿಗೆ ಕಳೆ ಬಂದದ್ದು. ಭಾಜಪದ ಚಾಣಕ್ಯ ಅಮಿತ್ ಷಾ ಅವರೇ ಸ್ವತಃ ಕರೆ ಮಾಡಿ ವಿಜಯೇಂದ್ರ ಅವರನ್ನು ಡೆಲ್ಲಿಗೆ ಕರೆಸಿ ಬೆನ್ನು ತಟ್ಟಿ ಕಳಿಸಿದರು. ಚುನಾವಣೆ ಎಂದರೆ ಪ್ರಜಾಪ್ರಭುತ್ವದ ಹಬ್ಬ. ಜನ ಮತದಾನ ಮಾಡುವುದರ ಮುಖಾಂತರ ಅದನ್ನು ಆಚರಿಸಬೇಕು ಎಂಬ ಅಂಬೇಡ್ಕರ್ ಅವರ ಮಾತಿನಂತೆ ನವೆಂಬರ್ 3ರಂದು ನಡೆದ ಮತದಾನದಲ್ಲಿ ಶೇ.85ರಷ್ಟು ಜನ ಮತದಾನ ಮಾಡಿದರು. ಈಗ ಫಲಿತಾಂಶ ಹೊರ ಬಿದ್ದಿದೆ. ಮತ ಎಣಿಕೆಯ ಕೊನೆಯ ಸುತ್ತಿನವರೆಗೂ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಜಿದ್ದಾಜಿದ್ದಿನ ಹೋರಾಟ ನಡೆಯಿತು.

ಆದರೆ, ಕೊನೆ ಸುತ್ತಿನವರೆಗೂ ಭಾಜಪ ಅಭ್ಯರ್ಥಿ ರಾಜೇಶ್‍ಗೌಡ ಲೀಡ್ ಕಾಪಾಡಿಕೊಳ್ಳುವಲ್ಲಿ ವಿಜಯೇಂದ್ರ ಅವರ ಶ್ರಮ, ತಂತ್ರಗಾರಿಕೆ ಎದ್ದು ಕಾಣುತ್ತಿತ್ತು. ರಾಜೇಶ್ ಗೌಡ 76,564 ಮತಗಳನ್ನು ಪಡೆದು 12,949 ಮತಗಳ ಅಂತರದಲ್ಲಿ ಬಿಜೆಪಿ ಗೆದ್ದು ಇತಿಹಾಸ ನಿರ್ಮಿಸಿತು. ಕಾಂಗ್ರೆಸ್‍ನ ಟಿ.ಬಿ.ಜಯಚಂದ್ರ 63,150 ಮತಗಳನ್ನು ಪಡೆದರೆ, ಜೆಡಿಎಸ್ ಪಕ್ಷದ ಅಮ್ಮಾಜಮ್ಮ ಕೇವಲ 36,783 ಮತಗಳನ್ನು ಪಡೆದು ಮೂರ£ೀ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಅದೇನೇ ಇರಲಿ ಶಿರಾದಲ್ಲಿ ಭಾಜಪ ಮೊದಲ ಬಾರಿಗೆ ಖಾತೆ ತೆರೆದು ದಾಖಲೆ ಸೃಷ್ಟಿಸಿದೆ. ಇದರ ಹಿಂದೆ ಯಡಿಯೂರಪ್ಪನವರು ವಿಶೇಷ ಆಸಕ್ತಿ ವಹಿಸಿ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಸ್ಥಾಪನೆ ಚುನಾವಣೆಯಲ್ಲಿ ಕೆಲಸ ಮಾಡಿದೆ. ಜತೆಗೆ ಬಿ.ವೈ.ವಿಜಯೇಂದ್ರ ಅವರ ಶ್ರಮ, ತಂತ್ರಗಾರಿಕೆ, ಸಂಘಟನೆಯ ಚತುರತೆ ಶಿರಾ ಚುನಾವಣೆಯಲ್ಲಿ ಭಾಜಪಗೆ ಗೆಲುವು ತಂದುಕೊಟ್ಟಿದೆ.

ಈಗಾಗಲೇ ಕೇಂದ್ರದ ನಾಯಕರು ವಿಜಯೇಂದ್ರ ಅವರ ಬಗ್ಗೆ ಹಾಡಿ ಹೊಗಳುತ್ತಿದ್ದಾರೆ. ವಿಜಯೇಂದ್ರ ಒಬ್ಬ ಪ್ರಬುದ್ಧ ರಾಜಕಾರಣಿ, ಸರ್ಕಾರದ ಒಳ ಹೊರಗನ್ನು ಚೆನ್ನಾಗಿ ಅರಿತಿರುವ ಇವರು ಯಡಿಯೂರಪ್ಪನವರ ಮುಂದಿನ ಉತ್ತರಾಧಿಕಾರಿ. ತಂದೆ ಬಿಎಸ್‍ವೈ ರೀತಿಯಲ್ಲೇ ಸಂಘಟನಾ ಚತುರತೆ ಇರುವ ವಿಜಯೇಂದ್ರ ಒಮ್ಮೆ ಮಾತು ಕೊಟ್ಟರೆ ನಡೆಸಿಕೊಡುವಂತಹ ತಂದೆಗೆ ತಕ್ಕ ಮಗ. ಈಗಾಗಲೇ ಭಾಜಪದಲ್ಲಿ ತಮ್ಮದೇ ಆದ ಗಟ್ಟಿ ನೆಲೆ ಮತ್ತು ವರ್ಚಸ್ಸು ಸೃಷ್ಟಿ ಮಾಡಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಇವರದ್ದೇ ಆದ ಯುವಕರ ಪಡೆ ಇವರನ್ನು ಯೂತ್ ಐಕಾನ್ ಎಂದು ಒಪ್ಪಿಕೊಂಡಿದೆ. ವಿ ಎಂದರೆ ವಿಕ್ಟರಿ ಬರೀ ವಿಜಯೇಂದ್ರ ಅಲ್ಲ, ವಿಕ್ಟರಿ ವಿಜಯೇಂದ್ರ ಎಂಬ ಮಾತುಗಳು ಈಗ ಜನರ ಬಾಯಲ್ಲಿ ಕೇಳಿ ಬರುತ್ತಿವೆ. ಮೋದಿ, ಅಮಿತ್ ಷಾ, ಜೆ.ಪಿ.ನಡ್ಡಾ ಅವರು ವಿಜಯೇಂದ್ರ ಅವರಿಗೆ ಒಂದು ದೊಡ್ಡ ಜವಾಬ್ದಾರಿ ಕೊಡಲು ಮುಂದಾಗಿದ್ದಾರೆ ಎಂಬ ಹೊಸ ಸುದ್ದಿ ಹರಿದಾಡುತ್ತಿದೆ.

ಅದಕ್ಕೇ ಹೇಳಿದ್ದು ಪ್ರತಿಭೆ ಇದ್ದರೆ ಒಂದು ಹುಲ್ಲು ಕಡ್ಡಿಗೂ ಬೆಲೆ ಇದೆ. ಅದನ್ನು ಸಾಬೀತು ಮಾಡುವವರೆಗೂ ಕಾಯಬೇಕಷ್ಟೇ. ಅದೇ ರಾಜಕೀಯದ ಯಶಸ್ಸಿನ ಗುಟ್ಟು.

#ಮಹಾಂತೇಶ್ ಬ್ರಹ್ಮ
E-mail:-MahantheshBrahma@gmail.com

Facebook Comments